₹7100 ಕೋಟಿ ಬಂಡವಾಳ ನಿರೀಕ್ಷೆ: ಪ್ರಿಯಾಂಕ್‌

| Published : Jul 10 2025, 01:45 AM IST

ಸಾರಾಂಶ

ರಾಜ್ಯ ಸರ್ಕಾರದ ಪರ ಐಟಿ ಬಿಟಿ ಇಲಾಖೆಯ ನಿಯೋಗವು ಅಮೆರಿಕದ ಮೂರು ನಗರಗಳಲ್ಲಿ ಸತತ 10 ದಿನಗಳ ಕಾಲ ರೋಡ್‌ ಶೋ, 120ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಸಭೆ, ಸಮ್ಮೇಳನಗಳನ್ನು ನಡೆಸಿದ ಪರಿಣಾಮ ರಾಜ್ಯಕ್ಕೆ 7100 ಕೋಟಿ ರು. ಬಂಡವಾಳ ಹೂಡಿಕೆಯ ಭರವಸೆ ದೊರಕಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದ ಪರ ಐಟಿ ಬಿಟಿ ಇಲಾಖೆಯ ನಿಯೋಗವು ಅಮೆರಿಕದ ಮೂರು ನಗರಗಳಲ್ಲಿ ಸತತ 10 ದಿನಗಳ ಕಾಲ ರೋಡ್‌ ಶೋ, 120ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಸಭೆ, ಸಮ್ಮೇಳನಗಳನ್ನು ನಡೆಸಿದ ಪರಿಣಾಮ ರಾಜ್ಯಕ್ಕೆ 7100 ಕೋಟಿ ರು. ಬಂಡವಾಳ ಹೂಡಿಕೆಯ ಭರವಸೆ ದೊರಕಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐಟಿ ಬಿಟಿ ಇಲಾಖೆಯಿಂದ ಜೂನ್‌ ತಿಂಗಳಲ್ಲಿ ಅಮೆರಿಕದ ಬೋಸ್ಟನ್‌, ನ್ಯೂಯಾರ್ಕ್‌ ಮತ್ತು ಸ್ಯಾನ್‌ ಫ್ರಾನ್ಸಿಸ್ಕೋ ನಗರಗಳಲ್ಲಿ ನಡೆಸಲಾದ 10 ದಿನಗಳ ಯುಎಸ್‌ ರೋಡ್‌ ಶೋ ಯಶಸ್ವಿಯಾಗಿದೆ. ಮೂರೂ ನಗರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಂದ ಸ್ಟಾರ್ಟ್‌ ಅಪ್‌ಗಳ ವರೆಗೆ ಅ‍ವುಗಳ ಪ್ರತಿನಿಧಿಗಳೊಂದಿಗೆ ಮುಖಾಮುಖಿ ಸಭೆ, ವಿವಿಧ ವಿಶ್ವವಿದ್ಯಾಲಯಗಳಿಗೆ ಶೈಕ್ಷಣಿಕ ಭೇಡಿ, ತಾತ್ಕಾಲಿಕ ಉದ್ಯಮ ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ದುಂಡು ಮೇಜಿನ ಸಭೆ ಸೇರಿ ಒಟ್ಟು 120ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಲಾಯಿತು. ಇದರ ಫಲವಾಗಿ ಮೂಲ ಸೌಕರ್ಯ, ಪೂರೈಕೆ ಸರಪಳಿ, ಪ್ರತಿಭೆಗಳ ನೇಮಕಾತಿ, ಸಂಶೋಧನೆ ಮತ್ತು ಅಭಿವೃದ್ಧಿ, ಸಹಭಾಗಿತ್ವದ ಯೋಜನೆಗಳ ಮೂಲಕ ವಿವಿಧ ಸಂಸ್ಥೆಗಳಿಂದ ಕರ್ನಾಟಕದಲ್ಲಿ 7100 ಕೋಟಿ ರು. ಬಂಡವಾಳ ಹೂಡುವ ಭರವಸೆ ದೊರೆತಿದೆ. ಇದರಿಂದ 9200 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ತನ್ಮೂಲಕ ಭಾರತದ ಪ್ರಮುಖ ಆವಿಷ್ಕಾರ ಮತ್ತು ತಂತ್ರಜ್ಞಾನ ಕೇಂದ್ರವಾಗಿ ರಾಜ್ಯದ ಸ್ಥಾನವನ್ನು ಬಲಗೊಳಿಸಿದೆ ಎಂದರು.

‘ಎಸ್‌-ಬೆಂಗಳೂರು’ ಮೂಲಕ

ಸಮಸ್ಯೆಗಳಿಗೆ ಪರಿಹಾರ ಯತ್ನ

ಅಮೆರಿಕದ ಸ್ಯಾನ್‌ ಪ್ರಾನ್ಸಿಸ್ಕೊ ನಗರದ ಮಾದರಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಭವಿಷ್ಯದ ಬೆಂಗಳೂರು ಹೇಗಿರಬೇಕೆಂದು ರೂಪಿಸಲು ‘ಎಸ್‌-ಬೆಂಗಳೂರು’ ಎಂಬ ಕಾರ್ಯಕ್ರಮ ಸಿದ್ಧಪಡಿಸಲಾಗಿದೆ ಎಂದು ಇದೇ ವೇಳೆ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಸ್ಯಾನ್ ಫ್ರಾನ್ಸಿಸ್ಕೊ ವ್ಯಾಪ್ತಿಯ ಕಂಪನಿಗಳ ಗುಂಪು ಮಾಡಿ ಆ ನಗರದ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಕೊಡೋ ಯೋಜನೆ ಇದೆ. ಇದೇ ರೀತಿ ಎಸ್‌-ಬೆಂಗಳೂರು ಎಂಬ ವಿಶೇಷ ಯೋಜನೆ ರೂಪಿಸಲಾಗಿದೆ. ಸ್ಥಳೀಯ ಕೈಗಾರಿಕೆಳು, ಸ್ಟಾರ್ಟ್‌ಅಪ್‌ಗಳು, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕಾರಿ ತಂಡಗಳನ್ನು ರಚಿಸಲಾಗುತ್ತದೆ. ಅವುಗಳು ಸಿದ್ಧಪಡಿಸಿ ನೀಡುವ ಪರಿಹಾರ ಕಾರ್ಯಗಳನ್ನು ಸರ್ಕಾರ ಪರಿಶೀಲಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಇದು ಯಶಸ್ವಿಯಾದರೆ ದೊಡ್ಡಮಟ್ಟದ ಅನುದಾನ ಒದಗಿಸುವ ಮೂಲಕ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ಇದೆಲ್ಲವೂ ಮುಂದಿನ ಆರು ತಿಂಗಳಲ್ಲಿ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನ ಘನತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ, ನೀರು ಸರಬರಾಜು, ವಾಹನ ಸಂಚಾರ, ಸಂಚಾರ ದಟ್ಟಣೆ ಸೇರಿ ನಗರಕ್ಕೆ ಸಂಬಂಧಿಸಿದ ಸುಮಾರು 150 ಸಮಸ್ಯೆಗಳ ಕುರಿತು ಇತ್ತೀಚಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಇದರಲ್ಲಿ ಪ್ರಮುಖವಾದ 10-15 ಸಮಸ್ಯೆಗಳಿಗೆ ಆರಂಭಿಕ ಹಂತದಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ರೂಪಿಸುವಂತೆ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಉದಾಹರಣೆಗೆ ಯಾವುದಾದರೂ ಕಂಪನಿ, ಸ್ಟಾರ್ಟ್ಅಪ್‌ ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ತನ್ನದೇ ಆವಿಷ್ಕಾರದ ಯೋಜನೆ ರೂಪಿಸಿ ಸರ್ಕಾರಕ್ಕೆ ತಿಳಿಸಿದರೆ ಅದರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ ಪ್ರಾಯೋಗಿಕ ಪ್ರಯತ್ನ ನಡೆಸಲಾಗುವುದು. ಅದು ಅತ್ಯಂತ ಪರಿಣಾಮಕಾರಿಯಾಗಿ ಕಂಡುಬಂದರೆ ಸಮಗ್ರವಾಗಿ ಜಾರಿಗೆ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.