ತುಮಕೂರು ಜಿಲ್ಲೆಯ ಸಿರಿಧಾನ್ಯ ಬೆಳೆಯನ್ನು 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ಸಿರಿಧಾನ್ಯ ಬೆಳೆಯನ್ನು 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ ಪ್ರಯುಕ್ತ ಕೃಷಿ ಇಲಾಖೆಯಿಂದ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ ಭೂಮಿಯಲ್ಲಿ 6 ಸಾವಿರ ಹೆ. ಪ್ರದೇಶದಲ್ಲಿ ಮಾತ್ರ ಸಿರಿಧಾನ್ಯವನ್ನು ಬೆಳೆಯಲಾಗುತ್ತಿದ್ದು, ಅದನ್ನು 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಸಿರಿಧಾನ್ಯಗಳ ಬಳಕೆ, ಖರೀದಿಸುವವರ ಸಂಖ್ಯೆ ಕಡಿಮೆ ಇರುವುದರಿಂದ ಸಿರಿಧಾನ್ಯಕ್ಕೆ ಹೆಚ್ಚಿನ ಬೇಡಿಕೆಯಿಲ್ಲದೆ ರೈತರು ಸಿರಿಧಾನ್ಯ ಬೆಳೆಯಲು ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ 10 ಸಾವಿರ ರು. ಪ್ರೋತ್ಸಾಹ ಧನವನ್ನು ರೈತರ ಖಾತೆಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದರಲ್ಲದೆ ಸಿರಿಧಾನ್ಯ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಈ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.ಸ್ಪರ್ಧೆಯಲ್ಲಿ ಸಿರಿಧಾನ್ಯಗಳನ್ನು ಬಳಸಿ ತಯಾರಿಸಲಾದ ಸಾಮೆ ಪಾಲಾಕ್ ಪನ್ನೀರ್ ರೈಸ್, ರಾಗಿ ಉಪ್ಪಿಟ್ಟು, ನವಣೆ ಹಲ್ವಾ, ಹುರುಳಿಕಾಳು ತೊಕ್ಕು, ರಾಗಿ ಉಪ್ಪಿಟ್ಟು, ಪೊಂಗಲ್, ಪಾಯಸ, ಉಪ್ಪಿಟ್ಟು, ಕರ್ಜಿಕಾಯಿ, ಮತ್ತಿತರ ತಿನಿಸುಗಳ ರುಚಿ ಸವಿದ ಅವರು ಅಕ್ಕಿಯಿಂದ ತಯಾರಿಸುವ ತಿನಿಸುಗಳಿಗಿಂತ ಈ ಖಾದ್ಯಗಳು ರುಚಿಯಾಗಿವೆ. ಸಿರಿಧಾನ್ಯಗಳಿಂದ ತಯಾರಿಸಲಾದ ಆಹಾರ ಸೇವಿಸಿದಲ್ಲಿ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳನ್ನು ನಿಯಂತ್ರಣಕ್ಕೆ ತರಬಹುದಲ್ಲದೆ ಸಮತೋಲನವನ್ನು ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಇಲಾಖೆ ಅತ್ಯಂತ ಕ್ರಿಯಾ ಶೀಲವಾಗಿ ಕೆಲಸ ಮಾಡುತ್ತಿದ್ದು, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ವಿಶ್ವಸಂಸ್ಥೆಯು ಕಳೆದ 2023 ನ್ನು ಸಿರಿಧಾನ್ಯಗಳ ವರ್ಷವೆಂದು ಘೋಷಿಸಿತ್ತು. ಅದರ ಭಾಗವಾಗಿ ಜಿಲ್ಲೆಯ ಸಿರಿಧಾನ್ಯ ಬೆಳೆಗಾರರನ್ನು ಮತ್ತು ಸಿರಿಧಾನ್ಯ ಬಳಕೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಮಹಿಳೆಯರು ಸಿರಿಧಾನ್ಯ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಬಂದಿರುವುದು ಸಂತಸ ತಂದಿದ್ದು, ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ನೀಡಬೇಕೆಂದು ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ರಮೇಶ್ ಮಾತನಾಡಿ ರಾಜ್ಯದಲ್ಲಿ ಸಿರಿಧಾನ್ಯ ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಲ್ಲಿ ಮೊದಲು ಚಿತ್ರದುರ್ಗ. ಎರಡನೆಯದು ತುಮಕೂರು ಜಿಲ್ಲೆ. ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಸಿರಿಧಾನ್ಯ ಬೆಳೆಯುವ ಹಾಗೂ ಬಳಕೆ ಮಾಡುವವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ ಎಂದರಲ್ಲದೆ ಸಿರಿಧಾನ್ಯ ಖಾದ್ಯ ತಯಾರಿಸುವವರು ಮುಂದೆ ಬಂದರೆ ಅಗತ್ಯ ತರಬೇತಿ, ಮಾರುಕಟ್ಟೆ ವ್ಯವಸ್ಥೆ, ಸಹಾಯಧನ, 4 ಲಕ್ಷ ರು.ಗಳವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಜಿಲ್ಲಾ ಮಟ್ಟದ ಸ್ಪರ್ಧಾ ವಿಜೇತರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ವಿಜೇತರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ ರು., ದ್ವಿತೀಯ-3000 ಹಾಗೂ ತೃತೀಯ ಬಹುಮಾನವಾಗಿ 2 ಸಾವಿರ ರು.ಗಳ ನಗದು ಬಹುಮಾನವನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸಿರಿಧಾನ್ಯ ಖಾದ್ಯ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜೆ ನಾಗರತ್ನ, ದ್ವಿತೀಯ ಸ್ಥಾನ ಗಳಿಸಿದ ಬಿ. ತುಳಸಿ, ತೃತೀಯ ಸ್ಥಾನ ಪಡೆದ ಎಸ್.ಆರ್. ಶಶಿಕಲಾ ಹಾಗೂ ಮರೆತು ಹೋದ ಖಾದ್ಯ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾದ ಕೆ.ನಳಿನ, ದ್ವಿತೀಯ ಬಹುಮಾನ ಪಡೆದ ಪ್ರಗತಿ ಜಿ.ಆರ್. ಹಾಗೂ ತೃತೀಯ ಬಹುಮಾನ ಗಳಿಸಿದ ನಾಗಶ್ರೀ ಸಿ.ವಿ. ಅವರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಸ್ಪರ್ಧೆಯ ತೀರ್ಪುಗಾರರಾಗಿ ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಆಹಾರ ವಿಜ್ಞಾನ ಮತ್ತು ಪೋಷಣಾ ವಿಭಾಗದ ವಿಜ್ಞಾನಿ ಡಾ: ಸಿಂಧು ಪಿ.ಬಿ, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ರಾಧ ಬಣಕಾರ್ ಆಗಮಿಸಿದ್ದರು. ವಿಜೇತರಿಗೆ ೨೦೨೫ರ ಜನವರಿ ಮಾಹೆಯಲ್ಲಿ ಏರ್ಪಡಿಸಲಾಗುವ ಸಿರಿಧಾನ್ಯ ಮೇಳದಲ್ಲಿ ನಗದು ಬಹುಮಾನ ವಿತರಿಸಲಾಗುವುದು.
ಕೃಷಿ ಉಪನಿರ್ದೇಶಕ ಹುಲಿರಾಜು ಹಾಗೂ ಹೆಚ್.ಸಿ. ಚಂದ್ರಕುಮಾರ್, ಸಹಾಯಕ ಕೃಷಿ ನಿರ್ದೇಶಕ ಗಿರಿಜಮ್ಮ ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿ, ಸ್ಪರ್ಧಿಗಳು ಹಾಜರಿದ್ದರು.ಫೋಟೋ : 0000000000000
---------------ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯುವ ದೇಶವಾಗಿ ಹೊರ ಹೊಮ್ಮುತ್ತಿದೆ. ನಮ್ಮ ಆಹಾರ ಶೈಲಿಗಳನ್ನು ಬದಲಾಯಿಸಿಕೊಳ್ಳಬೇಕು. ಹಿರಿಯರು ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದುದರಿಂದ ಗಟ್ಟಿಮುಟ್ಟಾಗಿದ್ದರು. ಸಿರಿಧಾನ್ಯಗಳನ್ನು ಜನರ ಜೀವನ ಶೈಲಿಗೆ ಮತ್ತೊಮ್ಮೆ ತರಬೇಕೆಂಬ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ಸಿರಿಧಾನ್ಯ ಮೇಳವನ್ನು ಏರ್ಪಡಿಸಲಾಗಿದೆ. - ಶುಭ ಕಲ್ಯಾಣ್, ಜಿಲ್ಲಾಧಿಕಾರಿ ಹಲವಾರು ರೋಗಗಳಿಗೆ ಸಿರಿಧಾನ್ಯ ಬಳಕೆ ರಾಮಬಾಣವಾಗಿದೆ. ನಮ್ಮ ಭಾರತೀಯ ಪಾರಂಪರಿಕ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಸಿರಿಧಾನ್ಯಗಳು ಆರೋಗ್ಯವರ್ಧನೆಗೆ ಪೂರಕವಾಗಿವೆ. ಜನ ಸಾಮಾನ್ಯರು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಸಿದರೆ ರೋಗ ಮುಕ್ತರಾಗಿರಲು ಸಾಧ್ಯ- ಜಿ.ಪ್ರಭು, ಜಿಪಂ ಸಿಇಒ.