ಸಾರಾಂಶ
ಹಾವೇರಿ: ಕಾಗಿನೆಲೆಯ ಕನಕ ಸಭಾಭವನದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಆಶ್ರಯದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಭಾವಚಿತ್ರ ತರಬೇತಿ ಕಾರ್ಯಾಗಾರ ಸಮಾರೋಪಗೊಂಡಿತು. ನಾಡಿನ ಬೇರೆ ಬೇರೆ ಭಾಗದಿಂದ ಬಂದಿದ್ದ ೨೦ ಯುವ ಕಲಾವಿದರು ಭಾವಚಿತ್ರಗಳ ರಚನಾ ಕೌಶಲ್ಯ ಕುರಿತು ತರಬೇತಿ ಪಡೆದರು. ರವೀಂದ್ರನಾಥ ಟ್ಯಾಗೋರ್, ಪಂಡಿತ ಭೀಮಸೇನ ಜೋಶಿ, ಪುಟ್ಟಣ್ಣ ಕಣಗಾಲ ಅವರುಗಳ ಜೊತೆ ನೆಲದ ದಾರ್ಶನಿಕರಾದ ಕನಕ, ಶರೀಫ, ಸರ್ವಜ್ಞರ ಮನಮೋಹಕ ಚಿತ್ರಗಳನ್ನು ಕಲಾವಿದರು ರಚಿಸಿದರು. ಪ್ರಸಿದ್ಧ ಕಲಾವಿದ ಹುಬ್ಬಳ್ಳಿಯ ದಯಾನಂದ ಕಾಮಕರ ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಇನ್ನೋರ್ವ ಕಲಾವಿದ ಕುಮಾರ ಕಾಟೇನಹಳ್ಳಿ ಮತ್ತು ಸಾಹಿತಿ ಡಾ. ಜಗನ್ನಾಥ ಗೇನಣ್ಣನವರ ಮಾರ್ಗದರ್ಶಿಗಳಾಗಿದ್ದರು. ಬಣ್ಣಗಳ ಮಿಶ್ರಣ, ಸಮತೋಲನ ರೇಖೆಗಳ ಜೋಡಣೆ, ಕ್ಯಾನವಾಸಿನ ಬಳಕೆ ಹೀಗೆ ಚಿತ್ರಕಲೆಯ ಮೂಲ ವ್ಯಾಕರಣವನ್ನು ಕಲಾವಿದರು ಪಡೆದರು. ಹಲವು ವಿನ್ಯಾಸಗಳಲ್ಲಿ ರೂಪುಗೊಂಡ ಕಲಾಕೃತಿಗಳ ಸಮಾರೂಪದಲ್ಲಿ ಪ್ರದರ್ಶನಗೊಂಡವು. ಲಲಿತಕಲಾ ಅಕಾಡೆಮಿಯ ನೂತನ ಸದಸ್ಯ, ಪ್ರಸಿದ್ಧ ಕಲಾವಿದ ಕರಿಯಪ್ಪ ಹಂಚಿನಮನಿ ಶಿಬಿರದ ಸಂಯೋಜಕರಾಗಿ ಅಕಾಡೆಮಿ ಇತಿಹಾಸದಲ್ಲಿ ಇದೊಂದು ಅಪರೂಪದ ಕಮ್ಮಟವಾಗಿದ್ದು, ಕಲಾಕ್ಷೇತ್ರಕ್ಕೆ ಬರುವ ಹೊಸಬರಿಗೆ ಅನ್ನದ ದಾರಿಯನ್ನು ಮತ್ತು ಕಲಾಕೌಶಲ್ಯವನ್ನು ಕಲಿಯುವ ಅವಕಾಶವಾಗಿತ್ತು ಎಂದರು. ಸಮಾರೋಪದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ವಹಿಸಿದ್ದರು. ಪರಿಮಳಾ ಜೈನ್ ಮುಖ್ಯ ಅತಿಥಿಗಳಾಗಿದ್ದರು. ಶಿಬಿರಾರ್ಥಿಗಳಾದ ಅನ್ನಪೂರ್ಣ (ಗದಗ) ಬಸವರಾಜ ಹಕ್ಕಿ, ಬಸಮ್ಮ, ಮಂಗಳೂರಿನ ಮನಮೋಹನ, ಹುಬ್ಬಳ್ಳಿಯ ಬಸವರಾಜ, ಬೀದರ್‌ನ ಗುರುನಾಥ, ವೀರೇಶ(ಗದಗ), ಬಾಗಲಕೋಟಿಯ ವಿನೋದ, ಬೆಂಗಳೂರಿನ ತಿಮ್ಮನಗೌಡ ಪಾಟೀಲ, ಮಹೇಶ, ಸಂತೋಷ ಹಾಗೂ ಹಾವೇರಿ ನಿರ್ಮಲಾ ಚೌಟಗಿ ತಮ್ಮ ಶಿಬಿರದ ಅನಿಸಿಕೆಗಳನ್ನು ಹಂಚಿಕೊಂಡು ಇದೊಂದು ಅತ್ಯಂತ ಉಪಯುಕ್ತ ಕಮ್ಮಟ ಎಂದರು.ಹಾವೇರಿ ಕಲಾ ಬಳಗದ ಸದಸ್ಯರಾದ ಜುಬೇದಾ ನಾಯಕ್, ಡಾ. ಅಂಬಿಕಾ ಹಂಚಾಟೆ, ಅನಿತಾ ಹರನಗಿರಿ ಮುಂತಾದವರು ಭಾಗಹಿಸಿದ್ದರು. ರೇಣುಕಾ ಗುಡಿಮನಿ ಪ್ರಾರ್ಥಿಸಿದರು. ಕಲಾವಿದ ಪೃಥ್ವಿರಾಜ ಬೆಟಗೇರಿ ನಿರೂಪಿಸಿದರು. ನಿರ್ಮಲಾ ವಂದಿಸಿದರು.