ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕರ ದಬ್ಬಾಳಿಕೆ ಮಿತಿಮೀರಿದೆ. ಹುಲ್ಕೆರೆಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆಸಲು ಕೋರಂ ಅಭಾವವಿದ್ದರೂ ಚುನಾವಣೆ ನಡೆಸಲೇಬೇಕೆಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಕಾನೂನು ಚೌಕಟ್ಟು ಮೀರಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಜುಳಾ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ಶಾಶ್ವತವಲ್ಲ. ರಾಜಕೀಯ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ, ಸಹಕಾರ ಸಂಘಗಳಲ್ಲೂ ರಾಜಕೀಯ ಒತ್ತಡ ತಂದು ಕುಟುಂಬಗಳನ್ನು ಒಡೆಯುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಏನು ಕೆಲಸ ಮಾಡುತ್ತದೆ ನೋಡೋಣ ಎಂದು ಇಷ್ಷು ದಿನ ಸುಮ್ಮನಿದ್ದೆವು. ಆದರೆ, ಪ್ರತಿಯೊಂದರಲ್ಲೂ ರಾಜಕೀಯ ತಂದು, ವಿಪಕ್ಷಗಳ ಬೆಂಬಲಿಗರ ಹೆಸರುಗಳನ್ನು ಕೈಬಿಡಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಎಲ್ಲ ಕಡೆಯೂ ತಮ್ಮ ಪಕ್ಷದ ಬೆಂಬಲಿಗರೇ ಚುನಾಯಿತರಾಗಬೇಕೆಂದು ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರ ಮೂಲಕ ವಿಪಕ್ಷಗಳ ಬೆಂಬಲಿಗರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತಹ ಹುನ್ನಾರ ನಡೆಸುತ್ತಿದ್ದಾರೆ. ಇಂತಹ ಹೊಲಸು ರಾಜಕಾರಣವನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಅತೃಪ್ತಿ ಹೊರಹಾಕಿದರು.
ಸಹಾಯಕ ನಿಬಂಧಕರಿಗೆ ತರಾಟೆ:ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ಜಾ.ದಳ ಮುಖಂಡ ಬಿ.ಆರ್.ರಾಮಚಂದ್ರ ಅವರೊಂದಿಗೆ ತೆರಳಿದ ಮಾಜಿ ಶಾಸಕ ರವೀಂದ್ರ ಶ್ರೆಕಂಠಯ್ಯ ಅವರು, ಸಹಾಯಕ ನಿಬಂಧಕರಾದ ಅನಿತಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೋರಂ ಇಲ್ಲದಿದ್ದರೂ ಸಭೆ ನಡೆಸುವಂತೆ ನೀವು ಏಕೆ ಒತ್ತಡ ಹಾಕಿ ಸಭೆ ನಡೆಸಿದ್ದೀರಿ. ಮಂಜುಳಾ ಅವರು ವಿಷ ಸೇವಿಸಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆಕೆ ಮೃತಪಟ್ಟರೆ ಅದರ ಜವಾಬ್ದಾರಿಯನ್ನು ನೀವು ಹೊರುತ್ತೀರಾ ಎಂದು ಪ್ರಶ್ನಿಸಿದರು.ಸಹಾಯಕ ನಿಬಂಧಕಿ ಅನಿತಾ ಮಾತನಾಡಿ, ನಾನು ಸಭೆ ನಡೆಸಲು ಯಾವುದೇ ನೋಟಿಸ್ ನೀಡಿಲ್ಲ. ಪೊಲೀಸರನ್ನು ಸಹ ನಾನು ಕಳುಹಿಸಿಲ್ಲ ಎಂದು ಸಮಜಾಯಿಸಿ ನೀಡಿದರು.
ಅಧಿಕಾರಿ ಉಡಾಫೆಯ ಉತ್ತರಕ್ಕೆ ಕೆಂಡಮಂಡಲರಾದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ನೀವು ಸಭೆ ನಡೆಸಲು ಹೇಳಿಲ್ಲ ಮತ್ತು ಪೊಲೀಸರನ್ನು ಕಳುಹಿಸಿಲ್ಲ ಎಂದಾದರೆ ಲಿಖಿತವಾಗಿ ಬರೆದುಕೊಡಿ ಎಂದು ಹೇಳಿದರು.ನಂತರ ಸಹಾಯಕ ನಿಬಂಧಕರಾದ ಅನಿತಾ ಅವರು ನಾನು ಸಭೆ ನಡೆಸಲು ಹೇಳಿಲ್ಲ ಹಾಗೂ ಪೊಲೀಸರನ್ನೂ ನಾನು ಕಳುಹಿಸಿಲ್ಲ ಎಂದು ಲಿಖಿತವಾಗಿ ಪತ್ರ ನೀಡಿದರು.
ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಅವರು, ಅಧಿಕಾರಿ ಅನಿತಾ ಅವರೇ ಸಭೆ ನಡೆಸುವಂತೆ ಹೇಳಿರುವ ದಾಖಲಾತಿಗಳು ನನ್ನ ಬಳಿ ಇವೆ. ಅಲ್ಲದೇ, ಮಾರಸಿಂಗನಹಳ್ಳಿ ಗ್ರಾಮದ ಡೇರಿಗೂ ಕಾನೂನು ಮೀರಿ ಚುನಾವಣೆ ನಡೆಸಲು ನೋಟಿಸ್ ನೀಡಿದ್ದೀರಿ, ಸಭೆ ನಡೆಸಲು ೭ ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ, ನೀವು ಕಚೇರಿಗೇ ಕರೆಸಿಕೊಂಡು ನೋಟಿಸ್ ನೀಡುತ್ತಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.