ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಾಂಕನದ (ಎಸ್‌ಎ-2) ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದ್ದು, 2024ರ ಮಾ.11ರಿಂದ 18ರ ವರೆಗೆ ಪಬ್ಲಿಕ್ ಪರೀಕ್ಷೆಗಳು ನಡೆಯಲಿವೆ.ಕಳೆದ ವರ್ಷ 5 ಮತ್ತು 8ನೇ ತರಗತಿ ಮಕ್ಕಳಿಗೂ ಮಂಡಳಿ ಪರೀಕ್ಷೆ ಆರಂಭಿಸಿದ್ದ ಸರ್ಕಾರ, ಈ ವರ್ಷ 9ನೇ ತರಗತಿ ಮಕ್ಕಳಿಗೂ ಇದನ್ನು ವಿಸ್ತರಿಸಿದೆ. ತರಗತಿವಾರು ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಂಗಳವಾರ ತನ್ನ ವೆಬ್‌ಸೈಟ್‌ನಲ್ಲಿ https://kseab.karnataka.gov.in ನಲ್ಲಿ ಪ್ರಕಟಿಸಿದೆ. ಕಳೆದ ವರ್ಷದಂತೆಯೇ ಈ ಪರೀಕ್ಷೆಗಳಿಗೆ ಮಂಡಳಿಯೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಕೊಡಲಿದೆ. ಆ ಪ್ರಕಾರ ಆಯಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಮಟ್ಟದಲ್ಲೇ ಪರೀಕ್ಷೆ ನಡೆಸಲು ಕ್ರಮ ವಹಿಸಬೇಕಾಗುತ್ತದೆ.5ನೇ ತರಗತಿ ವೇಳಾಪಟ್ಟಿ:ಮಾ.11ರಿಂದ 14ರವರೆಗೆ ಪರೀಕ್ಷೆ ನಡೆಯಲಿದೆ. ಮಾ.11ರಂದು ಪ್ರಥಮ ಭಾಷೆ, ಮಾ.12ಕ್ಕೆ ದ್ವಿತೀಯ ಭಾಷೆ, ಮಾ.13ಕ್ಕೆ ಪರಿಸರ ಅಧ್ಯಯನ ಮತ್ತು ಮಾ.14 ರಂದು ಗಣಿತ ಪರೀಕ್ಷೆ ನಡೆಯಲಿದೆ. ಎಲ್ಲ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ 4.30ರ ವರೆಗೆ ನಡೆಯಲಿವೆ.
8 ಮತ್ತು 9ನೇ ತರಗತಿ ವೇಳಾಪಟ್ಟಿ:ಮಾ.11 ರಂದು ಪ್ರಥಮ ಭಾಷೆ, ಮಾ.12ಕ್ಕೆ ದ್ವಿತೀಯ ಭಾಷೆ, ಮಾ.13ರಂದು ತೃತೀಯ ಭಾಷೆ, ಮಾ.14ರಂದು ಗಣಿತ, ಮಾ.15 ವಿಜ್ಞಾನ, ಮಾ.16 ಸಮಾಜ ವಿಜ್ಞಾನ ಮತ್ತು ಮಾ.18ಕ್ಕೆ ದೈಹಿಕ ಶಿಕ್ಷಣ ಪರೀಕ್ಷೆಗಳು ನಡೆಯಲಿವೆ. ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ತಿಳಿಸಿದೆ.