ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಲೆಮಹದೇಶ್ವರ ವನ್ಯಧಾಮ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡುವ ಬಫರ್ ಜೋನ್ ವಲಯದ ಅಂಬಿಕಾಪುರ ಗ್ರಾಮದ ಬಳಿ ಕಾಣಿಸಿಕೊಂಡ ಚಿರತೆ ಸೆರೆಗೆ ಅರಣ್ಯಾ ಇಲಾಖೆ ಕಸರತ್ತು ನಡೆಸಿದೆ.ರೈತ ಜಬಿವುಲ್ ತೋಟದ ಮನೆಯ ಬಳಿ ಬೆಳಗ್ಗೆ 8.15ರಲ್ಲಿ ಚಿರತೆ ತನ್ನ ಎರಡು ಮರಿಗಳ ಜೊತೆ ಇರುವುದನ್ನು ಕಂಡು ರೈತ ಮಹಿಳೆ ಆತಂಕ ವ್ಯಕ್ತಪಡಿಸಿದ್ದು, ನಿರಂತರವಾಗಿ ಕಳೆದ ಹಲವಾರು ತಿಂಗಳುಗಳಿಂದ ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ, ಅಂಬಿಕಾಪುರ ತೋಟದ ಮನೆಗಳ ಬಳಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಚಿರತೆ ಕಾಟದಿಂದ ರೈತರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಚಿರತೆಯ ಚಲನವಲನ ಪತ್ತೆಹಚ್ಚಲು ಡ್ರೋಣ್ ಕ್ಯಾಮೆರಾವನ್ನು ಬಳಕೆ ಮಾಡಿ ರೈತರ ಜಮೀನು ಸೇರಿದಂತೆ ಪಕ್ಕದಲ್ಲಿರುವ ಉಡುತೊರೆ ಹಳ್ಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ಸಹ ಮಾಡಲಾಯಿತು.
ಸಂಪೂರ್ಣ ಮಾಹಿತಿಯನ್ನು ಪಡೆದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹೆಚ್ಚುವರಿ ಬೋನ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಗಂಗನ ದೊಡ್ಡಿ ಗ್ರಾಮದ ಬಳಿ ಚಿರತೆ ಸೆರೆ ಹಿಡಿಯಲು ತುಮಕೂರು ಗೇಜ್ ಬೋನ್ ಅಳವಡಿಸಲಾಗಿದೆ. ಹೀಗಾಗಿ ಹೆಚ್ಚುವರಿ ಬೋನ್ ಅಳವಡಿಸಿ ಚಿರತೆಗಳನ್ನು ಸರಿ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.ಅಂಬಿಕಾಪುರ ಸುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಟದಿಂದ ಆತಂಕ ಹೆಚ್ಚಿದ್ದು, ಮಾನವ ಪ್ರಾಣಿ, ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಸಾಕು ಪ್ರಾಣಿಗಳನ್ನು ಕೊಂದು ಭಕ್ಷಿಸುತ್ತಿರುವ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಅದರ ಚಲನವಲನವನ್ನು ಪತ್ತೆ ಹಚ್ಚಿ ಉಪಟಳ ನೀಡುತ್ತಿರುವ ಚಿರತೆಗಳನ್ನು ಹಿಡಿದು ಬೇರೆಡೆ ಬಿಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಅಮ್ಜದ್ ಖಾನ್, ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ.