ಸಾರಾಂಶ
ದಲಿತರ ಬಗ್ಗೆ ಅವಹೇಳನಕಾರಿ ಮಾತುಗಳಾಡಿ ಅವಮಾನಿಸಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ ಅವರನ್ನು ಸರ್ಕಾರ ಗಡಿಪಾರು ಮಾಡಬೇಕು ಎಂದು ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ಅಧ್ಯಕ್ಷ ಆರ್.ಕಿರಣ್ ಕುಮಾರ್ ಒತ್ತಾಯಿಸಿದರು.
ಹೊಸಕೋಟೆ: ದಲಿತರ ಬಗ್ಗೆ ಅವಹೇಳನಕಾರಿ ಮಾತುಗಳಾಡಿ ಅವಮಾನಿಸಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ ಅವರನ್ನು ಸರ್ಕಾರ ಗಡಿಪಾರು ಮಾಡಬೇಕು ಎಂದು ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ಅಧ್ಯಕ್ಷ ಆರ್.ಕಿರಣ್ ಕುಮಾರ್ ಒತ್ತಾಯಿಸಿದರು.
ನಗರದ ತಾಲೂಕು ಕಚೇರಿ ವೃತ್ತದಲ್ಲಿ ಮುನಿರತ್ನಂ ನಾಯ್ಡು ಪ್ರತಿಕೃತಿ ದಹಿಸಿ, ಘೋಷಣೆ ಕೂಗಿದ ಪ್ರತಿಭಟನಾಕಾರರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಮುನಿರತ್ನಂ ನಾಯ್ಡು, ಲಂಚಕ್ಕೆ ಬೇಡಿಕೆ ಇಟ್ಟು ದಲಿತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಅವಹೇಳನ ಮಾಡಿದ್ದಲ್ಲದೆ, ಜಾತಿ ನಿಂದನೆ ಮಾಡಿರುವುದು ಅಕ್ಷಮ್ಯ ಅಪರಾಧ. ಎಷ್ಟೇ ಶಿಕ್ಷಣವಂತರಾದರೂ ನಾಗರಿಕತೆ ಇಂತಹ ಸಮಾಜ ಘಾತುಕರಿಂದ ಸಾಯುತ್ತಿದೆ. ಹಣದ ಆಸೆ, ಜಾತಿ, ಧರ್ಮಗಳ ಮಧ್ಯೆ ಮನುಷ್ಯತ್ವ ಮರೆತು ವೈಷಮ್ಯಗಳು ಜನರಲ್ಲಿ ಹುಟ್ಟಿಕೊಂಡಿದೆ. ಇದು ಶಾಶ್ವತವಾಗಿ ನಿಲ್ಲಬೇಕಾದರೆ ಮಾನವೀಯ ಮೌಲ್ಯಗಳು ಉಳಿಯಬೇಕು. ಆಗಲೆ ಎಲ್ಲಾ ವರ್ಗದ ಜನರು ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಬಾಳಲು ಸಾಧ್ಯ. ಆದ್ದರಿಂದ ಇಂತಹ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದರು.ಕರ್ನಾಟಕ ಅಹಿಂದ ರಾಜ್ಯ ಉಪಾಧ್ಯಕ್ಷ ಪ್ರಶಾಂತ್ ಬಂಡಹಳ್ಳಿ, ಸಂಚಾಲಕ ಡಿಎಸ್‌ಎಸ್ ಆನೇಕಲ್ ಕೃಷ್ಣಪ್ಪ, ರಾಜ್ಯ ಕಾರ್ಯದರ್ಶಿ ಅಹಿಂದ ಸಜ್ಜನ್, ತಾಪಂ ಮಾಜಿ ಸದಸ್ಯ ಡಾ.ವೆಂಕಟೇಶ್, ತಾಲೂಕು ಅಧ್ಯಕ್ಷ ಸಹದೇವ್, ಯುವ ಘಟಕದ ಅಧ್ಯಕ್ಷ ಗಜೇಂದ್ರ, ಪ್ರಚಾರ ಘಟಕದ ಅಧ್ಯಕ್ಷ ಚಲವಾದಿ ನಾಗೇಶ್, ತಿಮ್ಮಪ್ಪನಹಳ್ಳಿ ಗ್ರಾಮಸ್ಥರಾದ ನಾರಾಯಣಸ್ವಾಮಿ, ರಾಮಾಂಜಿ, ಮಂಜು, ಸುಬ್ರಹ್ಮಣ್ಯ, ಸಂದೀಪ್, ವನಿತ್, ಪವನ್ ಹಾಗೂ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.