ಸಾರಾಂಶ
ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 10000 ಎಕರೆ ಸೇರ್ಪಡೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಷ್ಟ್ರಪ್ರಾಣಿ ಹುಲಿ ಆವಾಸಸ್ಥಾನದ ರಕ್ಷಣೆ ಕುರಿತು ಮಹತ್ವಕಾಂಕ್ಷಿ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಭದ್ರಾ ಹುಲಿ ಮೀಸಲು ಅರಣ್ಯದ ಬಫರ್ ಝೋನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 10,000 ಎಕರೆ ಸಂರಕ್ಷಿತ ಅರಣ್ಯ ಪ್ರದೇಶ ಭದ್ರಾ ಬಫರ್ ಝೋನ್ ವ್ಯಾಪ್ತಿಗೆ ಸೇರ್ಪಡೆಯಾಗಿದೆ.
ಹೌದು ಇದುವರೆಗೆ ಭದ್ರಾವತಿ ಅರಣ್ಯ ವಿಭಾಗಕ್ಕೆ ಸೇರ್ಪಡೆಯಾಗಿದ್ದ ಉಂಬ್ಳೆಬೈಲು ಅರಣ್ಯ ವಲಯದ ಸುಮಾರು ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಭದ್ರಾ ಬಫರ್ ಝೋನ್ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ರಾಜ್ಯ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಉಂಬ್ಳೆಬೈಲು ಅರಣ್ಯ ವಲಯದ ಚೋರನಾಡುಹಳ್ಳಿ ರಾಜ್ಯ ಅರಣ್ಯ ಮತ್ತು ಕೈದೊಟ್ಲು ಕಿರು ಅರಣ್ಯದ 27.95 ಚದರ ಕಿ.ಮೀಟರ್ ಅಂದರೆ ಸುಮಾರು ಏಳು ಸಾವಿರ ಎಕರೆ ಹಾಗೂ ಕಾಕನಹಸುಡಿ ಮೀಸಲು ಅರಣ್ಯದ 15. 59 ಚದರ ಕಿಲೋಮೀಟರ್ ಅಂದರೆ ಮೂರು ಸಾವಿರ ಎಕರೆ ಅರಣ್ಯವನ್ನು ಭದ್ರಾ ಬಫರ್ ಝೋನ್ ಗೆ ಸೇರ್ಪಡೆ ಮಾಡಲಾಗಿದೆ.ಉಂಬ್ಳೆ ಬೈಲು ಅರಣ್ಯ ವಿಭಾಗದ ವ್ಯಾಪ್ತಿಯ ಗ್ರಾಮಗಳ ಜನರಿಗೆ ಯಾವುದೇ ತೊಂದರೆಯಾಗದಂತೆ ಜನವಸತಿ ಇರುವ ಗ್ರಾಮಗಳನ್ನು ಹೊರತುಪಡಿಸಿ ಕೇವಲ ಅರಣ್ಯ ಪ್ರದೇಶವನ್ನು ಮಾತ್ರ ಭದ್ರಾ ಬಫರ್ ಝೋನ್ ಗೆ ಸೇರ್ಪಡೆ ಮಾಡಲಾಗಿದೆ. ಉಂಬ್ಳೆಬೈಲು ಅರಣ್ಯ ವಿಭಾಗ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅರಣ್ಯ ಪ್ರದೇಶವಾಗಿದೆ. ಈ ಭಾಗದಲ್ಲಿ ಹುಲಿಗಳ ಚಲನ ವಲನದ ಮೇಲೆ ನಿಗಾ ಇಡಲು, ಸಂತಾನೋತ್ಪತ್ತಿ ಮತ್ತು ಅವುಗಳ ಸಂರಕ್ಷಣೆ ಜೊತೆ ಜೊತೆಗೆ ಕಾಡಿನ ಸಮಗ್ರ ವನ್ಯ ಜೀವಿಗಳ ರಕ್ಷಣೆಗೆ ಈ ಮೂಲಕ ಒತ್ತು ಸಿಕ್ಕಂತಾಗಿದೆ.--- ಬಾಕ್ಸ್ --ಪ್ರಯೋಜನಗಳು:
ಭದ್ರಾ ಬಫರ್ ಝೋನ್ ವಿಸ್ತರಣೆಯಿಂದ ಆ ಭಾಗದಲ್ಲಿ ಕೇಂದ್ರ ಸರ್ಕಾರದ ಹುಲಿ ಸಂರಕ್ಷಣಾ ಪ್ರಾಧಿಕಾರದ ಆರ್ಥಿಕ ನೆರವು ಸಿಗುವುದಲ್ಲದೆ ಅಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕವೂ ಆಗಲಿದೆ. ಹೊಸ ಕಳ್ಳ ಬೇಟೆ ನಿಗ್ರಹ ಶಿಬಿರಗಳ ಸ್ಥಾಪನೆ ಮತ್ತು ಬೆಂಕಿ ಯಿಂದ ಕಾಡನ್ನು ರಕ್ಷಿಸಲು ಅರಣ್ಯ ಇಲಾಖೆಗೆ ಹೆಚ್ಚುವರಿ ನೆರವು ಸಿಗಲಿದೆ.ಇದಲ್ಲದೆ ಆನೆ ಯೋಜನೆಯಿಂದ ಕೂಡ ನೆರವು ಸಿಗಲಿದ್ದು, ಈ ಮೂಲಕ ಆನೆ ಕಾರಿಡಾರ್ ಕೂಡ ಸಂರಕ್ಷಣೆಯಾಗಲಿದೆ. ಹೀಗಾಗಿ ಮಾನವ ಮತ್ತು ಆನೆ ಸಂಘರ್ಷಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
--ಸ್ಥಳೀಯರಿಗಿಲ್ಲ ಸಮಸ್ಯೆ:ಉಂಬ್ಳೆಬೈಲು ಅರಣ್ಯ ವಲಯ ವ್ಯಾಪ್ತಿಯ 10,000 ಅರಣ್ಯ ಪ್ರದೇಶ ಭದ್ರ ಬಫರ್ ಝೋನ್ ಗೆ ಸೇರುವುದರಿಂದ ಆ ವ್ಯಾಪ್ತಿ ಯಲ್ಲಿರುವ ಹಳ್ಳಿಗಳ ಜನರಿಗೆ ಯಾವುದೇ ತೊಂದರೆಯಾಗಲ್ಲ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಕೇವಲ ಅರಣ್ಯ ಪ್ರದೇಶವನ್ನು ಮಾತ್ರ ಭದ್ರ ಬಫರ್ ಝೋನ್ ವ್ಯಾಪ್ತಿಗೆ ಸೇರಿಸಲಾಗಿದೆಯೇ ಹೊರತು ಜನ ವಸತಿ ಪ್ರದೇಶಗಳನ್ನು ಈ ವ್ಯಾಪ್ತಿಗೆ ಸೇರಿಸಿಲ್ಲ. ಹೀಗಾಗಿ ಇಲ್ಲಿನ ಜನರ ದೈನಂದಿನ ಕೆಲಸ ಕಾರ್ಯಗಳು ಈ ಹಿಂದೆ ಹೇಗೆ ನಡೆಯುತ್ತಿದ್ದವೋ ಮುಂದೆಯೂ ಹಾಗೆಯೇ ನಡೆಯಲಿವೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಚಿಕ್ಕಮಗಳೂರು ಸಿಸಿಎಫ್ ಯಶಪಾಲ್ ಕ್ಷೀರಸಾಗರ್ ತಿಳಿಸಿದ್ದಾರೆ.
2011ರಲ್ಲಿಯೂ ಭದ್ರಾ ಬಫರ್ ಝೋನ್ ವಿಸ್ತರಣೆಯಾಗಿತ್ತು. ಅಂದು ವಿಸ್ತರಣೆಯಾದ ಪ್ರದೇಶದಲ್ಲಿ ಇಂದಿಗೂ 53 ಹಳ್ಳಿ ಗಳಿವೆ. ಆದರೆ ಅಂದು ಹಳ್ಳಿಗಳನ್ನೂ ಸೇರಿಸಿ ಬಫರ್ ಝೋನ್ ಎಂದು ಗುರುತಿಸಲಾಗಿತ್ತು. ಆದರೆ ಈ ಬಾರಿ ಹಳ್ಳಿಗಳನ್ನು ಹೊರತುಪಡಿಸಿ ಕೇವಲ ಅರಣ್ಯ ಪ್ರದೇಶವನ್ನು ಮಾತ್ರ ಬಫರ್ ಝೋನ್ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್ ಸಂತಸ ವ್ಯಕ್ತಪಡಿಸಿದ್ದಾರೆ.---ಪೋಟೋ ಫೈಲ್ ನೇಮ್ 29 ಕೆಸಿಕೆಎಂ1