ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮದ್ಯಪಾನ ಸೇವನೆ, ಡ್ರಗ್ಸ್ ಸೇರಿದಂತೆ ಇನ್ನಿತರ ದುರಭ್ಯಾಸಗಳು ಸಮಾಜಕ್ಕೆ ಮಾರಕವಾಗಿವೆ. ಕುತೂಹಲಕ್ಕಾಗಿ ಮೊದಲು ಸೇವನೆ ಮಾಡಿ ನಂತರ ಅವುಗಳ ದಾಸರಾಗುತ್ತಾರೆ. ಮಾದಕ ವಸ್ತುಗಳ ಸೇವನೆ ಮಾಡುತ್ತಿರುವವರನ್ನು ಅದರಿಂದ ದಾಸಮುಕ್ತರಾಗಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಸಭೆ ನಡೆಸಿ ಮಾತನಾಡಿ, ಮದ್ಯಪಾನ, ಧೂಮಪಾನ, ಡ್ರಗ್ಸ್, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಿಯಲ್ಲಿ ಹೆಚ್ಚು ಜಾಗೃತಿ ಮೂಡಿಸುವಂತೆ ಸೂಚಿಸಿದರು.
ದುಶ್ಚಟಗಳಿಗೆ ಒಳಗಾಗಿರುವ ವ್ಯಕ್ತಿಯಿಂದ ಅವರ ಮಕ್ಕಳು ಹಾಗೂ ಕುಟುಂಬದ ಮೇಲೂ ಬಹಳ ಪರಿಣಾಮ ಬೀರುತ್ತದೆ. ಆದ್ದರಿಂದ ಅಂತಹ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ತಿಳಿಸಿ ಅವರ ಮನವೊಲಿಸುವ ಪ್ರಯತ್ನ ಮಾಡಬೇಕು ಎಂದರು.ಯಾವುದೋ ಒತ್ತಡ, ಕೌಟುಂಬಿಕ ಸಮಸ್ಯೆಯಿಂದ ವ್ಯಕ್ತಿಗಳು ಚಟಗಳಿಗೆ ದಾಸರಾಗಿರುತ್ತಾರೆ. ದುಶ್ಚಟಗಳಿಗೆ ಒಳಗಾಗಿರುವವರನ್ನು ವ್ಯಸನ ಮುಕ್ತ ಸಮಾಜದಲ್ಲಿ ಮಾದರಿ ವ್ಯಕ್ತಿಯನ್ನಾಗಿ ಜೀವಿಸಲು ಪ್ರೇರೆಪಿಸಬೇಕು. ಜಿಲ್ಲಾ ಮಟ್ಟದ ನಶಾ ಮುಕ್ತ ಭಾರತ ಅಭಿಯಾನ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದ್ದು, ಕ್ರಿಯಾಶೀಲರಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವವವರನ್ನು ನೇಮಿಸುವಂತೆ ತಿಳಿಸಿದರು.
ಕುಡಿತದಿಂದ ಉಂಟಾಗುವ ತೊಂದರೆ ಹಾಗೂ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಶಾಲೆಯ ಮಕ್ಕಳಿಗೆ ತಿಳಿಸಬೇಕು. ಒಂದು ವೇಳೆ ಶಾಲಾ ಮಕ್ಕಳ ತಂದೆಯರು ಕುಡಿತಕ್ಕೆ ಬಲಿಯಾಗಿದ್ದರೆ ಅವರಿಗೆ ತಮ್ಮ ಮಕ್ಕಳ ಕೈಯಿಂದ ಪತ್ರ ಬರೆಸಿ ಆ ಮೂಲಕ ಅವರ ತಂದೆಯರಿಗೆ ತಿಳುವಳಿಕೆ ಮೂಡಿಸಬಹುದು ಎಂದು ಹೇಳಿದರು.ಜಿಲ್ಲಾ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್ ಮಾತನಾಡಿ, ಮದ್ಯಪಾನಕ್ಕೆ ದಾಸರಾಗಿ ರುವವರಿಗೆ ಈಗಾಗಲೇ ಕುಡಿತದ ಚಟ ಬಿಡಿಸುವ ಶಿಬಿರ ಆಯೋಜಿಸಲಾಗುತ್ತಿದೆ. ಶಿಬಿರದಲ್ಲಿ ಮದ್ಯಪಾನ ತ್ಯಜಿಸಿದವರನ್ನು ಸನ್ಮಾನಿಸುವ ಕೆಲಸವಾಗುತ್ತಿದೆ. ಇದರಿಂದ ಉಳಿದಿರುವ ಮದ್ಯಪಾನ ವ್ಯಸನಿಗಳ ಮನಸ್ಸನ್ನು ಬದಲಾಯಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಆನಂದ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್. ರಾಜಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್. ಶಿವರಾಮೇಗೌಡ, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್ ಇತರರಿದ್ದರು.