ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಉತ್ತಮ ಜೀವನಕ್ಕೆ ಜ್ಞಾನ ಅವಶ್ಯಕವಾಗಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ತಿಳಿಸಿದರು.ಸುತ್ತೂರು ಶ್ರೀಕ್ಷೇತ್ರದಲ್ಲಿ ಯುವಜನರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಆಯ್ಕೆಯ ಯುಗವಾಗಿದೆ. ಪ್ರತಿಯೊಂದು ವಿಷಯದಲ್ಲೂ ಆಯ್ಕೆ ಮಾಡಿಕೊಳ್ಳುವ ಅವಕಾಶಗಳಿವೆ. ಯುವಕರು ಇಂದ್ರಿಯ ಸುಖಕ್ಕೆ ದಾಸನಾಗಬಾರದು. ಒಳ್ಳೆಯ ಆಲೋಚನೆಗಳ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.ಜ್ಞಾನಾರ್ಜನೆ ನಿರಂತರವಾದ ಪ್ರಕ್ರಿಯೆಯಾಗಿದ್ದು, ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಕನಸನ್ನು ನನಸಾಗಿಸಲು ನಿರಂತರ ಶ್ರಮ ಅತಿಮುಖ್ಯ. ಯುವಕರು ಪಾದರಸದಂತೆ ಕ್ರಿಯಾಶೀಲರಾಗಿ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಸಾಧಕರಾಗಬೇಕು ಎಂದು ಅವರು ಹೇಳಿದರು.ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ಹಾಗೂ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಬದುಕಿನ ಸೂಕ್ಷ್ಮತೆಗಳನ್ನು ವಿದ್ಯಾರ್ಥಿಗಳು ಅರಿಯಬೇಕು. ವೈಯಕ್ತಿಕ ಸ್ಚಚ್ಛತೆಯ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ತಿಳವಳಿಕೆಯೇ ಬದುಕಿಗೆ ಆಧಾರ. ಜೀವನದಲ್ಲಿ ಶಿಸ್ತು, ಸಂಯಮ, ತಾಳ್ಮೆ, ಶ್ರದ್ಧೆಯನ್ನು ರೂಢಿಸಿಕೊಂಡರೆ ಉತ್ತಮ ವ್ಯಕ್ತಿಗಳಾಗಬಹುದು ಎಂದರು.ಸಹಾಯಕ ಪ್ರಾಧ್ಯಾಪಕ ಡಾ. ನಂದೀಶ್ ಹಂಚೆ ಮಾತನಾಡಿ, ಸತ್ಯಂ ವದ ಧರ್ಮಂ ಚರ ಜೀವನದ ಪರಮ ಸತ್ಯ ವಾಕ್ಯವಾಗಿದೆ. ನಮ್ಮ ಬದುಕು ಮೌಲ್ಯಯುಕ್ತವಾಗಿರಬೇಕು. ಮನುಷ್ಯನ ಬದುಕಿಗೆ ಅಂಧಕಾರದ ಪೊರೆ ಕಟ್ಟಿರುತ್ತದೆ, ಇದನ್ನು ಮೌಲ್ಯಗಳಿಂದ ತೆರವುಗೊಳಿಸಬೇಕು. ದುಷ್ಟತೆ ಮತ್ತು ಪ್ರಾಮಾಣಿಕತೆಗಳ ನಡುವೆ ಇರುವ ಪ್ರೇರಕ ಶಕ್ತಿಯೇ ಮೌಲ್ಯ. ಮೌಲ್ಯಗಳು ಕಾಲಕ್ಕನುಗುಣವಾಗಿ ಬದಲಾವಣೆಯಾಗುತ್ತಿರುತ್ತವೆ. ಈ ಬದಲಾವಣೆಗೆ ಅನುಗುಣವಾಗಿ ಬದಲಾಗುತ್ತಿರಬೇಕು. ನಡೆ ನುಡಿ ಒಂದಾದರೆ ಮಾತ್ರ ಜೀವನದ ಮೌಲ್ಯ ವೃದ್ದಿಸುತ್ತದೆ. ಇದರಿಂದ ಮನುಷ್ಯನ ಘನತೆ ಹೆಚ್ಚುತ್ತದೆ ಎಂದು ತಿಳಿಸಿದರು. ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕ ನಿರಂಜನ್ ಬಾಬು ಮಾತನಾಡಿ, ದೇಶದ ಅಭಿವೃದ್ಧಿಗೆ ಯುವಕರಲ್ಲಿ ನಾಯಕತ್ವದ ಗುಣಗಳನ್ನು ತುಂಬುವುದು ಅವಶ್ಯಕವಾಗಿದೆ. ಸಮರ್ಥ ನಾಯಕತ್ವದಿಂದ ಮಾತ್ರ ಉತ್ತಮ ಆಡಳಿತ ಸಾಧ್ಯ. ನಾಯಕನಾದವನು ಸಮಸ್ಯೆಗಳನ್ನು ಒಡ್ಡಿಕೊಳ್ಳುವ ಮತ್ತು ಅವುಗಳನ್ನು ಬುದ್ದಿವಂತಿಕೆಯಿಂದ ಪರಿಹರಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದರು.ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ತರಲು ಉತ್ತಮ ನಾಯಕತ್ವ ಅತ್ಯಗತ್ಯ. ನಾಯಕನಾದವನಿಗೆ ಪ್ರತಿಭೆಯ ಜೊತೆಗೆ ವರ್ತನೆ ಮತ್ತು ಮನೋಧೋರಣೆ ಮುಖ್ಯ. ಸೋತಾಗ ಇತರರನ್ನು ದೂಷಿಸದೆ ತನ್ನದೆಂದು ಸ್ವೀಕರಿಸಿ, ಗೆದ್ದಾಗ ಎಲ್ಲರ ಪರಿಶ್ರಮವೆಂದು ಪ್ರೇರೇಪಿಸುವ ಗುಣವಿರಬೇಕು ಎಂದು ಅವರು ಹೇಳಿದರು.ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಮತ್ತು ಯೋಗಾಭ್ಯಾಸಗಳಲ್ಲಿ ಸಂಜೆ ದೇಸಿ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸಂಜೆಯ ಪ್ರಾರ್ಥನೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಿಬಿರದಲ್ಲಿ 264 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.ಮಾನಸ ಪ್ರಾರ್ಥಿಸಿದರು. ಡಾ.ಎನ್. ರಾಜೇಂದ್ರಪ್ರಸಾದ್ ಸ್ವಾಗತಿಸಿದರು. ಡಾ.ಎಚ್.ಎಂ. ಮಹೇಶ್ ವಂದಿಸಿದರು. ಎನ್. ನಾಗಲಾಂಭಿಕ ನಿರೂಪಿಸಿದರು.