ರಾಮನಗರ: ಗ್ರಾಮೀಣ ಭಾಗದ ಸಹಕಾರಿ ಸಂಘಗಳು ಆರ್ಥಿಕ ವಹಿವಾಟು ನಡೆಸುವ ಜೊತೆಗೆ ಸದಸ್ಯರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉತ್ತಮ ಸೇವೆ ಒದಗಿಸುತ್ತಿವೆ ಎಂದು ಹಳ್ಳಿಮಾಳ ಪಿಎಸಿಎಂಎಸ್ ಅಧ್ಯಕ್ಷ ಸಿ.ರವಿ ಹೇಳಿದರು.

ತಾಲೂಕಿನ ಹಳ್ಳಿಮಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ ಕೇಂದ್ರ ಸರ್ಕಾರದ ಸಚಿವಾಲಯ 5 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಸಹಕಾರದಿಂದ ಸಮೃದ್ಧಿ ಧ್ಯೇಯದಲ್ಲಿ ಆಯೋಜಿಸಿದ್ದ ರೈತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಇಂದು ಆರೋಗ್ಯ ಬಹಳ ಮುಖ್ಯ, ಅದರಲ್ಲೂ ಗ್ರಾಮೀಣ ರೈತರಿಗೆ ನೆರವಾಗುವ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಹಕಾರ ಇಲಾಖೆ ಮತ್ತು ಸಾಯಿ ಆಸ್ಪತ್ರೆ ಸಹಕಾರದಲ್ಲಿ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಸಂಘದಲ್ಲಿ ಕೆಸಿಸಿ ಅಲ್ಪಾವಧಿ ಸಾಲ ವಿತರಣೆ ಮಾಡುವ ಜೊತೆಗೆ ರೈತರಿಗೆ ಆಧುನಿಕ ಕೃಷಿ ತರಬೇತಿ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಘದ ಆಡಳಿತ ಮಂಡಳಿ ಸಮಾಜಮುಖಿ ಕೆಲಸ ಮಾಡುತ್ತಿದೆ. ಸಂಘ ಮತ್ತಷ್ಟು ರೈತರಿಗೆ ನೆರವಾಗುವ ಕೆಲಸಗಳನ್ನು ಹಮ್ಮಿಕೊಂಡು ಮತ್ತಷ್ಟು ಸಮಾಜಮುಖಿಯಾಗಿ ಸಾಗಲಿದೆ. ಇದಕ್ಕೆ ಸಹಕಾರಿಗಳ ಸಹಕಾರ ಮುಖ್ಯ. ಆಗಾಗ್ಗೆ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡು ಆರೋಗ್ಯವಂತರಾಗಿ ಬದುಕು ನಡೆಸಿ ಎಂದು ರವಿ ಸಹಕಾರಿಗಳಿಗೆ ಕಿವಿಮಾತು ಹೇಳಿದರು.

ಸಹಕಾರ ಇಲಾಖೆಯ ಅಧಿಕಾರಿ ಮಂಜುನಾಥ್ ಮಾತನಾಡಿ, 47 ಸಾವಿರ ಸಹಕಾರ ಸಂಘಗಳನ್ನು ಹೊಂದಿರುವ ಬೃಹತ್ ಇಲಾಖೆಯಾಗಿ ಸಹಕಾರ ಇಲಾಖೆ ಕರ್ತವ್ಯ ನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರದ ಸಚಿವಾಲಯದ ಮಾರ್ಗದರ್ಶನ ದಲ್ಲಿ ಎಲ್ಲಡೆ 7 ದಿನಗಳ ಸಹಕಾರ ಸಪ್ತಾಹ ಆಚರಣೆ ಮಾಡಲಾಗುತ್ತಿದೆ.‌ಅದರ ಅಂಗವಾಗಿ ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎಂಬ ಮನೋಭಾವದಿಂದ ಗಿಡ ನೆಡುವುದು,‌ ಉಚಿತ ಆರೋಗ್ಯ ಶಿಬಿರ, ವಿದ್ಯಾರ್ಥಿಗಳನ್ನು ಪ್ರವಾಸ ಕರೆದುಕೊಂಡು ಹೋಗುವ ಹಲವು ಕಾರ್ಯಕ್ರಮಗಳನ್ನು ಸಹಕಾರ ಇಲಾಖೆ ವತಿಯಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ಡಾ.ಸಂಗಮ್ ಕಾರ್ತಿಕ್ ಮಾತನಾಡಿದರು‌. ಸಹಕಾರ ಇಲಾಖೆ ಅಧಿಕಾರಿಗಳಾದ ಮಂಜುನಾಥ್, ಉಮೇಶ್ ಬಿಡಿಸಿಸಿ ಬ್ಯಾಂಕ್ ಸೂಪರ್ ವೈಸರ್ ದೊಡ್ಡಬೈರೇಗೌಡ, ಯೂನಿಯನ್ ಒಕ್ಕೂಟದ ಮೂರ್ತಿ ಪುರುಷೋತ್ತಮ್, ಸಂಘದ ಸಿಇಓ ಪ್ರಕಾಶ್, ಉಪಾಧ್ಯಕ್ಷ ನಾಗಯ್ಯ, ಸದಸ್ಯರಾದ ಶಿವಣ್ಣ, ಮಾದಯ್ಯ ಸೇರಿದಂತೆ ರೈತಾಪಿ ವರ್ಗದವರು ಇದ್ದರು. ಸಂಘದ ಕಾರ್ಯವ್ಯಾಪ್ತಿಯ ನೂರಾರು ರೈತರು, ಮಹಿಳೆಯರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.


2ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ಹಳ್ಳಿಮಾಳ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಗುರುವಾರ ನಡೆದ ರೈತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅತಿಥಿಗಳು ಉದ್ಘಾಟಿಸಿದರು.