ಸಾರಾಂಶ
-ಕಳ್ಳಭಟ್ಟಿ ಮುಕ್ತ ಕಲಬುರಗಿ ಜಿಲ್ಲೆಗೆ ಪಣ, ಗಡಿಯಲ್ಲಿ ಕಟ್ಟೆಚ್ಚರ
------ಕನ್ನಡಪ್ರಭ ವಾರ್ತೆ ಕಲಬುರಗಿ
ಅಕ್ರಮ ಕಳ್ಳಭಟ್ಟಿ ಮತ್ತು ಕಲಬೆರೆಕೆ ಸೇಂದಿ ಹಾಗೂ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಸಂಗ್ರಹಣೆ ಮತ್ತು ಮಾರಾಟಗಳಂತಹ ಕೃತ್ಯಗಳ ನಿಯಂತ್ರಣಕ್ಕೆ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ಚಟುವಟಿಕೆ ನಿಯಂತ್ರಿಸಿ ಕಳ್ಳಭಟ್ಟಿ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಗಸ್ತು, ದಾಳಿ ತೀವ್ರಗೊಳಿಸಿದೆ.ಕಳೆದ ಎರಡು ವರ್ಷದಲ್ಲಿ ಕಳ್ಳಭಟ್ಟಿ ಸರಾಯಿಗೆ ಸಂಬಂಧಿಸಿದಂತೆ 46 ಮತ್ತು ಅಕ್ರಮ ಸೇಂದಿ ಮಾರಾಟದ 94 ಪ್ರಕರಣ ದಾಖಲಿಸಿ ಅನಧಿಕೃತ ಕಾನೂನು ಬಾಹಿರ ಚಟುವಟಿಕೆಯಲ್ಲಿ ನಿರತರಾದವರಿಗೆ ಬಿಸಿ ಮುಟ್ಟಿಸಲಾಗಿದೆ. ಅಬಕಾರಿ ಇಲಾಖೆಯು ರಾಜಸ್ವ ಸಂಗ್ರಹಿಸುವುದರ ಜೊತೆಗೆ ಅಬಕಾರಿ ಅಕ್ರಮ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಗಾಂಜಾ ಮತ್ತು ಇತರೆ ಮಾಧಕ ವಸ್ತುಗಳನ್ನು ಮಾರಾಟ ಹಾಗೂ ಸೇವನೆ ಪ್ರಕರಣ ಪತ್ತೆ ಹಚ್ಚಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಕೇಸ್ ದಾಖಲಿಸುತ್ತಿದೆ.
ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಾಲಾ-ಕಾಲೇಜುಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಕಾನೂನಿನ ಅರಿವು ಮೂಡಿಸಲು ಸಂವಾದ, ವಿಚಾರ ಸಂಕಿರಣ, ಜಾಥಾದಂತಹ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳುವ ಮೂಲಕ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಪೊಲೀಸ್, ಅಬಕಾರಿ, ಕಂದಾಯ, ಶಿಕ್ಷಣ ಇಲಾಖೆ ಒಳಗೊಂಡ ಸ್ಥಾಯಿ ಸಮಿತಿ ಸಭೆ ನಡೆಸಿ ಜಿಲ್ಲೆಯಲ್ಲಿ ಅಕ್ರಮ ಅಬಕಾರಿ ಚಟುವಟಿಕೆಗೆ ಕಡಿವಾಣ ಹಾಕಲು ಸೂಚನೆ ನೀಡಿದ್ದಾರೆ. ಇದಲ್ಲದೆ ಖುದ್ದು ಚಿಣಮಗೇರಾ ಗ್ರಾಮದಲ್ಲಿನ ಮೆ.ಕೆ.ಪಿ.ಆರ್. ಶುರ‍್ಸ್ ಹಾಗೂ ಹವಳಗಾ ಗ್ರಾಮದಲ್ಲಿನ ಮೆ.ರೇಣುಕಾ ಶುರ‍್ಸ್ (ಪ್ರಾಥಮಿಕ ಡಿಸ್ಟಿಲರಿ), ಮೆ.ಇನ್‌ಬ್ರೂö್ಯವ್ ಡಿಸ್ಟಿಲರಿ ಹಾಗೂ ನಂದೂರ-ಕೆಸರಟಗಿಯಲ್ಲಿರುವ ಕೆ.ಎಸ್.ಬಿ.ಸಿ.ಎಲ್. ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಳೆದ 2023-24 ಮತ್ತು 2024-25ನೇ (ಜುಲೈ-ಜೂನ್ ಮಾಹೆ ವರೆಗೆ) ಸಾಲಿನಲ್ಲಿ ಗೌಪ್ಯ ಮಾಹಿತಿ ಆಧರಿಸಿ ದಾಳಿ ನಡೆಸಿ 382 ಘೋರ ಪ್ರಕರಣಗಳು, 9 ಎನ್.ಡಿ.ಪಿ.ಎಸ್., 846 ಸೌಮ್ಯ (ಬಿ.ಎಲ್.ಎಸ್) ಹಾಗೂ 936 ಕಲಂ –ಎ ಪ್ರಕರಣಗಳು ದಾಖಲಿಸಿ 10,363 ಲೀ. ಮದ್ಯ, 963 ಲೀ. ಹೊರ ರಾಜ್ಯದ ಮದ್ಯ, 38,182 ಲೀ. ಬೀಯರ್, 197 ಲೀ. ಕಳ್ಳಭಟ್ಟಿ, 4,646 ಲೀ. ಕಲಬೆರೆಕೆ ಸೇಂದಿ, 1,872 ಲೀ. ಬೆಲ್ಲದ ಕೊಳೆ, 8.08 ಕೆ.ಜಿ. ಗಾಂಜಾ ಮುದ್ದೆಮಾಲು ವಶಪಡಿಸಿಕೊಂಡಿದ್ದು, ಈ ಅಕ್ರಮಗಳ ಸಾಗಾಟಕ್ಕೆ ನೆರವಾದ 131 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇನ್ನು ಕಲಂ 43ರಡಿ ಕಳೆದ ಎರಡು ವರ್ಷದಲ್ಲಿ 135 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.ಇನ್ನು ಕಲಬುರಗಿ ನೆರೆ ತೆಲಂಗಾಣ, ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವುದರಿಂದ ಗಡಿಯಲ್ಲಿನ ಅಕ್ರಮ ಅಬಕಾರಿ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲೆಯ ಆಳಂದ ತಾಲೂಕಿನ ಖಜೂರಿಯಲ್ಲಿ, ಸೇಡಂ ತಾಲೂಕಿನ ರಿಬ್ಬನಪಲ್ಲಿ, ಚಿಂಚೋಳಿ ತಾಲೂಕಿನ ಮಿರಿಯಾಣ ಮತ್ತು ಕೊಂಚಾವರಂನಲ್ಲಿ ಅಬಕಾರಿ ತನಿಖಾ ಠಾಣೆ ಸ್ಥಾಪಿಸಲಾಗಿದೆ. ಇಲ್ಲಿ 24 ಗಂಟೆ ನಿರಂತರ ಅಬಕಾರಿ ಸಿಬ್ಬಂದಿ ಪ್ರತಿಯೊಂದು ವಾಹನ ತಾಪಾಸಣೆ ಮಾಡುತ್ತಿದ್ದು, ತೀವ್ರ ಕಟ್ಟೆಚ್ಚರ ವಹಿಸಿದೆ.
..ಬಾಕ್ಸ್....4,416.36 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹ
ಕಳೆದ 2023-24 ಮತ್ತು 2024-25ನೇ ಸಾಲಿನಲ್ಲಿ ವಿವಿಧ ರೀತಿಯ ಮದ್ಯ ಮಾರಾಟದಿಂದ ಒಟ್ಟಾರೆ 4,416.36 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹವಾಗಿದೆ. ಇದರಲ್ಲಿ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕವಾಗಿ 40.77 ಕೋಟಿ ರೂ., ಡಿಸ್ಟಿಲರಿ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಅಬಕಾರಿ ಸುಂಕವಾಗಿ 4,373.45 ಕೋಟಿ ದಂಡ ಮತ್ತು ಮುಟ್ಟುಗೋಲು ಹಣವಾಗಿ 2.14 ಕೋಟಿ ರೂ. ಸೇರಿದೆ. ಕೆ.ಎಸ್.ಬಿ.ಸಿ.ಎಲ್ ಘಟಕದಿಂದ 2023-24ರಲ್ಲಿ 19,65,283 ಮದ್ಯ, 14,00,582 ಬೀಯರ್ ಪೆಟ್ಟಿಗೆ ಮಾರಾಟದಿಂದ 1,132.95 ಕೋಟಿ ರೂ. ಮತ್ತು 2024-25ರಲ್ಲಿ 19,76,770 ಮದ್ಯ, 14,36,070 ಬೀಯರ್ ಪೆಟ್ಟಿಗೆ ಮಾರಾಟದಿಂದ 1,197.22 ಕೋಟಿ ರೂ. ವಹಿವಾಟು ಮಾಡಿದೆ.-ಬಿ. ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ ಕಲಬುರಗಿ
-----...ಕೋಟ್....
ಜಿಲ್ಲೆಯಲ್ಲಿ ಗಾಂಜಾ ಮಾರಾಟ ಜಾಲ ಬೇಧಿಸಲು ಗೌಪ್ಯ ಮಾಹಿತಿ ಆಧರಿಸಿ ನಿರಂತರ ದಾಳಿ ಮಾಡಲಾಗುತ್ತಿದೆ. ಇಲಾಖೆಯ ಅಬಕಾರಿ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಗಾಂಜಾಗೆ ಕಡಿವಾಣ ಹಾಕಲು ಎಲ್ಲಾ ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳಲಾಗುತ್ತಿದೆ.-ಸಂಗನಗೌಡ ಪಿ.,ಅಬಕಾರಿ ಉಪ ಆಯುಕ್ತರು,ಕಲಬುರಗಿ