ಸಾರಾಂಶ
ಚನ್ನಪಟ್ಟಣ: ಅಬಕಾರಿ ಇಲಾಖೆಯಿಂದ ೯೦೦ ಕೋಟಿ ಸಂಗ್ರಹಿಸಿ ಅದರಲ್ಲಿ ೭೦೦ ಕೋಟಿ ರೂ. ಹಣವನ್ನು ಮಹಾರಾಷ್ಟ್ರ ಚುನಾವಣೆಗೆ ಕಳುಹಿಸಿದ್ದು, ಉಳಿದ ೨೦೦ ಕೋಟಿ ರೂ. ಹಣವನ್ನು ಕರ್ನಾಟಕದ ಉಪಚುನಾವಣೆಗೆ ಕಾಂಗ್ರೆಸ್ ಬಳಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಿಂದ ಪಡೆದ ಹಣ ಮಹಾರಾಷ್ಟ್ರ ಚುನಾವಣೆಗೆ ಹೋಗಿರುವ ಕುರಿತು ಪ್ರಧಾನಿ ಮೋದಿ ಮಾಡಿರುವ ಆರೋಪ ಸತ್ಯ. ಆದರೆ, ಅದರಲ್ಲಿ ೨೦೦ ಕೋಟಿ ಹಣ ಇಲ್ಲಿನ ಉಪಚುನಾವಣೆಗೆ ಬಳಸಲಾಗುತ್ತಿದೆ. ಮಹಾರಾಷ್ಟ್ರ ಚುನಾವಣೆಗೆ ಕಾಂಗ್ರೆಸ್ ಎಟಿಎಂ ಆಗಿದೆ. ಮದ್ಯದಂಗಡಿಗಳ ಲೈಸೆನ್ಸ್ ರಿನಿವೆಲ್‌ಗೆ ೨,೩ ಲಕ್ಷ ಲಂಚ ಪಡೆಯಲಾಗುತ್ತಿದೆ. ಪ್ರತಿದಿನ ಮದ್ಯದಂಗಡಿಗಳಿಂದ ಹಣ ವಸೂಲು ಮಾಡುತ್ತಿರುವ ಕುರಿತು ಸಾಮಾಜಿಕ ಕಾರ್ಯಕರ್ತರು, ಮದ್ಯದಂಗಡಿ ಮಾಲೀಕರು ಆರೋಪಿಸಿದ್ದಾರೆ ಎಂದರು.ಮೋದಿ ಕುರಿತು ಹಗುರ ಮಾತು ಸಲ್ಲ:
ಸಿಎಂ ಹಾಗೂ ಡಿಸಿಎಂ ಪ್ರಧಾನಿ ಮಾಡಿರುವ ಆರೋಪ ಸುಳ್ಳು ಎನ್ನುತ್ತಾರೆ. ಆದರೆ, ಈ ಕುರಿತು ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ. ಆರೋಪ ಸುಳ್ಳು ಎಂದ ಮೇಲೆ ಅವರ ಮೇಲೆ ಪ್ರಕರಣ ಏಕೆ ದಾಖಲಿಸಿಲ್ಲ. ಅಬಕಾರಿ ಇಲಾಖೆಯ ಮೂಲಕ ಚುನಾವಣೆಗೆ ಹಣ ಸಂಗ್ರಹಿಸುತ್ತಿರುವುದು ಸತ್ಯ, ಲಿಕ್ಕರ್ ಅಸೋಸಿಯೇಷನ್‌ನವರೇ ಆರೋಪಿಸಿದ್ದಾರೆ. ನೀವು ಯಾವ ನಾಲಿಗೆ ಇಟ್ಟುಕೊಂಡು ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತೀರಿ. ಪ್ರಧಾನಿ ಬಗ್ಗೆ ಗೌರವವಿಟ್ಟುಕೊಂಡು ಮಾತನಾಡಿ ಎಂದು ಹರಿಹಾಯ್ದರು.ವೈನಾಡಿನಲ್ಲಿ ಪ್ರಿಯಾಂಕಾ ವಾದ್ರಾ ಅವರ ಚುನಾವಣೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾವಚಿತ್ರ ಇರುವ ಅಕ್ಕಿ ಚೀಲ ಹಂಚಲಾಗಿದೆ. ಅದನ್ನು ಅಲ್ಲಿಯ ಸಿಎಂ ಖುದ್ದಾಗಿ ತೋರಿಸಿದ್ದಾರೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರಿ ಶಾಲೆ ಮಕ್ಕಳಿಗೆ ಕೋಳಿ ಮೊಟ್ಟೆ ಕೊಡಲು ದಾನಿಗಳು ೧೫೦೦ ಕೋಟಿ ನೀಡಿದ್ದರೆ ಇಂದಿಗೂ ಮೊಟ್ಟೆಗಳನ್ನು ಕೊಟ್ಟಿಲ್ಲ. ಈಗ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆದ ಮೇಲೆ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅಂದರೆ ಈ ಸರ್ಕಾರ ಬದುಕಿದೆಯೋ ಸತ್ತಿದೆಯೋ ಜನರೇ ನಿರ್ಧರಿಸಬೇಕು ಎಂದರು.ರಾಜ್ಯದಲ್ಲಿ ೧ ಲಕ್ಷ ೧೨ ಸಾವಿರ ಎಕರೆ ವಕ್ಫ್‌ಗೆ ಸೇರಿದ್ದು, ಇದಕ್ಕೆಲ್ಲಾ ದಾಖಲೆ ಇದೆ ಎಂದು ವಕ್ಫ್ ಮಂಡಳಿಯವರು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಂಪೇಗೌಡರು ಕಟ್ಟಿರುವ ಹಲವು ಪೇಟೆಗಳನ್ನು ವಕ್ಫ್ ಬೋರ್ಡ್ ನಮ್ಮದೇ ಎನ್ನುತ್ತಿದ್ದಾರೆ, ವಶಕ್ಕೆ ಪಡೆಯಿರಿ ಎಂದು ಮುಸ್ಲಿಂ ಮುಖಂಡರು ವಕ್ಫ್‌ಗೆ ಈಗಾಗಲೇ ಒತ್ತಡ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇನ್ನೂ ಏನೇನು ಅವಾಂತರ ಸೃಷ್ಟಿ ಮಾಡುವುದೋ ಗೊತ್ತಿಲ್ಲ ಎಂದರು.
ಕಾಂಗ್ರೆಸ್‌ನವರು ಕೊರೋನಾ ಸಂದರ್ಭದಲ್ಲಿ ಹಗರಣ ಆಗಿದೆ ಎಂದು ಯಡಿಯೂರಪ್ಪ ಅವರ ಮೇಲೆ ಕೇಸ್ ಹಾಕುತ್ತೇವೆ ಎನ್ನುತ್ತಿದ್ದಾರೆ. ಯಡಿಯೂರಪ್ಪ ಅಪರಾಧಿ ಎಂದು ತೋರಿಸಲು ಈ ಷಡ್ಯಂತ್ರ ನಡೆಸಿದ್ದಾರೆ. ಸಮಿತಿ ವರದಿ ಬರಲು ಇನ್ನು ಆರು ತಿಂಗಳು ಬಾಕಿ ಇದೆ. ಆದರೂ ರಾಜಕೀಯ ದ್ವೇಷದಿಂದ ಕೊರೊನಾ ವಿಚಾರ ತಂದಿದ್ದಾರೆ. ರಾಜ್ಯದಲ್ಲಿ ವಕ್ಫ್, ಮುಡಾ, ವಾಲ್ಮಿಕಿ ಹಗರಣದ ಬಗ್ಗೆ ಚರ್ಚೆ ಆಗುತ್ತಿದೆ. ಚರ್ಚೆಯ ಹಾದಿ ತಪ್ಪಿಸಲು ಹಾಗೂ ಉಪಚುನಾವಣೆಯಲ್ಲಿ ಆಗುವ ಮುಖಭಂಗ ತಪ್ಪಿಸಕೊಳ್ಳಲು ಕಾಂಗ್ರೆಸ್‌ನವರು ತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.ಸತ್ತು ಹೋದ ಗ್ಯಾರಂಟಿ:
ಡಿಸಿಎಂ ಮಹಾರಾಷ್ಟ್ರಕ್ಕೆ ಹೋಗಿ ಗ್ಯಾರಂಟಿ ನೋಡಬೇಕಾದರೆ ಕರ್ನಾಟಕಕ್ಕೆ ಬನ್ನಿ ಎನ್ನುತ್ತಾರೆ. ಚುನಾವಣೆ ಬಂದಾಗ ಮಾತ್ರ ಗೃಹಲಕ್ಷ್ಮೀ ಯೋಜನೆಯ ಮೂರು ತಿಂಗಳ ಹಣ ಬಿಡುಗಡೆ ಮಾಡಲಾಗುತ್ತದೆ. ಬೇರೆ ಕಡೆ ಎಲ್ಲಿ ನಿಮ್ಮ ಗ್ಯಾರಂಟಿ ಕೆಲಸ ಮಾಡುತ್ತಿದೆ ತೋರಿಸಿ. ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸತ್ತು ಹೋಗಿದೆ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಡಾ.ಸಿ.ಎನ್. ಆಶ್ವಥ್ ನಾರಾಯಣ, ಶಾಸಕ ಕೆ.ಗೋಪಾಲಯ್ಯ, ಮಾಜಿ ಶಾಸಕರಾದ ಬಂಡಪ್ಪ ಕಾಶೆಂಪೂರ್, ಎ.ಮಂಜುನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಇತರರಿದ್ದರು.
ಬಾಕ್ಸ್ಚನ್ನಪಟ್ಟಣದಲ್ಲಿ ದೇವೇಗೌಡರ ಹವಾ!
ಚನ್ನಪಟ್ಟಣದ ಉಪಚುನಾವಣೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಚಾರಕ್ಕೆ ಆಗಮಿಸಿದ ಮೇಲೆ ಚುನಾವಣೆಯ ಹವೆಯೇ ಬದಲಾಗಿದೆ. ಇಲ್ಲಿ ಎಲ್ಲರ ಹವಾ ಮುಗಿದಿದ್ದು, ಎಚ್‌ಡಿಡಿ ಹವಾ ಮಾತ್ರ ಇದೆ ಎಂದು ಅಶೋಕ್ ತಿಳಿಸಿದರು.ಚನ್ನಪಟ್ಟಣ ಉಪ ಚುನಾವಣೆ ತುಂಬಾ ಪ್ರತಿ?ಯ ಚುನಾವಣೆ, ನನಗೆ ಇರುವ ಮಾಹಿತಿಯ ಪ್ರಕಾರ ಕಳೆದ ಎರಡು ದಿನಗಳಿಂದ ನಿಖಿಲ್ ಕುಮಾರಸ್ವಾಮಿ ಲೀಡ್‌ನಲ್ಲಿ ಇದ್ದಾರೆ, ಗೃಹ ಮಂತ್ರಿಯಾಗಿ ಕೆಲಸ ಮಾಡಿದ ಅನುಭವದ ಮೇಲೆ ಇದನ್ನು ಹೇಳುತ್ತಿದ್ದೇನೆ ಎಂದರು.
(ಬ್ರೀಫ್ ಸುದ್ದಿ)ಇಂದು ಎನ್‌ಡಿಎ ಸಭೆ
ಚನ್ನಪಟ್ಟಣ: ಚನ್ನಪಟ್ಟಣ ಉಪುಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಎನ್‌ಡಿಎ ಬಹಿರಂಗ ಸಭೆ ಆಯೋಜಿಸಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಿರಂಗ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಸೋಮಣ್ಣ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ, ಸಂಸದ ಯದುವೀರ್ ಒಡೆಯರ್ ಸೇರಿದಂತೆ ಶಾಸಕರು ಭಾಗವಹಿಸುವರು ಎಂದು ತಿಳಿಸಿದರು.ಪೊಟೋ೧೦ಸಿಪಿಟಿ೨:
ಚನ್ನಪಟ್ಟಣದಲ್ಲಿ ವಿಪಕ್ಷ ನಾಯಕ ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.