ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ತೆರಕಣಾಂಬಿ ಮತ್ತು ಕೊಂಗರಹಳ್ಳಿ ಗ್ರಾಮದಲ್ಲಿ ಮಲ ತ್ಯಾಜ್ಯ ಸಂಸ್ಕರಣ ಘಟಕ ಮತ್ತು ಅಕ್ಕ ಕೆಫೆಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹಾಗೂ ಸಂಸದ ಸುನೀಲ್‌ ಬೋಸ್‌ ಜೊತೆಗೂಡಿ ಚಾಲನೆ ನೀಡಿದರು.

ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲೂಕು ಪಂಚಾಯಿತಿ, ತೆರಕಣಾಂಬಿ ಹಾಗೂ ಕೊಂಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ಮತ್ತು ಅಕ್ಕ ಕೆಫೆ ಉದ್ಘಾಟನೆ ಹಾಗೂ ಅಪರ್ಣ್‌ ದಿವಸ್‌ ಪೋಷಣ್‌ ಕಾರ್ಯಕ್ರಮವನ್ನು ಶಾಸಕ, ಸಂಸದರು ಉದ್ಘಾಟಿಸಿದರು.

ಸಂಸದ ಸುನೀಲ್‌ ಬೋಸ್‌ ಮಾತನಾಡಿ, ಮಲ ತ್ಯಾಜ್ಯ ಸಂಸ್ಕರಣ ಘಟಕ ಆರಂಭಕ್ಕೆ ಜಾಗದ ಸಮಸ್ಯೆ ಇತ್ತು, ಸದ್ಯ ಜಾಗದ ಸಮಸ್ಯೆ ನೀಗಿದ ಬಳಿಕ ಇಂದು ಅಧಿಕೃತವಾಗಿ ತೆರಕಣಾಂಬಿ ಹಾಗೂ ಕೊಂಗರಹಳ್ಳಿ ಗ್ರಾಮದಲ್ಲಿ ಘಟಕ ಉದ್ಘಾಟನೆಗೊಂಡಿತು ಎಂದರು.

ರಾಜ್ಯ ಸರ್ಕಾರ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಲು ಶ್ರಮಿಸಿದ ಫಲವಾಗಿ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಕಟ್ಟಿದರು, ಆದರೆ ಬಳಕೆಯಾಗುತ್ತಿಲ್ಲ ಎಂದರು.


ಗ್ರಾಮೀಣ ಭಾಗದ ಜನರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು, ಕೇವಲ ಶೌಚಾಲಯ ಕಟ್ಟಿಸಿದರೆ ಸಾಲದು, ಅದನ್ನು ಉಪಯೋಗಿಸಿ ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಮಲ ತ್ಯಾಜ್ಯ ಸಂಸ್ಕರಣ ಘಟಕಗಳು ಆರಂಭವಾದರೆ ನೀರಿನ ಸಮಸ್ಯೆ ಕೂಡ ಕಡಿಮೆಯಾಗಲಿದೆ ಎಂದರು.

ಅಕ್ಕ ಕೆಫೆ ಮಹಿಳೆಯರೇ ನಿರ್ವಹಣೆ ಮಾಡುವ ಕಾರಣ ಈ ಭಾಗದ ಜನರು ಕೂಡ ಅಕ್ಕ ಕೆಫೆಗೆ ಪ್ರೋತ್ಸಾಹ ನೀಡಬೇಕು, ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಸಹಾಯಕವಾಗಲಿದೆ ಎಂದರು.

ಅಕ್ಕ ಕೆಫೆಯಲ್ಲಿ ಸ್ವಚ್ಛತೆ ಕಾಪಾಡಬೇಕು, ಗುಣ ಮಟ್ಟದ ಆಹಾರ ನೀಡಬೇಕು. ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಯಲಿದೆ, ರಾಜ್ಯ ಸರ್ಕಾರ ಮಹಿಳೆಯರು ಸ್ವಾವಲಂಬಿಯಾಗಲು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.

ಸಮಾರಂಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್‌, ಜಿಪಂ ಉಪ ಕಾರ್ಯದರ್ಶಿ ಶೃತಿ, ಕಾಡ ಅಧ್ಯಕ್ಷ ಪಿ.ಮರಿಸ್ವಾಮಿ, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಜಿಪಂ ಮಾಜಿ ಉಪಾಧ್ಯಕ್ಷರಾದ ಪಿ.ಮಹದೇವಪ್ಪ, ಕೆ.ಎಸ್.ಮಹೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಉಮಾಪತಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ದೇಪಾಪುರ ಸಿದ್ದಪ್ಪ ಸೇರಿದಂತೆ ಹಲವರಿದ್ದರು.

-----

ಜಿಪಂ ಸಿಇಒಗೆ ಅಭಿನಂದನೆ ಸಲ್ಲಿಸಿದ ಸಂಸದರು!

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಮಲ ತ್ಯಾಜ್ಯ ಸಂಸ್ಕರಣ ಘಟಕ ಹಾಗೂ ಅಕ್ಕ ಕೆಫೆ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಸುನೀಲ್‌ ಬೋಸ್ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮಲ ತ್ಯಾಜ್ಯ ಸಂಸ್ಕರಣ ಘಟಕ ಆರಂಭಿಸಲು ಜಾಗಕ್ಕೆ ಸಾಕಷ್ಟುಅಡೆ, ತಡೆ ಇತ್ತು. ದಿಶಾ ಸಭೆಯಲ್ಲಿ ಏಂಟೊಂಬತ್ತು ವರ್ಷಗಳಿಂದ ಆರಂಭವಾಗದಿರುವ ಬಗ್ಗೆ ನಾನು ವಿಷಯ ಪ್ರಸ್ತಾಪಿಸಿದ್ದೇ ಎಂದರು. ಆಗ ಜಿಪಂ ಸಿಇಒ ಮೋನಾರೋತ್‌ ಬೇಗ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ನೀಡಿದ್ದ ಭರವಸೆಯಂತೆ ಉದ್ಘಾಟಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

------

ಗುಂಡ್ಲುಪೇಟೆಯಲ್ಲೂ ಅಕ್ಕ ಕೆಫೆ ಆರಂಭಿಸಿ

ಜಿಪಂ ಉಪ ಕಾರ್ಯದರ್ಶಿ ಶೃತಿ ಉತ್ಸಕರಾಗಿದ್ದಾರೆ ಎಂದು ಶಾಸಕ

ಗುಂಡ್ಲುಪೇಟೆ: ಅಕ್ಕ ಕೆಫೆ ತೆರಕಣಾಂಬಿ ಗ್ರಾಮದಲ್ಲಿ ಆರಂಭವಾಗಿದ್ದು, ತಾಲೂಕು ಕೇಂದ್ರದಲ್ಲಿ ಆರಂಭಿಸಲಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಮಲ ತ್ಯಾಜ್ಯ ಸಂಸ್ಕರಣ ಘಟಕ ಹಾಗೂ ಅಕ್ಕ ಕೆಫೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜಿಪಂ ಉಪ ಕಾರ್ಯದರ್ಶಿ ಶೃತಿ ಗುಂಡ್ಲುಪೇಟೆ ತಾಲೂಕು ಕೇಂದ್ರದಲ್ಲಿ ಆರಂಭಿಸಲು ಉತ್ಸುಕರಾಗಿದ್ದರೆ ಆರಂಭಿಸಿ ಎಂದರು.

ಮಹಿಳೆಯರು ಸ್ವಾವಲಂಬಿಯಾಗುವ ಕಾಲದಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಅಕ್ಕ ಕೆಫೆ ಆರಂಭಿಸಿದರೆ ಜನರಿಗೂ ಅನುಕೂಲ, ಮಹಿಳೆಯರಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

------