ಯಾರು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆಯೋ ಅವರಿಗೆ ಬದುಕಿನಲ್ಲಿ ಎಂದೂ ಕೂಡ ದುಃಖ ಆಗುವುದಿಲ್ಲ.
ಲಕ್ಷ್ಮೇಶ್ವರ: ಸರ್ಕಾರ ಮಾಡಲು ಸಾಧ್ಯವಾಗದ, ಸಮಾಜದ ಹಿರಿಯರು ಮಾಡಲು ಸಾಧ್ಯವಾಗದ ಕೆಲಸವನ್ನು ಶ್ರೀಮಠಗಳು ಮಾಡಿಕೊಂಡು ಬಂದಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ಗುರುವಾರ ರಾತ್ರಿ ಸಮೀಪದ ಹೂವಿನಶಿಗ್ಲಿಯ ವಿರಕ್ತಮಠದ 47ನೇ ಜಾತ್ರಾ ಮಹೋತ್ಸವ ಹಾಗೂ ಲಿಂ. ನಿರಂಜನ ಸ್ವಾಮಿಗಳ 16ನೇ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿದರು.ಶ್ರೀಮಠದ ಶ್ರೀಗಳು ಮಾಡುವ ಕಾರ್ಯಕ್ಕೆ ನನ್ನ ಲೋಕಸಭಾ ಸಂಸದರ ನಿಧಿಯಿಂದ ₹15 ಲಕ್ಷ ನೀಡುತ್ತೇನೆ. ಈ ಮಠ ಇನ್ನಷ್ಟು ಉತ್ತುಂಗಕ್ಕೆ ಬೆಳೆಯಲಿ. ಸಾವಿರಾರು ಮಕ್ಕಳಿಗೆ ಅನ್ನ ಮತ್ತು ಆಶ್ರಯ ನೀಡುವ ಶಕ್ತಿ ಸಿಗಲಿ. ಈ ಭಾಗದ ಜನರಿಗೆ ಆರ್ಥಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿರುವ ಸಿಂಚನ ಶ್ರೀಮಠದಿಂದ ಸಿಗಲಿ ಎಂದರು.
ಯಾರು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆಯೋ ಅವರಿಗೆ ಬದುಕಿನಲ್ಲಿ ಎಂದೂ ಕೂಡ ದುಃಖ ಆಗುವುದಿಲ್ಲ. ಯಾವಾಗಲೂ ಸಂತೋಷವಾಗಿ ಇರುತ್ತಾರೆ. ಯಶಸ್ಸಿಗೆ ಜ್ಞಾನ ಮತ್ತು ಧ್ಯಾನ ಎರಡು ಮುಖ್ಯ. ಜ್ಞಾನ ಎಂದರೆ ಒಳ್ಳೆಯ ಶಿಕ್ಷಣ. ಧ್ಯಾನ ಎಂದರೆ ಮೆಡಿಟೇಷನ್ ಎಂದರು.21ನೇ ಶತಮಾನ ಭೂಮಿ ಇದ್ದವರದೂ ಅಲ್ಲ, ಹಣ ಇದ್ದವರದೂ ಅಲ್ಲ, ಜ್ಞಾನ ಇದ್ದವರದು. ಅದಕ್ಕೆ ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನ. ತಂತ್ರಾಂಶ ಜ್ಞಾನದಿಂದ ಕೃತಕ ಜ್ಞಾನ. ಇದು ನಮ್ಮ ಮಕ್ಕಳಿಗೆ ಭವಿಷ್ಯ ರೂಪಿಸುತ್ತದೆ ಎಂದರು.
ನಮ್ಮದು ಕಾಯಕ ನಿಷ್ಠ ಸಮಾಜ. ಅದಕ್ಕೆ ಬಸವಣ್ಣನವರು ಕಾಯಕವೇ ಕೈಲಾಸ ಅಂದರು. ನಾವು ನಮ್ಮ ಕಾಯಕ ಬಿಡಬಾರದು. ಸಕಲ ಜೀವಾತ್ಮರಿಗೆ ಲೇಸು ಬಯಸು ಅಂತ ಹೇಳಿದ್ದಾರೆ. ಬದುಕಿನ ಎಲ್ಲ ಪ್ರಶ್ನೆಗಳಿಗೆ ಬಸವಾದಿ ಶರಣರ ವಚನ ಉತ್ತರ ಹೇಳುತ್ತದೆ. ಅಂತಹ ವಚನಗಳಿಂದ ಸಂಸ್ಕಾರವನ್ನು ಪಡೆದುಕೊಳ್ಳಬೇಕು ಎಂದರು.ದಕ್ಷಿಣದಲ್ಲಿ ತುಮಕೂರು ಸಿದ್ದಗಂಗಾ ಮಠ ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ದಾಸೋಹ ಮಾಡುತ್ತಿದೆ. ಅಲ್ಲಿರುವ ಮಕ್ಕಳೆಲ್ಲ ಉತ್ತರ ಕರ್ನಾಟಕದ ಮಕ್ಕಳೇ, ಕೊಪ್ಪಳದ ಗವಿ ಮಠದಲ್ಲಿ ಐದು ಸಾವಿರಕ್ಕಿಂತ ಹೆಚ್ಚುಮಕ್ಕಳು ಅಕ್ಷರ ಮತ್ತು ಅನ್ನ ದಾಸೋಹ ಪಡೆಯುತ್ತಿದ್ದಾರೆ. ಅದೇ ರೀತಿ ಹೂವಿನಶಿಗ್ಲಿಯ ಮಠದಿಂದ ಸಾವಿರಾರು ಮಕ್ಕಳಿಗೆ ನೀಡುವಂತಾಗಲಿ ಎಂದು ಆಶಿಸಿದರು.ಶ್ರೀಮಠದ ಚನ್ನವೀರ ಸ್ವಾಮಿಗಳು, ಕುಂದಗೋಳದ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರು, ನವಲಗುಂದದ ಗವಿಮಠದ ಬಸವಲಿಂಗ ಸ್ವಾಮಿಗಳು, ಗುಡ್ಡದ ಆನ್ವೇರಿಯ ವಿರಕ್ತಮಠದ ಶಿವಯೋಗಿಶ್ವರ ಸ್ವಾಮಿಗಳು, ಹಿರೇಮಲ್ಲನಕೇರಿಯ ವಿರಕ್ತಮಠದ ಅಭಿನವ ಚನ್ನಬಸವ ಸ್ವಾಮಿಗಳು, ಕಮಡೊಳ್ಳಿಯ ವಿರಕ್ತಮಠದ ರಾಚೋಟೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಗವಿಸಿದ್ದಪ್ಪ ದ್ಯಾಮಣ್ಣವರ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ಹಾಗೂ ಬಿಜೆಪಿ ಸವಣೂರು ಮಂಡಲಗಳ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಬಸವರಾಜ ಕೋಳಿವಾಡ ಸೇರಿದಂತೆ ಹಲವರು ಇದ್ದರು.