Exam Malpractice: Demand for Director's Suspension

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೆಎಸ್‌ಓಯು ಶಿವಮೊಗ್ಗ ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿನ ಪರೀಕ್ಷಾ ಅಕ್ರಮಗಳ ಕುರಿತು ಕ್ರಮ ಕೈಗೊಂಡು, ಪ್ರಾದೇಶಿಕ ನಿರ್ದೇಶಕರನ್ನು ಅಮಾನತುಗೊಳಿಸಿ, ಸಂಬಂಧಿತ ಪರೀಕ್ಷೆಗಳನ್ನು ಮರು ನಡೆಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಶನಿವಾರ ಪ್ರಾದೇಶಿಕ ಪರೀಕ್ಷಾ ಕೇಂದ್ರ ಮುಂದೆ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಂದ ಪ್ರತಿ ವಿಷಯಕ್ಕೆ ಸುಮಾರು 21 ಸಾವಿರ ರು. ಪಡೆದು. ಮೊಬೈಲ್ ಫೋನ್‌ಗಳು ಮತ್ತು ಪುಸ್ತಕಗಳನ್ನು ಬಳಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಹಣವನ್ನು ಪೋನ್ ಪೇ ಮತ್ತು ಗೂಗಲ್ ಪೇ ಮೂಲಕ ಸಂಗ್ರಹಿಸಲಾಗಿರುವ ಮಾಹಿತಿಯೂ ಲಭ್ಯವಾಗಿದೆ.

ಹಣ ಪಾವತಿಸಿದ ವಿದ್ಯಾರ್ಥಿಗಳಿಗೆ ಒಂದು ಮಹಡಿಯಲ್ಲಿ ನಕಲು ಮಾಡಲು ಅವಕಾಶ ನೀಡಿ, ಇತರ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಪರೀಕ್ಷೆ ನಕಲು ಮಾಡಲು ಪ್ರತಿದಿನ ಈ ಮಹಡಿಯಲ್ಲಿ ಸುಮಾರು 70 ರಿಂದ 100 ವಿದ್ಯಾರ್ಥಿಗಳು ಈ ವ್ಯವಸ್ಥೆಯ ಮಾಡಲಾಗಿದೆ ಎಂದು ದೂರಿದರು.

ಇಂತಹ ಆಕ್ರಮಗಳು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವುದಲ್ಲದೆ, ವಿಶ್ವವಿದ್ಯಾಲಯದ ಪರೀಕ್ಷಾ ವ್ಯವಸ್ಥೆ ಮತ್ತು ಪದವಿಗಳ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡುತ್ತವೆ. ಆದ್ದರಿಂದ, ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಶೈಕ್ಷಣಿಕ ನ್ಯಾಯವನ್ನು ಕಾಪಾಡಲು ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರಾದೇಶಿಕ ನಿರ್ದೇಶಕರನ್ನು ತಕ್ಷಣ ಅಮಾನತುಗೊಳಿಸಬೇಕು. ನಿಷ್ಪಕ್ಷಪಾತ ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಅಮಾನತುಗೊಳಿಸಿ, ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರದಂತೆ ಕ್ರಮ ಕೈಗೊಳ್ಳಬೇಕು. ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕು. ಹಿರಿಯ ಅಧಿಕಾರಿಗಳನ್ನು ಒಳಗೊಂಡ ತನಿಖಾ ಸಮಿತಿಯನ್ನು ರಚಿಸಿ, ಹಣ ಸಂಗ್ರಹಣೆ, ನಕಲುಗೆ ಅವಕಾಶ ಮತ್ತು ಮೇಲ್ವಿಚಾರಣೆಯಲ್ಲಿನ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಎಲ್ಲಾ ಸಾಕ್ಷ್ಯಗಳನ್ನು ಸಂರಕ್ಷಿಸಿ ಅದನ್ನು ಪರಿಶೀಲಿಸಬೇಕು. ಸಿಸಿಟಿವಿ ದೃಶ್ಯಾವಳಿ, ಕೊಠಡಿ ಹಂಚಿಕೆ, ಹಾಜರಾತಿ ದಾಖಲೆಗಳು, ಸಿಬ್ಬಂದಿಯ ಕರ್ತವ್ಯ ವಿವರಗಳು ಮತ್ತು ಡಿಜಿಟಲ್ ಪಾವತಿ ದಾಖಲೆಗಳನ್ನು ಪರಿಶೀಲಿಸಬೇಕು. ಸಂಬಂಽತ ಪರೀಕ್ಷೆಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮರು ನಡೆಸಬೇಕು ಎಂದರು.

ಅಕ್ರಮಗಳು ಸಾಬೀತಾದಲ್ಲಿ, ಸಂಬಂಧಪಟ್ಟ ಅಽಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ವಿಶ್ವವಿದ್ಯಾಲಯದ ನಿಯಮಗಳು ಹಾಗೂ ಅನ್ವಯಿಸುವ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು. ತನಿಖೆಯ ಫಲಿತಾಂಶವನ್ನು ಸಾರ್ವಜನಿಕಗೊಳಿಸಬೇಕು. ತನಿಖೆಯ ಪ್ರಗತಿ, ಅಂತಿಮ ವರದಿ ಮತ್ತು ಕೈಗೊಂಡ ಕ್ರಮಗಳ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿ, ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸಬೇಕು. ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದ ಎಬಿವಿಪಿ ಕಾರ್ಯಕರ್ತರ ಪೊಲೀಸರು ವಶಕ್ಕೆ ಪಡೆದರು.

---------------------

ಪೋಟೋ: 24ಎಸ್ಎಂಜಿಕೆಪಿ05

ಕೆಎಸ್‌ಓಯು ಶಿವಮೊಗ್ಗ ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿನ ಪರೀಕ್ಷಾ ಅಕ್ರಮಗಳ ಕುರಿತು ಕ್ರಮ ಕೈಗೊಂಡು, ಪ್ರಾದೇಶಿಕ ನಿರ್ದೇಶಕರನ್ನು ಅಮಾನತುಗೊಳಿಸಿ, ಸಂಬಂಧಿತ ಪರೀಕ್ಷೆಗಳನ್ನು ಮರು ನಡೆಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಶನಿವಾರ ಪ್ರಾದೇಶಿಕ ಪರೀಕ್ಷಾ ಕೇಂದ್ರ ಮುಂದೆ ಪ್ರತಿಭಟನೆ ನಡೆಸಿದರು.