ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್‌ ಕಾಂಗ್ರೆಸ್‌ ಸೇರ್ಪಡೆ?

| Published : Apr 17 2024, 01:18 AM IST

ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್‌ ಕಾಂಗ್ರೆಸ್‌ ಸೇರ್ಪಡೆ?
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸೇರ್ಪಡೆ ಆಗಬೇಕಾ ಅಥಾವಾ ಬಿಜೆಪಿಯಲ್ಲೆ ಇರಬೇಕಾ? ಎನ್ನುವ ಬಗ್ಗೆ ಬೆಂಬಲಿಗರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ನೀವು ಯಾವುದೇ ನಡೆ ಕೈಗೊಂಡರೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಅಭಿಮಾನಿ, ಬೆಂಬಲಿಗರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ತಮ್ಮ ಕಿರಿಯ ಸಹೋದರ ನಿತೀನ್‌ ಗುತ್ತೇದಾರ್‌ ಭಾರತೀಯ ಜನತಾ ಪಕ್ಷ ಸೇರಿ ಜಿಲ್ಲೆಯಲ್ಲಿ ನಡೆದಿರುವ ಮಹತ್ವದ ರಾಜಕೀಯ ಬೆಳವಣಿಗೆಯ ನಂತರ ತೀವ್ರ ವಿಚಲಿತರಾಗಿರುವ ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್‌ ತಾವಿರುವ ಬಿಜೆಪಿ ತೊರೆಯೋದು ಬಹುತೇಕ ಖಚಿತವಾಗಿದೆ.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡೆಕಿ ಶಿವಕುಮಾರ್‌ ಅವರನ್ನು ಭೇಟಿಯಾಗಿರುವ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸಹೋದರ ನಿತೀನ್‌ ಗುತ್ತೇದಾರರನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಬೇಸರಗೊಂಡಿರೋದಂತೂ ಸ್ಪಷ್ಟ.

ಕಾಂಗ್ರೆಸ್ ಸೇರ್ಪಡೆ ಆಗಬೇಕಾ ಅಥಾವಾ ಬಿಜೆಪಿಯಲ್ಲೆ ಇರಬೇಕಾ? ಎನ್ನುವ ಬಗ್ಗೆ ಬೆಂಬಲಿಗರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ನೀವು ಯಾವುದೇ ನಡೆ ಕೈಗೊಂಡರೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಅಭಿಮಾನಿ, ಬೆಂಬಲಿಗರು ಹೇಳಿದ್ದಾರೆ.

ಹಿತೈಷಿಗಳ ಸಭೆಯ ನಂತರ ಸುದ್ದಿಗಾರರೊಂದಿಗ ಮಾತನಾಡಿರುವ ಗುತ್ತೇದಾರ್‌, ಅಭಿಪ್ರಾಯ ಸಂಗ್ರಹಿಸಿದ್ದೇನೆ, ಇನ್ನೆರಡು ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವೆ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ನಡೆ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ.

ಬಿಜೆಪಿಗೆ ಗುತ್ತೇದಾರ್‌ ನಾಟ್‌ ರಿಚೇಬಲ್‌: ಈಗಾಗಲೇ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರು ಗುತ್ತೇದಾರ್ ಅವರ ಮುನಿಸು ಶಮನ ಮಾಡಲು ನಿರಂತರ ದೂರವಾಣಿ ಮುಖಾಂತರ ಯತ್ನಿಸುತ್ತಿದ್ದರೂ ಕೂಡಾ ಬಿಜೆಪಿಗೆ ಗುತ್ತೇದಾರ್‌ ನಾಟ್‌ ರೀಚೇಬಲ್‌ ಆಗಿದ್ದರು. ಇಂದು ಹಿತೈಷಿಗಳ ಸಭೆಯಲ್ಲಿ ಪ್ರತ್ಯಕ್ಷರಾಗಿ ರಾಜಕೀಯವಾಗಿ ಗುಡುಗುವ ಮೂಲಕ ಗಮನ ಸೆಳೆದಿದ್ದಾರೆ.

ಇನ್ನೆರಡು ದಿನಗಳಲ್ಲಿ ತೀರ್ಮಾನ ಪ್ರಕಟ: ಇಲ್ಲಿನ ಎಸ್ಬಿ ಫಂಕ್ಷನ್ ಹಾಲ್‌ನಲ್ಲಿ ನಡೆದ ಅಭಿಮಾನಿಗಳು, ಹಿತೈಷಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಗುತ್ತೇದಾರ್‌ ತಮ್ಮ ರಾಕೀಯ ಏಳು- ಬೀಳುಗಳ ಬಗ್ಗೆ ವಿವರಿಸುತ್ತ ಎಂದೂ ತಾವು ಸ್ವಾಭಿಮಾನಕ್ಕೆ ಪೆಟ್ಟು ಬಂದಾಗ ಸುಮ್ಮನಿದ್ದವರಲ್ಲವೆಂದರು. ಈ ಮಾತಿನ ಹಿನ್ನೆಲೆಯಲ್ಲೇ , ಏ.22ರಂದು ಅಫಜಲ್ಪುರ ಕಾಂಗ್ರೆಸ್‌ ಸಮಾವೇಶದಲ್ಲಿ ಸಿದ್ದರಾಮಯ್ಯ, ಡಿಕೆಶಿ ಸಮ್ಮುಖದಲ್ಲಿ ಗುತ್ತೇದಾರ್‌ ಕೈ ಹಿಡಿಯೋ ಸಂಭವ ದಟ್ಟವಾಗಿವೆ.

ನನ್ನ ಪಾಲಿಗೆ ಸಹೋದರ ನಿತೀನ್‌ ಧುರ್ಯೋಧನನಾದ: ಹಿತೈಷಿಗಳು ಹಾಗೂ ಅಭಿಮಾನಿಗಳು ಸೇರಿದ್ದ ಸಭೆಯಲ್ಲಿ ಮಾತನಾಡಿದ ಗುತ್ತೇದಾರ್‌, ನನ್ನ ಪಾಲಿಗೆ ನನ್ನ ಸಹೋದರ ಲಕ್ಷ್ಮಣ ಆಗಿಲ್ಲ, ಆದರೆ ನನ್ನ ಪಾಲಿಗೆ ನಿತೀನ್ ದುರ್ಯೋಧನ ಆದ. ಅಸೆಂಬ್ಲಿಯಲ್ಲಿ ಪಕ್ಷೇತರನಾಗಿ ನನ್ನ ವಿರುದ್ಧವೇ ಕಣಕ್ಕಿಳಿದು ಮತ ವಿಭಜನೆಗೆ ಕಾರಣನಾದ. ಇದಾದ ನಂತರ ಈಗ ನಾನಿರುವ ಬಿಜಿಪಿಗೆ ಬಂದಿದ್ದಾನೆಂದು ಗುತ್ತೇದಾರ್ ರಾಜಕೀಯವಾಗಿ ನಡೆದಂತಹ ಹಲವು ಬೆಳವಣಿಗೆಗಳ ಬಗ್ಗೆ ನೇರವಾಗಿ ಪ್ರಸ್ತಾಪಿಸಿ ಗಮನ ಸೆಳೆದರು.

ಚಿಕ್ಕಪ್ಪ ನಿತೀನ್‌ಗೆ ರಿತೀಷ ಮಾತಿನಲ್ಲೇ ಟಕ್ಕರ್‌: ಬೆಂಬಲಿಗರ ಸಭೆಯಲ್ಲಿದ್ದು ಮಾತನಾಡಿರುವ ಮಾಲೀಕಯ್ಯ ಗುತ್ತೇದಾರ ಮಗ ರಿತೀಷ ಗುತ್ತೇದಾರ್‌ ಸಭೆಯಲ್ಲಿ ಚಿಕ್ಕಪ್ಪ ನಿತಿನ್ ಗುತ್ತೇದಾರಗೆ ನೇರವಾಗಿ ಟಕ್ಕರ್‌ ನೀಡಿದರು. ನಮ್ಮ ತಂದೆ ಮಾಲೀಕಯ್ಯ ಗುತ್ತೇದಾರ ಶ್ರೀರಾಮನಂತೆ ಸಹೋದರರಿಗಾಗಿ ಶ್ರಮಿಸಿದ್ದಾರೆ, ಆದ್ರೆ ನಮ್ಮ ಚಿಕ್ಕಪ್ಪ ನಿತಿನ್ ಗುತ್ತೇದಾರ ನಮ್ಮ ತಂದೆಯವರಿಗೆ ಬಹಳ ನೋವು ಕೊಟ್ಟಿದ್ದಾರೆ, ಈ ಭಾವನಾತ್ಮಕ ಕ್ಷಣದಲ್ಲಿ ನೀವೆಲ್ಲಾ ಬಹಳ ಭಾವುಕರಾಗಿದ್ದಿರಿ. ನಾನೂ ಭಾವುಕನಾಗಿದ್ದೇನೆ.

ನಾನು ಯಾವುದೇ ಕಾರಣಕ್ಕೂ ಕಣ್ಣೀರು ಹಾಕಲ್ಲ. ಯಾಕಂದ್ರೆ ನಾನು ಸಿಂಹದ ಮರಿ ಕಣ್ರಿ, ನಾನು ಕಣ್ಣಿರು ಹಾಕಲ್ಲ. ಎದುರಿನವರಿಗೆ ಕಣ್ಣಿರು ಹಾಕಿಸುವುದು ಗ್ಯಾರಂಟಿ ಎಂದರು. ಹೀಗೆ ಸಭೆಯಲ್ಲಿ ಮಾತನಾಡುವ ಮೂಲಕ ಪರೋಕ್ಷವಾಗಿ ಚಿಕ್ಕಪ್ಪ ನಿತಿನ್ ಗುತ್ತೇದಾರಗೆ ಮಾಲೀಕಯ್ಯ ಗುತ್ತೇದಾರ ಪುತ್ರ ರಿತೀಷ ಗುತ್ತೇದಾರ ನೇರಾನೇರ ಸವಾಲು ಹಾಕಿದರು. ಮುಖಂಡರಾದ ಮಣ್ಣೂರಿನ ಗುರುಬಾಳ ಜಕಾಪೂರ್‌, ಅರುಣ ಪಾಟೀಲ್‌ ಕೋಡ್ಲಹಂಗರ್ಗಾ, ಅಫಜಲ್ಪುರ ಕ್ಷೇತ್ರದ ಅನೇಕ ಮುಖಂಡರು ಸಭೆಯಲ್ಲಿದ್ದರು.