ಮಾಜಿ ಸಚಿವ ರಾಜೂಗೌಡಗೆ ಪಕ್ಷಾಂತರಿಗಳ ಬ್ಲಾಕ್‌ಮೇಲ್‌

| Published : Apr 03 2024, 01:31 AM IST

ಸಾರಾಂಶ

ಲೋಕಸಭೆ ಸಾರ್ವತ್ರಿಕ ಚುನಾವಣೆಯ ಜೊತೆ ಜೊತೆಗೆ, ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯೂ ಘೋಷಣೆಯಾದ ಹಿನ್ನೆಲೆಯಲ್ಲಿ, ಸುರಪುರ ಅಖಾಡಾದಲ್ಲಿ ಚುನಾವಣಾ ಕಾವೇರಿದೆ. ಹಾಗೆಯೇ, ಅಲ್ಲಿಂದಿಲ್ಲಿಗೆ- ಇಲ್ಲಿಂದಲ್ಲಿಗೆ ಪಕ್ಷಾಂತರ ಪರ್ವವೂ ಜೋರಾಗಿಯೇ ನಡೆದಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಲೋಕಸಭೆ ಸಾರ್ವತ್ರಿಕ ಚುನಾವಣೆಯ ಜೊತೆ ಜೊತೆಗೆ, ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯೂ ಘೋಷಣೆಯಾದ ಹಿನ್ನೆಲೆಯಲ್ಲಿ, ಸುರಪುರ ಅಖಾಡಾದಲ್ಲಿ ಚುನಾವಣಾ ಕಾವೇರಿದೆ. ಹಾಗೆಯೇ, ಅಲ್ಲಿಂದಿಲ್ಲಿಗೆ- ಇಲ್ಲಿಂದಲ್ಲಿಗೆ ಪಕ್ಷಾಂತರ ಪರ್ವವೂ ಜೋರಾಗಿಯೇ ನಡೆದಿದೆ.

ಈ ಮಧ್ಯೆ, ಪಕ್ಷಾಂತರಿಗಳು ತಮಗೆ ಲಕ್ಷಾಂತರ ರುಪಾಯಿಗಳ ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡಿದ್ದರು, ಬಿಜೆಪಿ ಪಕ್ಷ ಬಿಡದೆ ಇರಬೇಕೆಂದರೆ ಲಕ್ಷಾಂತರ ರುಪಾಯಿಗಳ ಹಣ ಕೊಟ್ಟರೆ ತಮ್ಮ (ರಾಜೂಗೌಡ) ಜೊತೆ ಇರುವುದಾಗಿ ಮೆಸೇಜ್‌ ಮಾಡಿದ್ದರು ಎಂದು ಮಾಜಿ ಸಚಿವ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ್‌ (ರಾಜೂಗೌಡ) ಗಂಭೀರವಾಗಿ ಆರೋಪಿಸಿದ್ದಾರೆ.

ಹುಣಸಗಿ ಮಂಡಲದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಈ ಚುನಾವಣೆಯಲ್ಲಿ ನನ್ನನ್ನು ಬಹಳಷ್ಟು ಬ್ಲಾಕ್‌ಮೇಲ್‌ ಮಾಡಲು ನೋಡಿದ್ದರು. ಕೆಲವು ಜನ ಇಷ್ಟು ಲಕ್ಷ ದುಡ್ಡು ಕೊಟ್ಟರೆ ಪಕ್ಷದಲ್ಲಿರುತ್ತೇನೆ ಎಂದು ನನಗೆ ಮೆಸೇಜ್‌ ಮಾಡಿದ್ದಾರೆ. ಅಂತಹವರಿಗೆ ಪಕ್ಷ ಬಿಡುವಂತೆ ಕೈಮಗಿದು ಹೇಳಿದ್ದೇನೆ, ಬಿಟ್ಟು ಹೋದರೆ ನಾನೇ ಶಾಲು ಹಾರ ಹಾಕಿ ಸನ್ಮಾನ ಮಾಡಿ ಬೀಳ್ಕೊಡುಗೆ ನೀಡುವೆ ಎಂದಿದ್ದೇನೆಂದರು. ಪ್ರೀತಿ-ವಿಶ್ವಾಸಕ್ಕೆ ಜನರ ಬರುತ್ತಾರೋ ಅಥವಾ ದುಡ್ಡಿಗೆ ಬರುತ್ತಾರೋ ಅನ್ನೋದನ್ನ ನೋಡೋಣ ಎಂದರು.

ಯಾರು ನನ್ನನ್ನು ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡಿದ್ದಾರೋ ಅವರಿಗೆ ಫೋನ್‌ ಮಾಡಿ ಹೇಳಿದ್ದೇನೆ, ಇಲ್ಲಿಯೂ ವೇದಿಕೆಯ ಮೇಲೆ ಕೈಮುಗಿದು ಹೇಳುವೆ, ನಮ್ಮನ್ನು ಹಾಗೂ ಬಿಜೆಪಿಯನ್ನು ಬಿಟ್ಟು ಹೋಗಿಬಿಡಿ. ಹಾರ ಶಾಲು ಹಾಕಿಸುವೆ, ಇಷ್ಟು ದಿನ ಜೀವ ಹಿಂಡಿದ್ದೀರಿ, ಈಗ ಮತ್ತೆ ಚುನಾವಣೆ ಬಂದಾಗ ಜೀವ ಹಿಂಡುತ್ತೀರೋ? ಎಂದು ರಾಜೂಗೌಡ ಮಾರ್ಮಿಕವಾಗಿ ನುಡಿದರು.

2004 ರ ರಾಜಣ್ಣ (ರಾಜೂಗೌಡ) ಬೇಕೆಂದು ನನಗೆ ಅನೇಕರು ಮೆಸೇಜ್‌ ಮಾಡಿದ್ದಾರೆ. 2004 ರಲ್ಲಿ ಕನ್ನಡನಾಡು ಪಕ್ಷದಿಂದ ನಿಂತಾಗ ಪ್ರಚಾರಕ್ಕೆ ದುಡ್ಡು ಇರಲಿಲ್ಲ. ವಾಹನಗಳ ಓಡಾಟಕ್ಕೆ ಡೀಸೆಲ್‌ಗೆ ದುಡ್ಡು ಇರಲಿಲ್ಲ. ನಮ್ಮ ತಂದೆ ನಿವೃತ್ತಿಯಾದ ನಂತರ ಬಂದ ಹಣದಿಂದ ಚುನಾವಣೆ ಮಾಡಿದೆ ಎಂದ ರಾಜೂಗೌಡ, 2004, 2008, 2018 ರಲ್ಲಿ ದುಡ್ಡು ಇತ್ತಾ ಎಂದು ಪ್ರಶ್ನಿಸಿದರು. 2023 ರಲ್ಲಿ ಜಾಸ್ತಿ ಖರ್ಚು ಮಾಡಿ ಸೋತೆ ಎಂದು ಆತ್ಮಾವಲೋಕನ ಮಾಡಿಕೊಂಡಂತೆ ಮಾತನಾಡಿದ ಅವರು, ಒಂದಂತೂ ಗೊತ್ತಾಯ್ತು, ದುಡ್ಡಿನಿಂದ ಸುರಪುರ, ಹುಣಸಗಿ ಇಲ್ಲ, ನಿಷ್ಠಾವಂತ ಕಾರ್ಯಕರ್ತರಿಂದ ರಾಜೂಗೌಡ ಇದ್ದಾನೆ ಅಂತ ಎಂದರು.

ಬ್ಲಾಕ್‌ಮೇಲ್‌ ಮಾಡುವವರು ಇದ್ದರೆ ನನ್ನ ಬಿಟ್ಟು ಹೋಗಿಬಿಡಿ, ನಾನೇ ಬೀಳ್ಕೊಡುಗೆ ಸಮಾರಂಭ ಮಾಡುವೆ. ಅದೇ ಯಾರೋ ಒಬ್ಬ ನಿಷ್ಠಾವಂತ ಕಾರ್ಯಕರ್ತ ನನ್ನ ಬಗ್ಗೆ ಸಿಟ್ಟು ಮಾಡಿ ಮನೆಯಲ್ಲಿ ಕುಳಿತಿದ್ದರೆ ಹೇಳಿ, ಮನೆಗೆ ಹೋಗಿ ಕಾಲು ಮುಗಿದು ಒಪ್ಪಿಸುವೆ. ಆದರೆ, ಬ್ಯ್ಲಾಕ್ಮೇಲ್‌ ಮಾಡುವವರನ್ನು ತಿರುಗಿ ನೋಡೋಲ್ಲ ಎಂದರು.

ಎಂಎಲ್‌ಎ ಎಂದರೆ ದೇವರಲ್ಲ, ನಿಮ್ಮ ಮನೆಯಲ್ಲಿ ದುಡಿಯುವ ಆಳಿನಂತೆ. ಬಸವಣ್ಣನ ನಾಡಿನಿಂದ ಬಂದವನಾದ ನಾನು ಇದನ್ನೇ ನಂಬಿರುವೆ. ಬೆಂಗಳೂರಿನಲ್ಲಿ ನಿಮ್ಮ ದನಿಯಾಗುವೆ. ಚುನಾವಣೆ ಬಂದಾಗ ಕಾಲು ಮುಗಿದು, ನಂತರ ನೀನು ಯಾರು ಎಂದು ಕೇಳುವ ಜಾಯಮಾನ ನನ್ನದಲ್ಲ ಎಂದರು.