ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ವಸತಿ ಶಾಲೆಗಳು 2025-26ನೇ ಸಾಲಿನ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟಾರೆ ಶೇ.99.55ರಷ್ಟು ಫಲಿತಾಂಶ ದಾಖಲಿಸಿವೆ.ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಸೇರಿದಂತೆ ಒಟ್ಟು 34 ವಸತಿ ಶಾಲೆಗಳ ಪೈಕಿ 29 ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದಿವೆ. ಇದರಲ್ಲಿ ಸಮಾಜ ಕಲ್ಯಾಣ ಇಲಾಖೆಯ 13, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ 12 ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 4 ವಸತಿ ಶಾಲೆಗಳು ಸೇರಿವೆ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 15 ವಸತಿ ಶಾಲೆಗಳಿಂದ ಪರೀಕ್ಷೆಗೆ ಹಾಜರಾದ 671 ವಿದ್ಯಾರ್ಥಿಗಳಲ್ಲಿ 198 ಅತ್ಯುನ್ನತ, 387 ಪ್ರಥಮ ದರ್ಜೆ, 67 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ 15 ವಸತಿ ಶಾಲೆಗಳಿಂದ ಪರೀಕ್ಷೆಗೆ ಹಾಜರಾದ 677 ವಿದ್ಯಾರ್ಥಿಗಳಲ್ಲಿ 178 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 368 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 98 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ 4 ವಸತಿ ಶಾಲೆಗಳಿಂದ ಪರೀಕ್ಷೆಗೆ ಹಾಜರಾದ 198 ವಿದ್ಯಾರ್ಥಿಗಲ್ಲಿ 80 ಅತ್ಯುನ್ನತ ಶ್ರೇಣಿ ಹಾಗೂ 93 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪ್ರಥಮ ದರ್ಜೆಯಲ್ಲಿ ಹಾಗೂ 19 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಂಕಗಳಿಕೆಯಲ್ಲಿ ದೇವರಕೊಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪೂರ್ಣಿಮ ಪ್ರಿಯ.ಜೆ 612 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎನ್.ಸಿ.ಯಶವಂತ ಪಾಟೀಲ್, ದೇವರಕೊಟ್ಟ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಈ.ಪುಷ್ಪಲತಾ ಹಾಗೂ ಚಳ್ಳಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಟಿ.ಪೂರ್ಣಿಮಾ ತಲಾ 610 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯ ಟಿ.ರಮೇಶ 609 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಅತ್ಯುತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳು ಮತ್ತು ವಸತಿ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಹಾಗೂ ಪ್ರಾಂಶುಪಾಲರಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ದಿವಾಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ಭಾವಿಮಠ, ಜಿಲ್ಲಾ ಕ್ರೈಸ್ ಸಮನ್ವಯಾಧಿಕಾರಿ ಆರ್.ರಮೇಶ್ ಅಭಿನಂದಿಸಿದ್ದಾರೆ.
ಕ್ರೈಸ್ ವಸತಿ ಶಾಲೆಗಳಲ್ಲಿ ಅತ್ಯುತ್ತಮ ಬೋಧಕ ಸಿಬ್ಬಂದಿ ವರ್ಗ, ಉಚಿತ ಊಟ-ವಸತಿ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ಸುಸಜ್ಜಿತ ಪ್ರಯೋಗಾಲಯ, ಕಂಪ್ಯೂಟರ್ ಮತ್ತು ಸಂಗೀತ ಶಿಕ್ಷಣ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೇ ವಸತಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಅತ್ಯುತ್ತಮ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ ತಿಳಿಸಿದ್ದಾರೆ.