ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯಂಗವಾಗಿ ಗುರುವಾರ ವಿವಿಧ ಕಸರತ್ತಿನ ಸ್ಪರ್ಧೆ, ಜಂಗೀ ಕುಸ್ತಿ ಗಮನ ಸೆಳೆದವು.ಬೆಳಗ್ಗೆ ಜರುಗಿದ ಭಾರ ಎತ್ತುವ, ವಿವಿಧ ಕಸರತ್ತಿನ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಪೈಲ್ವಾನರು ಭಾಗವಹಿ ಶಕ್ತಿ ಪ್ರದರ್ಶಿಸಿದರು. ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಜೈ ಹನುಮಾನ ಪಾದನಕಟ್ಟೆ ಪ್ರಥಮ, ವಿಠ್ಠಲ ರಾಮಣ್ಣ ಹಡಲಗಿ ದ್ವಿತೀಯ, ಸಂತೋಷ ಜಟ್ಟಿಗಿ ತೃತೀಯ ಸ್ಥಾನ ಪಡೆದುಕೊಂಡರು. ಒತಗಲ್ಲು ಸ್ಪರ್ಧೆಯಲ್ಲಿ ಶಿವಾನಂದ ಗೋಕಾಕ(ಬಳಬಟ್ಟಿ) ಪ್ರಥಮ, ವಿಠ್ಠಲ ಗುಳೇದಗುಡ್ಡ ದ್ವಿತೀಯ, ಮುತ್ತಪ್ಪ ಕಡ್ಲಿಮಟ್ಟಿ(ನಾಗೂರ) ತೃತೀಯ ಸ್ಥಾನ ಪಡೆದರು. ಸಾಗಕಲ್ಲ ಸ್ಪರ್ಧೆಯಲ್ಲಿ ಮುತ್ತು ಬನಹಟ್ಟಿ ಪ್ರಥಮ, ಕಿರಣ ಬಿಸನಾಳ ದ್ವಿತೀಯ, ಸಂತೋಷ ಬಿಸನಾಳ ತೃತೀಯ ಸ್ಥಾನ ಪಡೆದುಕೊಂಡರು.
ಕುಸ್ತಿ ಪಂದ್ಯಾವಳಿಸಂಜೆ ಜರುಗಿದ ಜಂಗೀಕುಸ್ತಿ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಸಾಂಗ್ಲಿ, ಜತ್ತ, ಚಡಚಣ, ಉಮದದಿ, ಲೋಣಿ, ಕಲಬುರಗಿ, ವಿಜಯಪುರ, ಮುದ್ದೇಬಿಹಾಳ, ತಾಳಿಕೋಟಿ, ಇವಣಗಿ, ನರಸಲಗಿ, ನಾಗೂರ ಸೇರಿದಂತೆ ವಿವಿಧೆಡೆ ಪೈಲ್ವಾನರು ಭಾಗವಹಿಸಿದ್ದರು. ಕಡೆ ಕುಸ್ತಿಯಲ್ಲಿ ಕಲಬುರಗಿಯ ಸಿದ್ದಪ್ಪ ಅಪ್ಪಣ್ಣ ಸೂರ್ಯವಂಶಿ ಬೆಳ್ಳಿ ಕಡೆಯನ್ನು ತಮ್ಮದಾಗಿಸಿಕೊಂಡರು. ರುಮಾಲು ಕುಸ್ತಿಯಲ್ಲಿ ಕುಮಸಗಿಯ ಕುಮಾರ ಬಿಸನಾಳ ಗೆಲುವು ಸಾಧಿಸಿದರು. ಹೊಲದಲ್ಲಿ ಪುಟ್ಟಿಗಾಡಿ ರೇಸ್ ಸಹ ಜರುಗಿತು. ಈ ಸಂದರ್ಭದಲ್ಲಿ ಜಾತ್ರಾಮಹೋತ್ಸವದ ಸಮಿತಿ ಸದಸ್ಯರು, ಗ್ರಾಮದ ಹಿರಿಯರು, ಅಪಾರ ಜನರು ಇದ್ದರು.
ಶನಿವಾರ ಗೆಳೆಯರ ಬಳಗದಿಂದ ಸಂಜೆ 4ಕ್ಕೆ ಕಬಡ್ಡಿ ಟೂರ್ನಾಮಂಟ್ ನಡೆಯಲಿದೆ. ರಾತ್ರಿ 9ಕ್ಕೆ ರಸಮಂಜರಿ ಕಾರ್ಯಕ್ರಮವಿದೆ ಎಂದು ಜಾತ್ರಾಮಹೋತ್ಸವ ಸಮಿತಿ ಸದಸ್ಯರು ತಿಳಿಸಿದ್ದಾರೆ.