ನಿಯಮಿತ ವ್ಯಾಯಾಮದಿಂದ ಉತ್ತಮ ಆರೋಗ್ಯ

| Published : Nov 23 2025, 03:30 AM IST

ಸಾರಾಂಶ

ಉತ್ತಮ ಆಹಾರ ಪದ್ಧತಿ, ದೈಹಿಕ ಶ್ರಮ ಮತ್ತು ನಿಯಮಿತ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಬಿಲ್‌ಡಿಇ ವಿಶ್ವವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕಿ ಡಾ.ಚಂದ್ರಿಕಾ ದೊಡ್ಡಿಹಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಉತ್ತಮ ಆಹಾರ ಪದ್ಧತಿ, ದೈಹಿಕ ಶ್ರಮ ಮತ್ತು ನಿಯಮಿತ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಬಿಲ್‌ಡಿಇ ವಿಶ್ವವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕಿ ಡಾ.ಚಂದ್ರಿಕಾ ದೊಡ್ಡಿಹಾಳ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗ ಹಾಗೂ ಸಿಂದಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಪ್ರಧಾನಮಂತ್ರಿ ಉಚ್ಛತರ ಶಿಕ್ಷಣ ಅಭಿಯಾನ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಬುಧವಾರ ಹಮ್ಮಿಕೊಂಡಿದ್ದ ಪೋಷಣೆ ಕುರಿತಾದ ಅರಿವು ಹಾಗೂ ಸಂವೇದನೆ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಯುವಸಮೂಹವು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದೆ ಎಂದರು.ಉತ್ತಮ ಆಹಾರ ಪದ್ಧತಿ, ದೈಹಿಕ ಶ್ರಮ ಹಾಗೂ ನಿಯಮಿತ ವ್ಯಾಯಾಮದ ಮೂಲಕ ಆರೋಗ್ಯವನ್ನು ಸಮರ್ಪಕವಾಗಿ ಕಾಪಾಡಿಕೊಳ್ಳಬಹುದು, ವೈದ್ಯಕೀಯ ದೃಷ್ಟಿಕೋನದಲ್ಲಿ ಪೋಷಕಾಂಶಗಳ ಮಹತ್ವ, ಅವುಗಳ ಕೊರತೆಯಿಂದ ಉಂಟಾಗುವ ರೋಗಗಳು ಹಾಗೂ ಅವುಗಳನ್ನು ತಡೆಯುವ ನೈಜ ಮಾರ್ಗಗಳ ಕುರಿತು ವಿವರಿಸಿದರು. ಸಮತೋಲನ ಆಹಾರ, ಸ್ಥಳೀಯವಾಗಿ ಲಭ್ಯವಿರುವ ಪೌಷ್ಟಿಕ ಆಹಾರಗಳ ಬಳಕೆ ಹಾಗೂ ದಿನನಿತ್ಯ ಜೀವನದಲ್ಲಿ ಸಣ್ಣ ಮಟ್ಟಿನ ವ್ಯಾಯಾಮವೂ ದೀರ್ಘಕಾಲದ ಆರೋಗ್ಯಕ್ಕೆ ಬಲವಾಗುತ್ತದೆ ಎಂದು ಸಲಹೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ನಟರಾಜ ದುರ್ಗಣ್ಣವರು ಸಮತೋಲನ ಆಹಾರದ ಮಹತ್ವ ಹಾಗೂ ಅದರ ಪಾಲನೆ ಎಂಬ ವಿಷಯದ ಕುರಿತು ಮಾತನಾಡಿ, ದೈನಂದಿನ ಆಹಾರಕ್ರಮದಲ್ಲಿ ಸಣ್ಣ ಬದಲಾವಣೆಗಳಿಂದಲೂ ನಾವು ಆರೋಗ್ಯಕರ ಸಮತೋಲನ ಕಾಯ್ದುಕೊಳ್ಳಬಹುದು. ಜಂಕ್ ಆಹಾರಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಹಾಗೂ ಆಹಾರೋತ್ಪನ್ನಗಳನ್ನು ಖರೀದಿಸುವ ಮುನ್ನ ಪ್ಯಾಕೆಟ್ ಮೇಲಿರುವ ಲೇಬಲ್‌ಗಳನ್ನು ತಪ್ಪದೇ ಓದಬೇಕು ಎಂದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್.ಎಸ್.ಹಳೇಮನಿ, ಮಹಾವಿದ್ಯಾಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಮತ್ತೀತರಿದ್ದರು.ಕಾರ್ಯಕ್ರಮದ ಸಂಯೋಜಕಿ ಡಾ.ಸವಿತಾ ಹುಲಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಆರ್.ಬೆನಕನಹಳ್ಳಿ ಸ್ವಾಗತಿಸಿದರು. ಡಾ.ವೈ.ಕೆಳಗೇರಿ ನಿರೂಪಿಸಿದರು.