ದಾಸರಹಳ್ಳಿ ಕ್ಷೇತ್ರದಲ್ಲಿ ಮಿತಿಮೀರಿದ ಫ್ಲೆಕ್ಸ್ ಹಾವಳಿ

| Published : Jun 17 2024, 01:30 AM IST

ದಾಸರಹಳ್ಳಿ ಕ್ಷೇತ್ರದಲ್ಲಿ ಮಿತಿಮೀರಿದ ಫ್ಲೆಕ್ಸ್ ಹಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಕಣ್ಣು ಬಿಟ್ಟಲ್ಲೆಲ್ಲಾ ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌, ಜಾಹೀರಾತು, ಗೋಡೆ ಬರಹಗಳದ್ದೇ ಅಬ್ಬರ.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ನಗರದಲ್ಲಿ ಕಣ್ಣು ಬಿಟ್ಟಲ್ಲೆಲ್ಲಾ ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌, ಜಾಹೀರಾತು, ಗೋಡೆ ಬರಹಗಳದ್ದೇ ಅಬ್ಬರ. ಸರಕಾರಿ ಕಚೇರಿ ಅಕ್ಕ ಪಕ್ಕ, ಬಸ್‌ ನಿಲ್ದಾಣದ ಹತ್ತಿರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೆಲ್ಲಾ ಇವುಗಳದ್ದೇ ಕಾರುಬಾರು. ಪ್ರಚಾರದ ಗೀಳಿರುವ ರಾಜಕೀಯ ಮುಖಂಡರು, ರಾಜಕಾರಣಿಗಳು ಮತ್ತು ಅವರ ಬೆಂಬಲಿಗರು ಹುಟ್ಟುಹಬ್ಬ, ವಿವಿಧ ಗಣ್ಯರ ಜಯಂತಿ ಹಾಗೂ ಹಬ್ಬಗಳಿಗೆ ಶುಭಾಶಯ ಕೋರುವ ನೆಪದಲ್ಲಿ ಸಿಕ್ಕ ಸಿಕ್ಕಲೆಲ್ಲಾ ಬ್ಯಾನರ್‌, ಫ್ಲೆಕ್ಸ್‌ಗಳನ್ನು ಹಾಕುತ್ತಿದ್ದಾರೆ.

ಜನಸಂದಣಿ ಜಾಗದಲ್ಲಿ ಅಳವಡಿಕೆ:

ಬಾಗಲಗುಂಟೆ ಬಿಬಿಎಂಪಿ ಪ್ರಧಾನ ಕ‍ಚೇರಿ ಬಳಿ, ಕಮ್ಮಗೊಂಡನಹಳ್ಳಿ ಬಸ್ ನಿಲ್ದಾಣ, ಮಲ್ಲಸಂದ್ರ ಪೈಪ್‌ಲೈನ್‌, ಶ್ರೀರಾಮ ದೇವಸ್ಥಾನ, 8ನೇ ಮ್ಯೆಲಿ, ದಾಸರಹಳ್ಳಿ, ಹೀಗೆ ಕ್ಷೇತ್ರದಾದ್ಯಂತ ಜನಸಂದಣಿಯಿರುವ ಸ್ಥಳಗಳಲ್ಲಿ ಹೆಚ್ಚಾಗಿ ಫ್ಲೆಕ್ಸ್‌ ಅಳಡಿಸಲಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ರಾಜಕಾರಣಿಗಳ ಬೆಂಬಲಿಗರು, ಮುಖಂಡರ ಭಾವಚಿತ್ರವಿರುವ ಫ್ಲೆಕ್ಸ್‌, ಬ್ಯಾನರ್‌ ಹಾಕಿ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ತಮ್ಮ ಹುಟ್ಟುಹಬ್ಬದ ಅಚರಣೆಗೆ ಕ್ಷೇತ್ರದಾದ್ಯಂತ ಬ್ಯಾನರ್ ಪ್ಲೆಕ್ಸ್ ಅಳವಡಿಸಿ ಕ್ಷೇತ್ರದ ಅಂದವನ್ನು ಕೆಡಿಸಿದ್ದಾರೆ. ಅಷ್ಟೇ ಅಲ್ಲದೆ ಇವರ ವಿರುದ್ಧ ಬಿಬಿಎಂಪಿ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಕ್ರಮ ಕೈಗೊಳ್ಳುತ್ತಿಲ್ಲ.

ಅಪಘಾತಕ್ಕೆ ಕಾರಣ: ರಸ್ತೆಬದಿ ಹಾಗೂ ಮಧ್ಯೆ, ಮರ, ವಿದ್ಯುತ್‌ ಕಂಬಗಳಿಗೂ ಬ್ಯಾನರ್‌ ಅಳವಡಿಸಲಾಗುತ್ತಿದೆ. ಕಮ್ಮಗೊಂಡನಹಳ್ಳಿಯ ಬಸ್ ನಿಲ್ಧಾಣದ ಬಳಿ ದೊಡ್ಡ ದೊಡ್ದ ಬ್ಯಾನರ್‌ ಕಟ್ಟುವುದರಿಂದ ಸಾರ್ವಜನಿಕರು ರಸ್ತೆ ದಾಟುವಾಗ ತೊಂದರೆ ಅನುಭವಿಸುವಂತಾಗಿದೆ. ಮತ್ತೊಂದು ಕಡೆ ಅವೈಜ್ಞಾನಿಕವಾಗಿ ಕಟ್ಟುವುದರಿಂದ ಗಾಳಿಗೆ ಕಿತ್ತು ರಸ್ತೆಗೆ ಹಾರುತ್ತವೆ. ವಾಹನಗಳಿಗೆ ಅಡ್ಡವಾಗಿ ಬಿದ್ದು ಅಪಘಾತಕ್ಕೆ ಕಾರಣವಾಗುತ್ತವೆ.

ಸಾರ್ವಜನಿಕರಿಂದ ಬಿಬಿಎಂಪಿಗೆ ದೂರು

ಅನಧಿಕೃತ, ಅಪಾಯಕಾರಿ ಫ್ಲೆಕ್ಸ್‌, ಬ್ಯಾನರ್‌ಗಳ ಬಗ್ಗೆ ಸಾರ್ವಜನಿಕರು ಬಿಬಿಎಂಪಿ ದಾಸರಹಳ್ಳಿ ವಲಯದ ಅಧಿಕಾರಿಗಳಿಗೆ ಸಾಕಷ್ಟು ಹಲವು ಬಾರಿ ದೂರು ನೀಡಿದ್ದಾರೆ. ಆದರೆ, ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಅನಧಿಕೃತ ಪ್ರಚಾರ ಸಾಮಗ್ರಿ ತೆರವುಗೊಳಿಸಿದರೂ ಮರುದಿನ ಅದೇ ಜಾಗದಲ್ಲಿ ಬ್ಯಾನರ್‌, ಫ್ಲೆಕ್ಸ್‌ಗಳು ನೇತಾಡುತ್ತಿರುತ್ತವೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌ ಅಳವಡಿಕೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.