ಸಾರಾಂಶ
ಪಟ್ಟಣದ ಸಿಬಿಎಸ್‌ಸಿ ಶಾಲೆಯ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡಕ್ಕಾಗಿ ಗುಡ್ಡದಲ್ಲಿನ ಅಗೆದ ಮಣ್ಣನ್ನು ಅಕ್ರಮವಾಗಿ ರಾತ್ರೋರಾತ್ರಿ ಟಿಪ್ಪರ್‌ಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಗಜೇಂದ್ರಗಡ:ಪಟ್ಟಣದ ಸಿಬಿಎಸ್‌ಸಿ ಶಾಲೆಯ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡಕ್ಕಾಗಿ ಗುಡ್ಡದಲ್ಲಿನ ಅಗೆದ ಮಣ್ಣನ್ನು ಅಕ್ರಮವಾಗಿ ರಾತ್ರೋರಾತ್ರಿ ಟಿಪ್ಪರ್‌ಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಪಟ್ಟಣದ ಪಂಪ್‌ಹೌಸ್ ಬಳಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡಕ್ಕೆ ಗುಡ್ಡವನ್ನು ಸಮಾನವಾಗಿಸುವ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಗುಡ್ಡವನ್ನು ಜೆಸಿಬಿಗಳ ಮೂಲಕ ಅಗೆಯಲಾಗುತ್ತಿದೆ. ಪರಿಣಾಮ ನೂರಾರು ಟನ್‌ಗಳಲ್ಲಿ ಸಂಗ್ರಹವಾಗುತ್ತಿರುವ ಗರಸಿನಲ್ಲಿ ಇಪ್ಪತ್ತಕ್ಕೂ ಅಧಿಕ ಟಿಪ್ಪರ್‌ಗಳ ಮೂಲಕ ಶನಿವಾರ ರಾತ್ರಿ ಇಟಗಿ ಸಮೀಪದ ಕೆಇಬಿ ಗ್ರಿಡ್ ಬಳಿ ಸಾಗಿಸುತ್ತಿದ್ದೇವೆ ಎಂದು ಗರಸು ಸಾಗಾಟದಾರರು ಹೇಳುತ್ತಿದ್ದಾರೆ. ಆದರೆ, ಸೂಡಿ ಸೇರಿ ಸುತ್ತಲಿನ ಜಮೀನಿನಲ್ಲಿ ನಿರ್ಮಾಣ ಆಗುತ್ತಿರುವ ಪವನ ಘಟಕಗಳ ಸ್ಥಾಪನೆಗಾಗಿ ನಿರ್ಮಿಸುವ ರಸ್ತೆಗೆ ಪಟ್ಟಣದ ಗರಸನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಮನೆಯ ಮುಂದೆ ಹಾಕಲು ಒಂದು ಪುಟ್ಟಿ ಗರಸು ತರಲು ಹೋದಾಗ ಸಿಸಿ ಕ್ಯಾಮೆರಾ ಇದೆ, ಒಯ್ಯಲು ಬರಲ್ಲ ಎಂದು ಕೆಲಸ ಮಾಡುವವರು ಹೇಳುತ್ತಾರೆ. ಆದರೆ ರಾತ್ರಿ ವೇಳೆ ಟಿಪ್ಪರ್‌ಗಳ ಮೂಲಕ ಗರಸು ಸಾಗಿಸಲು ಹೇಗೆ ಬರುತ್ತದೆ ಎಂದು ಕೆಲ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದಾಗ ಗರಸು ಸಾಗಾಟವನ್ನು ನಿಲ್ಲಿಸಿದ್ದು ಅನೇಕ ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.ಪಟ್ಟಣದ ಗುಡ್ಡದಲ್ಲಿ ನ್ಯಾಯಾಲಯ ಸೇರಿ ಇತರ ಕಟ್ಟಡಗಳ ನಿರ್ಮಾಣಕ್ಕೆ ಜಾಗವನ್ನು ಗುರುತಿಸಲಾಗಿದ್ದು, ಗುಡ್ಡವನ್ನು ಅಗೆದು ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಜಾಗವನ್ನು ಸಮಗೊಳಿಸಲಾಗುತ್ತಿದೆ. ಆದರೆ ಗುಡ್ಡವನ್ನು ಅಗೆದಾಗ ಬೃಹತ್ ಪ್ರಮಾಣದ ಗರಸನ್ನು ಎಲ್ಲಿಗೆ ಸಂಗ್ರಹಿಸಲಾಗುತ್ತಿದೆ ಹಾಗೂ ಸಂಗ್ರಹಿಸಿದ ಗರಸನ್ನು ಯಾವ ಕಾಮಗಾರಿಗಳಿಗೆ ಬಳಸಲಾಗುತ್ತಿದೆ ಅಥವಾ ಗರಸು ಸಾಗಾಟ ಮಾಡಲು ಪರವಾನಗಿ ನೀಡಿದ್ದಾರಾ, ನೀಡಿದ್ದರೆ ಎಷ್ಟು ಟನ್ ಗರಸು ಸಾಗಾಟಕ್ಕೆ ಅವಕಾಶ ನೀಡಲಾಗಿದೆ ಎನ್ನುವ ಪ್ರಶ್ನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕಿದೆ. ಆದರೆ ಈ ಕುರಿತು ಮಾಹಿತಿ ಪಡೆಯಲು ಲೋಕೋಪಯೋಗಿ ಇಲಾಖೆ ಎಇಇ ಬಲವಂತ ನಾಯ್ಕರ ಅವರಿಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಗರಸು ಸಾಗಾಟಕ್ಕೆ ಕುರಿತಂತೆ ಉದ್ಭವಾಗಿರುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಪ್ರತಿಕ್ರಿಯೆ ನೀಡದ ಅಧಿಕಾರಿಗಳು: ಗಜೇಂದ್ರಗಡ ಗುಡ್ಡದಲ್ಲಿನ ಗರಸು ಸಾಗಾಟ ಕುರಿತು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮಾಹಿತಿಯನ್ನು ಕೇಳಿದಾಗ ಲೋಕೋಪಯೋಗಿ ಇಲಾಖೆ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕೇಳಿ ಎಂದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಾವಿತ್ರಿ ಅವರಿಗೆ ಕರೆ ಮಾಡಿದಾಗ ತಾವು ರಜೆಯಲ್ಲಿದ್ದು, ಇಲಾಖೆ ಮತ್ತೋರ್ವ ಅಧಿಕಾರಿ ಮೋಹನ್ ಅವರ ದೂರವಾಣಿ ಸಂಖ್ಯೆ ನೀಡಿದರು, ಆದರೆ ಅವರೂ ಸಹ ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ.ಪಟ್ಟಣದಲ್ಲಿ ಗುಡ್ಡವನ್ನು ಅಗೆದು ಗರಸನ್ನು ರಾತ್ರೋರಾತ್ರಿ ಸಾಗಾಟ ಮಾಡಲಾಗುತ್ತಿದೆ. ಸಾಗಾಟ ಕುರಿತು ಅಧಿಕಾರಿಗಳಿಗೆ ಮಾಹಿತಿ ಇಲ್ಲ ಎನ್ನುತ್ತಾರೆ. ತಡೆಯಬೇಕಾದವರಿಗೆ ಮಾಹಿತಿ ನೀಡಿದರೆ ಸ್ಥಳಕ್ಕೆ ಬರಲಿಲ್ಲ. ಗರಸು ಸಾಗಾಟ ಎಲ್ಲಿಗೆ ಹಾಗೂ ಸಾಗಾಟಕ್ಕೆ ಪಡೆದ ಪರವಾನಗಿ ತೋರಿಸಿ ಎಂದರೆ ಸಮಂಜಸ ಉತ್ತರ ಸಿಗದ ಸ್ಥಿತಿ ಕಂಡರೆ ಗರಸು ಸಾಗಾಟ ಅಕ್ರಮವಾಗಿ ನಡೆಯುತ್ತಿದೆ ಪುರಸಭೆ ಮಾಜಿ ಸದಸ್ಯ ಅಶೋಕ ವನ್ನಾಲ ಹೇಳಿದರು.