ಸಾರಾಂಶ
ಶಿರಸಿ: ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಜಲಮಂಡಳಿಯಿಂದ ನೀರು ಪೂರೈಕೆಗೆ ಪೈಪ್ ಅಳವಡಿಸಲು ರಸ್ತೆಗಳನ್ನು ಕಂಡ ಕಂಡಲ್ಲಿ ಅಗೆಯಲಾಗಿದ್ದು, ನಗರಸಭೆಯ ಅಧಿಕಾರಿಗಳು ಹಾಗೂ ಸದಸ್ಯರಿಗೆ ಮಾಹಿತಿ ನೀಡದೇ ಬೇಕಾಬಿಟ್ಟಿಯಾಗಿ ಕಾಮಗಾರಿ ನಿರ್ವಹಿಸುತ್ತಿರುವುದಕ್ಕೆ ನಗರಸಭೆಯ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.ಬುಧವಾರ ನಗರಸಭೆಯ ಅಟಲ್‌ಜೀ ಸಭಾಭವನದಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಶ್ರೀಕಾಂತ ತಾರಿಬಾಗಿಲು, ವೀಣಾ ಶೆಟ್ಟಿ, ಫ್ರಾನ್ಸಿಸ್ ನರೋನಾ ಅವರು ಈ ವಿಷಯ ಪ್ರಸ್ತಾಪಿಸಿದರು.ನಗರದೆಲ್ಲೆಡೆ ಈಗ ರಸ್ತೆ ಪಕ್ಕ ದೊಡ್ಡ ದೊಡ್ಡ ಮಣ್ಣಿನ ರಾಶಿಯೇ ಬೇಳುತ್ತಿವೆ. ಪೈಪ್ ಅಳವಡಿಸಿ ಆದ ಬಳಿಕ ಈ ಮಣ್ಣನ್ನು ಸಮರ್ಪಕವಾಗಿ ಮುಚ್ಚುವ ಕಾರ್ಯ ನಡೆಸಿಲ್ಲ. ₹೬೫ ಕೋಟಿ ಮೌಲ್ಯದ ಈ ಬೃಹತ್ ಯೋಜನೆಯನ್ನು ಜಲಮಂಡಳಿ ಅನುಷ್ಠಾನಗೊಳಿಸುತ್ತಿದೆ. ಈ ಕಾಮಗಾರಿ ಭಾಗವಾಗಿ ನಗರದ ೨೭ ವಾರ್ಡ್‌ಗಳಲ್ಲಿ ರಸ್ತೆ ಅಗೆದು ಪೈಪ್ ಹಾಕಲಾಗುತ್ತಿದೆ. ಆದರೆ, ರಸ್ತೆ ಅಗೆದ ಮಣ್ಣನ್ನು ಸಮರ್ಪಕವಾಗಿ ಮುಚ್ಚುತ್ತಿಲ್ಲ. ಇದರಿಂದಾಗಿ ಬೈಕ್ ಸವಾರರು ಬೀಳುವ ಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.ನಗರ ಪ್ರದೇಶದಲ್ಲಿ ಈಗಾಗಲೇ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಲಾಗಿತ್ತು. ಬಹುತೇಕ ಕಡೆ ಈ ಪೈಪ್‌ಲೈನ್ ಉತ್ತಮವಾಗಿದ್ದರೂ ಹೊಸ ಕಾಮಗಾರಿಗಾಗಿ ಕಿತ್ತು ಹಾಕಲಾಗುತ್ತಿದೆ. ಪೈಪ್‌ಲೈನ್ ಸಮರ್ಪಕವಾಗಿ ಮುಚ್ಚಿದ ಬಳಿಕ ಆ ಜಾಗಕ್ಕೆ ನೀರು ಹಾಕಿ ಗಟ್ಟಿಗೊಳಿಸುವ ಕಾರ್ಯವನ್ನು ಗುತ್ತಿಗೆದಾರರು ಮಾಡುತ್ತಿಲ್ಲ. ಹೊಸ ಪೈಪ್‌ಲೈನ್ ಅಳವಡಿಸುವಾಗ ಸ್ಥಳೀಯ ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸುತ್ತಿಲ್ಲ. ಯೋಜನೆಯ ಡಿಪಿಆರ್‌ನ್ನೂ ನಗರಸಭೆಗೆ ನೀಡಿಲ್ಲ. ನಾವೇ ಅವರನ್ನು ಸಂಪರ್ಕಿಸಿ ಮಾರ್ಗದರ್ಶನ ನೀಡೋಣವೆಂದರೆ ಗುತ್ತಿಗೆದಾರರು ಶಿರಸಿಯಲ್ಲಿ ಕಚೇರಿ ಸಹ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಪ್ರತಿಕ್ರಿಯಿಸಿ, ಜಲಮಂಡಳಿ ನಗರಸಭೆಗೆ ಮಾಹಿತಿ ನೀಡದಿದ್ದರೂ ನಗರದ ಹಿತದೃಷ್ಟಿಯಿಂದ ನಾವು ಸಹಕಾರ ನೀಡೋಣ. ನಗರದ ಜನತೆಗೆ ಈ ಯೋಜನೆ ಮೂಲಕ ಸಮರ್ಪಕವಾಗಿ ನೀರು ಲಭ್ಯವಾಗುವಂತೆ ಮಾಡೋಣ ಎಂದರು.ದೇವಿಕೆರೆ ಪ್ರದೇಶದಲ್ಲಿ ವಾಣಿಜ್ಯ ಮಳಿಗೆಯಲ್ಲಿ ಕಾಯ್ದಿಟ್ಟ ಅಂಗಡಿಗಳನ್ನು ಬಾಡಿಗೆಗೆ ನೀಡುವ ಕುರಿತು ಹರಾಜು ನಡೆಸುವಿಕೆ, ಕಟ್ಟಡ ತೆರಿಗೆ, ನೀರಿನ ಶುಲ್ಕ ಸಂಗ್ರಹಣೆ, ಕುರಿತಂತೆ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಇದೇ ವೇಳೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ನಗರಸಭೆಯ ೨೦೨೫- ೨೬ನೇ ಸಾಲಿನ ಆಯವ್ಯಯ ಮಂಡಿಸಿದರು. ನಗರಸಭೆ ಸ್ವಂತ ಆದಾಯ, ಸರ್ಕಾರದ ವಿವಿಧ ಯೋಜನೆಗಳ ಮೂಲಕ ಶಿರಸಿ ನಗರಸಭೆ ₹೧೨.೭೯ ಕೋಟಿ ಆದಾಯ ಬರಬಹುದು ಎಂದು ನಿರೀಕ್ಷಿಸಲಾಗಿದ್ದು, ₹೧೨.೬೫ ಕೋಟಿ ವಿವಿಧ ಅಭಿವೃದ್ಧಿ ಕಾರ್ಯ, ವಿವಿಧ ಖರ್ಚು ನಿರೀಕ್ಷಿಸಲಾಗಿದೆ. ₹೧೪ ಲಕ್ಷ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ನಗರದಲ್ಲಿ ಆಸ್ತಿ ತೆರಿಗೆಯಿಂದ ₹೪.೩ ಕೋಟಿ ಬರಬಹುದು ಎಂದು ನಿರೀಕ್ಷಿಸಿದ್ದೇವೆ. ಘನತ್ಯಾಜ್ಯ ವಿಲೇವಾರಿಯ ಶುಲ್ಕದಿಂದ ₹೯೯ ಲಕ್ಷ ನಿರೀಕ್ಷಿಸಲಾಗಿದೆ. ₹೧.೫ ಕೋಟಿ ನೀರು ಸರಬರಾಜಿಗೆ ವಾರ್ಷಿಕ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ ₹೨.೯ ಕೋಟಿ ಮನೆ ಮನೆ ಕಸ ಸಂಗ್ರಹಣೆ, ಘನತ್ಯಾಜ್ಯ ನಿರ್ವಹಣೆ ಇನ್ನಿತರ ಪ್ರಮುಖ ಖರ್ಚುಗಳಾಗಲಿವೆ ಎಂದರು.ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಪೌರಾಯುಕ್ತ ಕಾಂತರಾಜು ಮತ್ತಿತರರು ಇದ್ದರು.