ಕಿಮ್ಸ್‌ನಲ್ಲಿ ಮಂಜೂರಾತಿಯಿಲ್ಲದೇ ಸೇವೆ ಸಲ್ಲಿಸುತ್ತಿರುವ ಮಾಜಿ ಉದ್ಯೋಗಿ

| Published : Mar 27 2024, 01:08 AM IST

ಕಿಮ್ಸ್‌ನಲ್ಲಿ ಮಂಜೂರಾತಿಯಿಲ್ಲದೇ ಸೇವೆ ಸಲ್ಲಿಸುತ್ತಿರುವ ಮಾಜಿ ಉದ್ಯೋಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕಿಮ್ಸ್‌ನ ಪಿಡಬ್ಲ್ಯುಡಿ ವಿಭಾಗದಲ್ಲಿ ಮಂಜೂರಾತಿ ಇಲ್ಲದ ಹುದ್ದೆಯಲ್ಲಿ ಮಾಜಿ ಉದ್ಯೋಗಿಯೊಬ್ಬರು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹುಬ್ಬಳ್ಳಿ:

ಇಲ್ಲಿನ ಕಿಮ್ಸ್‌ನ ಪಿಡಬ್ಲ್ಯುಡಿ ವಿಭಾಗದಲ್ಲಿ ಮಂಜೂರಾತಿ ಇಲ್ಲದ ಹುದ್ದೆಯಲ್ಲಿ ಮಾಜಿ ಉದ್ಯೋಗಿಯೊಬ್ಬರು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಟೆಂಡರ್‌ ಪ್ರಕ್ರಿಯೆ ನಿರ್ವಹಿಸುತ್ತಿರುವ ಸಂಗತಿಯು ಪ್ರಗತಿ ಪರಿಶೀಲನೆ ಸಭೆಯಲ್ಲಿ ಬೆಳಕಿಗೆ ಬಂದಿದೆ.

ಪರಿಸರ ಅಭಿಯಂತರ, ಬಯೋ ಮೆಡಿಕಲ್‌ ಎಂಬ ಹುದ್ದೆಯಲ್ಲಿ ಕಾಂಚನಾ ಮಾಲಗಾರ ಎಂಬುವವರು ಅನಧಿಕೃತ ಕೆಲಸ ಮಾಡುತ್ತಿರುವ ಮಾಜಿ ಉದ್ಯೋಗಿ. ಇವರನ್ನು 2024ರ ಜನವರಿ 20ರಿಂದ ಕೆಲಸದಿಂದ ಬಿಡುಗಡೆಗೊಳಿಸಿ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಆದೇಶಿಸಿದ್ದಾರೆ. ವಿಚಿತ್ರ ಎಂದರೆ, ಇವರು ಕ್ಯಾಂಪಸ್‌ ವಿಸ್ತರಣಾಧಿಕಾರಿ ಜತೆ ಪ್ರತಿದಿನವೂ ಡೈರಕ್ಟರ್‌ ಮತ್ತು ಸಿಎಒ ಕಚೇರಿಯಲ್ಲಿ ಟೆಂಡರ್‌ ಕಡತಗಳೊಂದಿಗೆ ಹಾಜರಿರುತ್ತಾರೆ ಎಂದು ಕಿಮ್ಸ್‌ನ ಮೂಲಗಳು ತಿಳಿಸುತ್ತವೆ.

ರಾಜ್ಯ ಅರ್ಥಿಕ ಇಲಾಖೆ ಕಾರ್ಯದರ್ಶಿ ಆರ್‌. ವಿಶಾಲ ನೇತೃತ್ವದಲ್ಲಿ ಕಿಮ್ಸ್‌ನಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಮತ್ತು ವಾರ್ಡ್‌ಗಳ ಪರಿವೀಕ್ಷಣೆಯಲ್ಲೂ ಪಾಲ್ಗೊಂಡಿದ್ದು ವಿಡಿಯೋ ದೃಶ್ಯಗಳಲ್ಲಿ ಸ್ಪಷ್ಟವಾಗಿವೆ. ನಿರ್ದೇಶಕ ಕಚೇರಿಯಲ್ಲಿ ಮಧ್ಯಾಹ್ನ ನಡೆದ ಎಚ್‌ಒಡಿಗಳ ಸಭೆಯಲ್ಲೂ ಕಾಂಚನಾ ಮಾಲಗಾರ ಅನಧಿಕೃತವಾಗಿ ಪಾಲ್ಗೊಂಡಿದ್ದರು. ಈ ವಿಷಯ ತಿಳಿದು ಮಾಧ್ಯಮದವರು ಕಿಮ್ಸ್‌ಗೆ ಧಾವಿಸುತ್ತಿದ್ದಂತೆ ಮೀಟಿಂಗ್‌ ಹಾಲ್‌ನಿಂದ ಹೊರಹೋದರು.

ಕಿಮ್ಸ್‌ನಲ್ಲಿ ಪರಿಸರ ಅಭಿಯಂತರ ಹುದ್ದೆ ಮಂಜೂರಾತಿ ಇಲ್ಲದಿದ್ದರೂ 16ರ ಅಕ್ಟೋಬರ್‌ 2023ರಂದು ಕಾಂಚನಾ ಮಾಲಗಾರ ಅವರನ್ನು ಅನಧಿಕೃತವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ಗುತ್ತಿಗೆ ನವೀಕರಿಸುವಂತೆ ಕಾಂಚನಾ ಅವರು ಕಿಮ್ಸ್‌ಗೆ ಮನವಿ ಸಲ್ಲಿಸಿದ್ದರು. ಆದರೆ, ಈ ವಿಷಯವನ್ನು 12ರ ಡಿಸೆಂಬರ್‌ 2023ರಂದು ನಡೆದ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯ ಆಡಳಿತ ಮಡಳಿ (ಕೌನ್ಸಿಲ್‌) ಸಭೆಯಲ್ಲಿ ಮಂಡಿಸಲಾಗಿತ್ತು. ಪರಾಮರ್ಶೆ ಮಾಡಿದಾಗ ಹುದ್ದೆ ಮಂಜೂರಾತಿ ಇಲ್ಲ. ಅಲ್ಲದೇ ಈ ಬಗ್ಗೆ ಪ್ರಸ್ತಾವನೆಯೂ ಇಲ್ಲ ಎಂದು ಪ್ರಸ್ತಾವನೆ ತಿರಸ್ಕರಿಸಲಾಗಿತ್ತು. ಗುತ್ತಿಗೆ ಅವಧಿಯು ಜ.20ರಂದು ಮುಗಿದಿದ್ದು, ಅಂದಿನಿಂದ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ನಿರ್ದೇಶಕರು ಜ. 24, 2024ರಂದು ಆದೇಶ ಹೊರಡಿಸಿದ್ದಾರೆ.

ಕಾಂಚನಾ ಮೇಲಧಿಕಾರಿಗಳ ಮೇಲೆ ಪ್ರಭಾವ ಬೀರಿ ನಿತ್ಯವೂ ಪಿಡಬ್ಲ್ಯುಡಿ ವಿಭಾಗದಲ್ಲಿ ನಿರ್ಭಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಅವರು ಟೆಂಡರ್‌ನ ಪ್ರಕ್ರಿಯೆಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳುವ ಕಿಮ್ಸ್‌ ಅಧಿಕಾರಿಗಳು, ಕಾಂಚನಾ ಅವರನ್ನು ಬಿಡುಗಡೆಗೊಳಿಸಿದ್ದು ಎಸ್ಟೇಟ್‌ ಅಧಿಕಾರಿಗೆ ಗೊತ್ತಿದ್ದು, ನಿರ್ದೇಶಕರ ಗಮನಕ್ಕೆ ಏಕೆ ತಂದಿಲ್ಲ ಎಂದು ಕೇಳುತ್ತಿದ್ದಾರೆ.ಕಿಮ್ಸ್ ಅಭಿವೃದ್ಧಿ ಕುರಿತು ಆಡಳಿತ ಮಂಡಳಿ ಜತೆ ಸಭೆ ನಡೆಸಿದ್ದೇನೆ. ಇಲ್ಲಿ ನಡೆದಿದೆ ಎನ್ನುವ ಅವ್ಯವಹಾರದ ಕುರಿತು ಕಿಮ್ಲ್‌ನ ನಿರ್ದೇಶಕರನ್ನೇ ಕೇಳಿ ಎಂದು ರಾಜ್ಯ ಹಣಕಾಸು ಇಲಾಖೆಯ ಉಪಕಾರ್ಯದರ್ಶಿ ಆರ್‌. ವಿಶಾಲ ಹೇಳಿದರು.ನಮ್ಮಲ್ಲಿ ಯಾರೂ ಅನಧಿಕೃತವಾಗಿ ಕೆಲಸ ಮಾಡುತ್ತಿಲ್ಲ. ಹಾಗೊಂದು ವೇಳೆ ಕೆಲಸ ಮಾಡುತ್ತಿದ್ದರೆ ಪರಿಶೀಲಿಸುತ್ತೇವೆ. ತುಂಡು ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪದ ತನಿಖೆಗೆ ಸಮಿತಿ ರಚಿಸಲಾಗಿದೆ. ಅನಧಿಕೃತ ಕೆಲಸ ಮಾಡುವವರ ಬಗ್ಗೆ ತಿಳಿದುಕೊಂಡು 24 ಗಂಟೆಯಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ಕಿಮ್ಸ್‌ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಹೇಳಿದರು.