ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನ ಆಯೋಜಿಸಿರುವುದು ಶ್ಲಾಘನೀಯ ಎಂದು ರೆಡ್ ಕ್ರಾಸ್ ಸಂಸ್ಥೆ ತಾಲೂಕು ಅಧ್ಯಕ್ಷ ಕೆ.ಎನ್. ಕಾಂತರಾಜ್ ಹೇಳಿದರು.ಅವರು ಹಾಸನ ನಗರದ ಇಂಡಿಯಾನ ಮಲ್ಟಿ ಸ್ಪೇಷಲಿಟಿ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ ಹಾಸನ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಲೂರು ಘಟಕ, ಮಗ್ಗೆ ಗ್ರಾಮ ಪಂಚಾಯಿತಿ, ಶ್ರೀ ರಂಗ ಕ್ಲಿನಿಕ್ ಹಾಗೂ ಶ್ರೀ ಮಾರುತಿ ಮೆಡಿಕಲ್ಸ್ ಮಗ್ಗೆ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ದೈನಂದಿನ ಕೆಲಸದ ಒತ್ತಡದಲ್ಲಿದ್ದು,ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿದ್ದು, ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ದಿನದಲ್ಲಿ ಒಂದು ಗಂಟೆಯದರೂ ವ್ಯಾಯಾಮ ಹಾಗೂ ಇತರೆ ಚಟುವಟಿಕೆಗಳಿಗೆ ಗಮನ ನೀಡಬೇಕು. ಗ್ರಾಮೀಣ ಭಾಗದ ಸಾಮಾನ್ಯ ಜನರು ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಇಂತಹ ಆರೋಗ್ಯ ತಪಾಸಣಾ ಶಿಬಿರ ಗಳಿಂದ ಜನರು ಆರೋಗ್ಯ ತಪಾಸಣೆ ಮಾಡಿಕೊಂಡು ಚಿಕಿತ್ಸೆ ಪಡೆಯಲು ಸಾಧ್ಯ ಎಂದರು.ಇಂಡಿಯಾನ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಎಸ್.ಬಿ ನಿರೂಪ್ ಮಾತನಾಡಿ, ಗ್ರಾಮೀಣ ಹಾಗೂ ನಗರದ ಜನರಿಗೆ ಅರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ. ಆರೋಗ್ಯ ಜಾಗೃತಿಗೆ ಉಚಿತ ಅರೋಗ್ಯ ಶಿಬಿರಗಳು ಸಹಕಾರಿ. ಪಾಲಕರು, ಸಾರ್ವಜನಿಕರು, ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕೀಲು ಮತ್ತು ಮೂಳೆ ತಜ್ಞ ಡಾ. ನಯೀಮ್ ಸಿದ್ದಿಕ್, ಶಸ್ತ್ರಚಿಕಿತ್ಸಾ ತಜ್ಞ ಡಾ. ಚಿತ್ರಾ ವೈ ಭಟ್, ತಾಲೂಕು ರೆಡ್‌ಕ್ರಾಸ್ ಸಭಾಪತಿ ಕೆ.ಎನ್ ಕಾಂತರಾಜ್, ಕಾರ್ಯದರ್ಶಿ ವೀರಭದ್ರಸ್ವಾಮಿ, ಉಪಾಧ್ಯಕ್ಷ ಶಶಿಧರ್ ಬೆಕ್ಕಡಿ, ಪದಾಧಿಕಾರಿಗಳಾದ ಪ್ರವೀಣ್, ಅಜರುದ್ದಿನ್, ಕುಮಾರ್, ಪ್ರಜ್ವಲ್, ಮುಬಾರಕ್ ಹಾಗೂ ಇತರರು ಉಪಸ್ಥಿತರಿದ್ದರು.