ಹೋಂ ಸ್ಟೇಗಳ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣು

| Published : Jan 28 2024, 01:16 AM IST

ಸಾರಾಂಶ

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ, ಮದ್ಯ ಖರೀದಿಯಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗುತ್ತಿಲ್ಲ. ಇದಕ್ಕೆ ಕಾರಣ ಏನು ? ಈ ಪ್ರಶ್ನೆಗೆ ಮದ್ಯ ವರ್ತಕರಲ್ಲಿ ಹಲವು ಸಾಲಿನ ಉತ್ತರಗಳಿವೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿರುವ ಪ್ರವಾಸಿಗರು ಬರುವ ದಾರಿಯಲ್ಲಿಯೇ ಮದ್ಯ ತರುತ್ತಿದ್ದಾರೆ. ಅಲ್ಲದೆ, ಕೆಲವು ಹೋಂ ಸ್ಟೇಗಳಲ್ಲಿ ಗೋವಾ, ಮಹಾರಾಷ್ಟ್ರ ಹಾಗೂ ಮಿಲ್ಟ್ರಿ ಖೋಟಾದ ಮದ್ಯವನ್ನು ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಜಿಲ್ಲೆಯ ವೈನ್ ಸ್ಟೋರ್‌ಗಳಲ್ಲಿ ಮದ್ಯ ಖರೀದಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗುತ್ತಿಲ್ಲ.

ಹೊರ ರಾಜ್ಯ, ಮಿಲ್ಟ್ರಿ ಖೋಟಾ ಹೆಸರಿನ ಮದ್ಯಕ್ಕೆ ಬ್ರೇಕ್ । ಪ್ರವಾಸಿಗರು ಹೆಚ್ಚಾದರೂ ಮದ್ಯ ಖರೀದಿಯಲ್ಲಿ ಏರಿಕೆಯಾಗಿಲ್ಲ,

ಆರ್‌.ತಾರಾನಾಥ್‌ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ, ಮದ್ಯ ಖರೀದಿಯಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗುತ್ತಿಲ್ಲ. ಇದಕ್ಕೆ ಕಾರಣ ಏನು ? ಈ ಪ್ರಶ್ನೆಗೆ ಮದ್ಯ ವರ್ತಕರಲ್ಲಿ ಹಲವು ಸಾಲಿನ ಉತ್ತರಗಳಿವೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿರುವ ಪ್ರವಾಸಿಗರು ಬರುವ ದಾರಿಯಲ್ಲಿಯೇ ಮದ್ಯ ತರುತ್ತಿದ್ದಾರೆ. ಅಲ್ಲದೆ, ಕೆಲವು ಹೋಂ ಸ್ಟೇಗಳಲ್ಲಿ ಗೋವಾ, ಮಹಾರಾಷ್ಟ್ರ ಹಾಗೂ ಮಿಲ್ಟ್ರಿ ಖೋಟಾದ ಮದ್ಯವನ್ನು ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಜಿಲ್ಲೆಯ ವೈನ್ ಸ್ಟೋರ್‌ಗಳಲ್ಲಿ ಮದ್ಯ ಖರೀದಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗುತ್ತಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ವ್ಯವಹಾರ ನಡೆಸುವುದು ಕಷ್ಟ ಎಂಬುದನ್ನು ಅರಿತ ಜಿಲ್ಲೆಯ ಮದ್ಯ ವರ್ತಕರು, ಅಬಕಾರಿ ಇಲಾಖೆ ಹಾಗೂ ಸರ್ಕಾರದ ಗಮನ ಸೆಳೆದಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅಬಕಾರಿ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಹೋಂ ಸ್ಟೇ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಿ, ಈ ಎಲ್ಲಾ ವಿಷಯಗಳನ್ನು ಮನವರಿಕೆ ಮಾಡಿದ್ದಾರೆ. ಪ್ರವಾಸಿಗರು ಹೊರ ಜಿಲ್ಲೆಗಳಿಂದ ಮದ್ಯತರದಂತೆ ಅವರ ಮನವೊಲಿಸ ಬೇಕೆಂದು ನಿರ್ದೇಶನ ನೀಡಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿರುವ ಹೋಂ ಸ್ಟೇ ಮಾಲೀಕರು, ಸಭೆ ನಂತರದಲ್ಲಿ ಇದು, ಸಾಧ್ಯವೇ ? ಎಂದು ತಮ್ಮಲ್ಲಿ ತಾವೇ ಪ್ರಶ್ನೆ ಮಾಡಿಕೊಂಡಿದ್ದಾರೆ. ಮದ್ಯ ವರ್ತಕರಿಗೆ ತಮ್ಮ ವ್ಯವಹಾರ ಎಷ್ಟು ಮುಖ್ಯವೋ, ಹೋಂ ಸ್ಟೇ ನಡೆಸುವ ತಮಗೂ ವ್ಯವಹಾರ ಅಷ್ಟೆ ಮುಖ್ಯ ಎಂಬುದು ಮಾಲೀಕರ ವಾದ. ಹಾಗಾಗಿ ಅಬಕಾರಿ ಇಲಾಖೆ ನಿರ್ದೇಶನವನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದು, ಅದನ್ನು ಪಾಲನೆ ಮಾಡುವುದು ಬಹುತೇಕ ಅನುಮಾನ.

ಹೋಂ ಸ್ಟೇಗಳ ಮೇಲೆ ನಿಗಾ: ತಮ್ಮ ನಿರ್ದೇಶನ ಪಾಲನೆ ಮಾಡುವುದು ಅನುಮಾನ ಎಂಬುದು ಅಬಕಾರಿ ಇಲಾಖೆಗೂ ಗೊತ್ತಿರುವ ಸತ್ಯ. ಹಾಗಾಗಿ ಹೋಂ ಸ್ಟೇಗಳ ಮೇಲೆ ನಿಗಾ ಇಡಲು ಇಲಾಖೆ ಉದ್ದೇಶಿಸಿದೆ. ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಹಾಗೂ ಮಿಲ್ಟ್ರಿ ಖೋಟಾದಲ್ಲಿ ಮದ್ಯವನ್ನು ದಾಸ್ತಾನು ಮಾಡಿ ಹೋಂ ಸ್ಟೇಗೆ ಬರುವ ಪ್ರವಾಸಿಗರಿಗೆ ನೀಡುವುದು ಕಂಡು ಬಂದರೆ ಅಂತಹ ಹೋಂ ಸ್ಟೇಗಳ ಮೇಲೆ ದಿಢೀರ್ ದಾಳಿ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತಿರುವ ಹಿನ್ನಲೆಯಲ್ಲಿ ಮದ್ಯ ವರ್ತಕರ ಪರವಾಗಿ ಇಲಾಖೆಗಳು ನಿಲ್ಲುವ ಸಾಧ್ಯತೆ ಇದೆ. ಹಾಲಿ ಇರುವ ವ್ಯವಸ್ಥೆ ಯಥಾಪ್ರಕಾರ ಮುಂದುವರೆದರೆ ಹೋಂ ಸ್ಟೇ ಮಾಲೀಕರು ಹಾಗೂ ಮದ್ಯ ವರ್ತಕರ ನಡುವೆ ಶೀತಲ ಸಮರ ಮುಂದುವರೆಯಲಿದೆ. ---- ಬಾಕ್ಸ್ -----ಸರ್ಕಾರದ ಗಮನ ಸೆಳೆಯಲಾಗಿದೆ

ಜಿಲ್ಲೆಗೆ ಗೋವಾ ಹಾಗೂ ಮಹಾರಾಷ್ಟ್ರದಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮಾರ್ಗವಾಗಿ ಅಕ್ರಮವಾಗಿ ಮದ್ಯ ಸರಬ ರಾಜು ಆಗುತ್ತಿದೆ. ಹೊರ ರಾಜ್ಯಗಳಲ್ಲಿ ವಿಸ್ಕಿಗೆ 1150 ರು. ಇದ್ದರೆ, ನಮ್ಮ ರಾಜ್ಯದಲ್ಲಿ ಅದೇ ಬ್ರಾಂಡ್ ಮದ್ಯದ ಬೆಲೆ 3,000 ರು. ಕಾರಣ, ಇಲ್ಲಿನ ಅಬಕಾರಿ ತೆರಿಗೆ ದುಪ್ಪಟ್ಟು. ಆದ್ದರಿಂದ ಹೊರ ರಾಜ್ಯದಿಂದ ತಂದು ಕಡಿಮೆ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಶಿವಮೊಗ್ಗ, ಹಾಸನ, ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿರುವ ಮಿಲ್ಟ್ರಿ ಕ್ಯಾಂಟಿನ್‌ಗಳಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರಿಗೆ ಒಂದೆರಡು ಬಾಟಲಿ ನೀಡಲು ಅವಕಾಶ ಇದೆ. ಆದರೆ, ಇಲ್ಲಿ ನಿಗದಿಗಿಂತ ಹೆಚ್ಚು ಮದ್ಯ ಕೊಡಲಾಗುತ್ತಿದೆ. ಬರೀ ಇಷ್ಟೆ ಅಲ್ಲಾ, ಕೆಲವು ಮದುವೆ ಸಮಾರಂಭಗಳ ಪಾರ್ಟಿಗಳಲ್ಲೂ ಕೂಡ ಮಿಲ್ಟ್ರಿ ಮದ್ಯವೆಂದು ಅಪಾರ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಇದು, ಅಸಲಿಯೋ, ನಕಲಿಯೋ ಎಂಬುದನ್ನು ಇಲಾಖೆ ಪತ್ತೆ ಹಚ್ಚಬೇಕು. ದಿನೇ ದಿನೇ ಈ ರೀತಿ ಮದ್ಯ ಸರಬರಾಜಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಇನ್ನೊಂದೆಡೆ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರು ಕೂಡ ಸ್ಥಳೀಯ ವಾಗಿ ಮದ್ಯ ಖರೀದಿ ಮಾಡುತ್ತಿಲ್ಲ. ಮದ್ಯ ವರ್ತಕರ ಹಿತದೃಷ್ಟಿಯಿಂದ ಈ ಎಲ್ಲಾ ಅಂಶಗಳನ್ನು ಅಬಕಾರಿ ಇಲಾಖೆ ಗಮನಕ್ಕೆ ತರಲಾಗಿದೆ.

ಬಿ. ರಾಜಪ್ಪ ಅಧ್ಯಕ್ಷರು,

ಜಿಲ್ಲಾ ಮದ್ಯ ವರ್ತಕರ ಸಂಘ

ಪೋಟೋ ಫೈಲ್ ನೇಮ್ 27 ಕೆಸಿಕೆಎಂ 4

-----ಚಿಕ್ಕಮಗಳೂರು ಜಿಲ್ಲೆಗೆ ನಿರೀಕ್ಷೆಗೂ ಮೀರಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ಮದ್ಯ ಮಾರಾಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗುತ್ತಿಲ್ಲ. ಹಾಗಾಗಿ ಹೋಂ ಸ್ಟೇ ಮಾಲೀಕರ ಸಭೆ ಕರೆದು ಸ್ಥಳೀಯವಾಗಿ ಮದ್ಯ ಖರೀದಿಗೆ ಉತ್ತೇಜನ ನೀಡುವಂತೆ ನಿರ್ದೇಶನ ನೀಡಲಾಗಿದೆ. ಗೋವಾ, ಮಹಾರಾಷ್ಟ್ರ ಹಾಗೂ ಮಿಲ್ಟ್ರಿ ಖೋಟಾದ ಹೆಸರಿನಲ್ಲಿ ಮದ್ಯ ಖರೀದಿ ಮಾಡಿ ಪ್ರವಾಸಿಗರಿಗೆ ನೀಡುವುದು ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

- ಸಿ. ಸೆಲೀನಾ ಅಬಕಾರಿ ಉಪ ಆಯುಕ್ತೆ -----