ಅಗತ್ಯ ಮೀರಿದ ಸಂಗ್ರಹ ಪರಿಸರಕ್ಕೆ ಮಾರಕ

| Published : Jun 13 2024, 12:52 AM IST

ಅಗತ್ಯ ಮೀರಿದ ಸಂಗ್ರಹ ಪರಿಸರಕ್ಕೆ ಮಾರಕ
Share this Article
  • FB
  • TW
  • Linkdin
  • Email

ಸಾರಾಂಶ

ಸುಲಭದ ಉತ್ಪಾದನೆ, ಕಡಿಮೆ ದರ ಅಥವಾ ರಿಯಾಯಿತಿ ದರದ ಮಾರಾಟದ ಹೆಸರಿನಲ್ಲಿ ನಡೆಯುವ ಮಾರುಕಟ್ಟೆ ಪ್ರಭಾವ ಸಹ ಮನುಷ್ಯನ ಅಗತ್ಯಕ್ಕೆ ಮೀರಿದ ಖರೀದಿಗೆ ಪ್ರಚೋದನೆ ನೀಡಿ, ಪರಿಸರ ಹಾನಿಗೆ ಕಾರಣವಾಗಿದೆ. ಅಗತ್ಯಕ್ಕೆ ಮೀರಿದ ಸಂಗ್ರಹವೂ ಪರಿಸರಕ್ಕೆ ಅಪಾಯಕಾರಿ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಡಾ. ಎಚ್.ಲಕ್ಷ್ಮೀಕಾಂತ ಆತಂಕ ದಾವಣಗೆರೆಯಲ್ಲಿ ವ್ಯಕ್ತಪಡಿಸಿದ್ದಾರೆ.

- ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ ಅಭಿಮತ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಸುಲಭದ ಉತ್ಪಾದನೆ, ಕಡಿಮೆ ದರ ಅಥವಾ ರಿಯಾಯಿತಿ ದರದ ಮಾರಾಟದ ಹೆಸರಿನಲ್ಲಿ ನಡೆಯುವ ಮಾರುಕಟ್ಟೆ ಪ್ರಭಾವ ಸಹ ಮನುಷ್ಯನ ಅಗತ್ಯಕ್ಕೆ ಮೀರಿದ ಖರೀದಿಗೆ ಪ್ರಚೋದನೆ ನೀಡಿ, ಪರಿಸರ ಹಾನಿಗೆ ಕಾರಣವಾಗಿದೆ. ಅಗತ್ಯಕ್ಕೆ ಮೀರಿದ ಸಂಗ್ರಹವೂ ಪರಿಸರಕ್ಕೆ ಅಪಾಯಕಾರಿ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಡಾ. ಎಚ್.ಲಕ್ಷ್ಮೀಕಾಂತ ಆತಂಕ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಎನ್‌ಎಸ್‌ಎಸ್ 1 ಮತ್ತು 2ನೇ ಘಟಕಗಳು, ಪರಿಸರ ವಿಜ್ಞಾನ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಘನ ತ್ಯಾಜ್ಯ ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹೋಟೆಲ್‌ನಿಂದ ತರುವ ಪ್ಯಾಕೇಜ್ ಆಹಾರದ ಜೊತೆಗೆ ನಾವು ಕಸವನ್ನೂ ತರುತ್ತಿದ್ದೇವೆ. ಆಹಾರವನ್ನು ಪ್ಯಾಕ್ ಮಾಡುವ ಪ್ಲಾಸ್ಟಿಕ್, ಕಾಗದ ಹಾಗೂ ಇನ್ನಿತರ ವಸ್ತುಗಳ ಉತ್ಪಾದನೆ ಮಾಲಿನ್ಯದ ಅಡಿಪಾಯ. ಅನಗತ್ಯ ಉತ್ಪಾದನೆಗೆ ನಿಯಂತ್ರಣ ಹೇರಿದರೆ ಪರಿಸರದ ಮೇಲಿನ ದುಷ್ಪರಿಣಾಮಗಳೂ ಕಡಿಮೆಯಾಗುತ್ತವೆ. ಪರಿಸರ ಜಾಗೃತಿಯ ಅಂಶಗಳು ಎಲ್ಲಿಂದ ಬಂದರೂ ಸ್ವೀಕರಿಸಿ ಪಾಲಿಸುವ ಗುಣ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ಎ.ಎಂ. ರೇಣುಕಾರಾಧ್ಯ ಮಾತನಾಡಿ, ಮಣ್ಣು, ನೀರು, ಗಾಳಿಯ ಮಾಲಿನ್ಯದಂತೆ ಇತ್ತೀಚೆಗೆ ಹೊಸ ಹೊಸ ಮಾಲಿನ್ಯಗಳು ಸೃಷ್ಟಿಯಾಗುತ್ತಿವೆ. ವೈದ್ಯಕೀಯ ತ್ಯಾಜ್ಯ, ಇ-ತ್ಯಾಜ್ಯಗಳೂ ಪರಿಸರವನ್ನು ನಾಶ ಮಾಡುವ ಜೊತೆಗೆ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಈ ಬಗ್ಗೆ ಮುಂಜಾಗೃತೆ ವಹಿಸಿ ನಿಯಂತ್ರಿಸದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ತಿಳಿಸಿದರು.

ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ಪ್ಲಾಸ್ಟಿಕ್ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಆದರೆ ಉತ್ಪಾದನೆಯನ್ನೇ ನಿಲ್ಲಿಸಲು ಸರ್ಕಾರಗಳಿಂದಾಗಲಿ, ಸಂಬಂಧಿಸಿದ 18 ಇಲಾಖೆಗಳಿಂದಲೂ ಸಾಧ್ಯವಾಗಿಲ್ಲ. ಸಮಸ್ಯೆಯ ಮೂಲದ ಬಗ್ಗೆ ಗೊತ್ತಿದ್ದೂ ನಿಯಂತ್ರಣ ಕ್ರಮ ಇಲ್ಲದ ಕಾರಣ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಪ್ಲಾಸ್ಟಿಕ್‌ನಿಂದಾಗಿ ಇಡೀ ಜಗತ್ತು ಪರಿಸರದ ಅಸಮತೋಲನ ಎದುರಿಸುತ್ತಿದೆ. ಪ್ರಕೃತಿ ವಿಕೋಪಕ್ಕೆ ಮನುಷ್ಯನೇ ಬಲಿಯಾಗುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.

ಕುಲಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ, ಹಣಕಾಸು ಅಧಿಕಾರಿ ಮುದ್ದನಗೌಡ ದ್ಯಾಮನಗೌಡ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಪಾಳೇದ, ಪರಿಸರ ವಿಜ್ಞಾನ ವಿಭಾಗದ ಸಂಯೋಜನಾಧಿಕಾರಿ ಪ್ರೊ. ಎನ್.ಎಸ್. ಪ್ರಮೋದ ಉಪಸ್ಥಿತರಿದ್ದರು.

ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಜೆ. ವೀರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಸೌಮ್ಯ ಎಸ್. ಬುಳ್ಳಾ ಸ್ವಾಗತಿಸಿದರು. ಡಾ.ಸಿದ್ದಪ್ಪ ಕಕ್ಕಳಮೇಲಿ ಕಾರ್ಯಕ್ರಮ ನಿರೂಪಿಸಿದರು.

- - - -12ಕೆಡಿವಿಜಿ42ಃ:

ದಾವಣಗೆರೆ ವಿಶ್ವವಿದ್ಯಾನಿಲಯ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತ ಕಾರ್ಯಾಗಾರವನ್ನು ಡಾ. ಎಚ್.ಲಕ್ಷ್ಮೀಕಾಂತ ಉದ್ಘಾಟಿಸಿದರು.