ದರ ಏರಿಕೆ ನಿರೀಕ್ಷೆ: ಈರುಳ್ಳಿ ಬೆಳೆಗೆ ಗೂಡಿನ ರಕ್ಷಣೆ ಮಾಡಿದ ರೈತರು

| Published : Oct 19 2023, 12:46 AM IST

ಸಾರಾಂಶ

ಸತತ ಬೆಲೆ ಕುಸಿತ ಹಾಗೂ ಅತಿವೃಷ್ಟಿಯಿಂದ ಈರುಳ್ಳಿ ಬೆಳೆದು ಕೈ ಸುಟ್ಟುಕೊಂಡಿದ್ದ ತಾಲೂಕಿನ ಬೆಳೆಗಾರರು ಈ ಬಾರಿ ಈರುಳ್ಳಿ ಬದಲು ಮೆಕ್ಕೆಜೋಳ ಹೆಚ್ಚಾಗಿ ಬೆಳೆದಿದ್ದಾರೆ. ಅಲ್ಲದೆ ಕೆಲ ರೈತರು ಈರುಳ್ಳಿ ಬೆಳೆದಿದ್ದರೂ ಮಳೆ ಕೊರತೆಯಿಂದ ಸರಿಯಾಗಿ ಬೆಳೆ ಬಂದಿಲ್ಲ. ಇದರ ನಡುವೆಯೂ ಕೆಲ ಬೆಳೆಗಾರರು ಟ್ರ್ಯಾಕ್ಟರ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಹೀಗಾಗಿ ತಮಗೆ ಈರುಳ್ಳಿ ಶುಕ್ರದೆಸೆ ತಂದುಕೊಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಸತತ ಬೆಲೆ ಕುಸಿತ ಹಾಗೂ ಅತಿವೃಷ್ಟಿಯಿಂದ ಈರುಳ್ಳಿ ಬೆಳೆದು ಕೈ ಸುಟ್ಟುಕೊಂಡಿದ್ದ ತಾಲೂಕಿನ ಬೆಳೆಗಾರರು ಈ ಬಾರಿ ಈರುಳ್ಳಿ ಬದಲು ಮೆಕ್ಕೆಜೋಳ ಹೆಚ್ಚಾಗಿ ಬೆಳೆದಿದ್ದಾರೆ. ಅಲ್ಲದೆ ಕೆಲ ರೈತರು ಈರುಳ್ಳಿ ಬೆಳೆದಿದ್ದರೂ ಮಳೆ ಕೊರತೆಯಿಂದ ಸರಿಯಾಗಿ ಬೆಳೆ ಬಂದಿಲ್ಲ. ಇದರ ನಡುವೆಯೂ ಕೆಲ ಬೆಳೆಗಾರರು ಟ್ರ್ಯಾಕ್ಟರ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಹೀಗಾಗಿ ತಮಗೆ ಈರುಳ್ಳಿ ಶುಕ್ರದೆಸೆ ತಂದುಕೊಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಈರುಳ್ಳಿ ಕ್ಷೇತ್ರ ಕುಸಿತ:

ಕಳೆದ ವರ್ಷ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್‌ನಷ್ಟು ಈರುಳ್ಳಿ ಬೆಳೆದಿದ್ದರು. ಆದರೆ, ಕೊಳೆ ರೋಗ, ಅತಿವೃಷ್ಟಿ ಹಾಗೂ ಬೆಲೆ ಕುಸಿತದಿಂದ ಕಂಗೆಟ್ಟು ಹೋಗಿದ್ದ ಈರುಳ್ಳಿ ಬೆಳೆಗಾರರು ಈ ಬಾರಿ ಅದನ್ನು ಬೆಳೆಯುವುದನ್ನೇ ಕೈ ಬಿಟ್ಟಿದ್ದಾರೆ. ಇದರ ಪರಿಣಾಮವಾಗಿ ತಾಲೂಕಿನಲ್ಲಿ 650 ಹೆಕ್ಟೇರ್‌ನಷ್ಟು ಮಾತ್ರ ಈರುಳ್ಳಿ ಬೆಳೆಯಲಾಗಿದೆ. ಅದರಲ್ಲಿ ಮಳೆ ಕೊರತೆಯಿಂದ 450 ಹೆಕ್ಟೇರ್‌ನಷ್ಟು ಬೆಳೆಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯಿಂದ ಅಂದಾಜಿಸಲಾಗಿದೆ. ಇದರಿಂದ ಸಹಜವಾಗಿಯೇ ಈ ಬಾರಿ ಈರುಳ್ಳಿ ಬೆಳೆದ ರೈತರಿಗೆ ಅದೃಷ್ಟ ಖುಲಾಯಿಸುವ ಸಾಧ್ಯತೆಯಿದೆ.

ಗೂಡು ಹಾಕುತ್ತಿರುವ ರೈತರು:

ತಾಲೂಕಿನ ಹಲಗೇರಿ, ಕುಪ್ಪೇಲೂರ, ಗಂಗಾಪುರ, ಯರೇಕುಪ್ಪಿ, ಉಕ್ಕುಂದ, ಸರ್ವಂದ ಸೇರಿ ವಿವಿಧ ಗ್ರಾಮಗಳ ಬೆರಳೆಣಿಕೆಯಷ್ಟು ರೈತರು ಈ ಬಾರಿ ಈರುಳ್ಳಿ ಬೆಳೆದಿದ್ದಾರೆ. ಕೆಲವರ ಈರುಳ್ಳಿ ಸಂಪೂರ್ಣ ಹಾಳಾಗಿದ್ದರೆ, ಇನ್ನೂ ಕೆಲ ರೈತರು ನೀರು ಒದಗಿಸಿ ಬೆಳೆದಿದ್ದಾರೆ. ಅಂತಹ ಅಳಿದುಳಿದ ಬೆಳೆ ಇದೀಗ ಬೆಳೆದು ನಿಂತಿದೆ. ಆದರೆ ಪದೇ ಪದೇ ವಾತಾವರಣದಲ್ಲಿ ಏರುಪೇರಾಗುತ್ತಿರುವುದರಿಂದ ಆ ಬೆಳೆ ಕೂಡ ಹಾಳಾಗುವ ಆತಂಕ ರೈತರಲ್ಲಿ ಮೂಡಿದೆ. ಆದ್ದರಿಂದ ಈರುಳ್ಳಿಯನ್ನು ಕಿತ್ತು ಗೂಡು ಹಾಕುತ್ತಿದ್ದಾರೆ.

ಮಳೆಯ ಕೊರತೆಯಿಂದ ಈರುಳ್ಳಿ ಬೆಳೆಯುವುದು ಹಾಗೂ ಅದನ್ನು ಉಳಿಸಿಕೊಳ್ಳುವುದು ಬಹಳ ಕಷ್ಟವಾಗಿತ್ತು. ಆದರೂ ಅಲ್ಪಸ್ವಲ್ಪ ಈರುಳ್ಳಿ ಉಳಿದುಕೊಂಡಿದೆ. ಅದನ್ನು ಉಳಿಸಿಕೊಳ್ಳಲು ಕಿತ್ತು ಗೂಡು ಹಾಕಿದ್ದೇವೆ. ಆದರೆ ಈ ಹಿಂದೆ ಬಾರದ ಮಳೆ ಈಗ ಬರಬಾರದು. ಮಳೆ ಹೆಚ್ಚಾದರೆ ಬಂಪರ್ ಬೆಲೆ ಕೊಡುವ ಅಳಿದುಳಿದ ಈರುಳ್ಳಿ ಕೂಡ ನೀರು ಪಾಲಾಗಲಿದೆ ಎನ್ನುತ್ತಾರೆ ಈರುಳ್ಳಿ ಬೆಳೆದ ಹಲಗೇರಿ ರೈತ

ಪ್ರಕಾಶ.

ಸದ್ಯ ಸ್ಥಳೀಯವಾಗಿ ಈರುಳ್ಳಿ ಹೆಚ್ಚಾಗಿ ಬೆಳೆಯದ ಕಾರಣ ಹಾಗೂ ಅದು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಾರದ ಹಿನ್ನೆಲೆ 1 ಕ್ವಿಂಟಲ್ ಈರುಳ್ಳಿ ₹1800 ನಿಂದ 3 ಸಾವಿರದವರೆಗೆ ಮಾರಾಟವಾಗುತ್ತಿದೆ. ನಿತ್ಯವೂ 100 ಚೀಲದಷ್ಟು ಆವಕ ಆಗುತ್ತಿದೆ. ಮುಂದೆ ಬೆಲೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ರಾಣಿಬೆನ್ನೂರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಪರಮೇಶ ನಾಯಕ.