ಉತ್ತಮ ಫಲಿತಾಂಶ ನಿರೀಕ್ಷೆ ಪ್ರತಿ ಉಪನ್ಯಾಸಕನ ಗುರಿ

| Published : Aug 05 2024, 12:34 AM IST

ಸಾರಾಂಶ

ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ವೇದಿಕೆ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ದ್ವಿತೀಯ ಪಿಯು ಫಲಿತಾಂಶವನ್ನು ವಿದ್ಯಾರ್ಥಿಗಳು ಹೇಗೆ ಆತಂಕದಿಂದ ಎದುರು ನೋಡುತ್ತಾರೋ ಅದೇ ರೀತಿಯಾಗಿ ಉತ್ತಮ ಫಲಿತಾಂಶದ ಹಂಬಲ ಪ್ರತಿ ಉಪನ್ಯಾಸಕನದಾಗಿರುತ್ತದೆ ಎಂದು ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಆರ್ ಮಲ್ಲೇಶ್ ತಿಳಿಸಿದರು.

ಚಿತ್ರದುರ್ಗ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉಪನ್ಯಾಸಕರು, ತರಗತಿಗಳಲ್ಲಿ ವರ್ಷವಿಡೀ ಬೋಧನೆ ಮಾಡಿದ್ದಕ್ಕೆ ಕೊನೆಯಲ್ಲಿ ಪ್ರತಿಫಲ ದೊರೆಯುತ್ತದೆ. ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳಿಂದ ಉಪನ್ಯಾಸಕರ ಹಿರಮೆ ಹೆಚ್ಚಾಗತ್ತದೆ. ಇಂತಹ ಸಾರ್ಥಕ ಕ್ಷಣಕ್ಕಾಗಿ ಪ್ರತಿ ಉಪನ್ಯಾಸಕ ನಿರೀಕ್ಷಿಸುತ್ತಿರುತ್ತಾನೆ ಎಂದರು.

ಪಿಯುಸಿ ಎಂಬುದು ವಿದ್ಯಾರ್ಥಿ ಭವಿಷ್ಯದ ಆಯ್ಕೆ ಮೆಟ್ಟಿಲು. ಮುಂದೆ ಏನಾಗಬೇಕೆಂದು ತೀರ್ಮಾನವಾಗುತ್ತದೆ. ಎಲ್ಲರೂ ವೈದ್ಯರು, ಎಂಜಿಯರ್‌ಗಳಾಗಲು ಸಾಧ್ಯ ವಿಲ್ಲವಾದರೂ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿರುವ ಶಿಕ್ಷಣದ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಚಿತ್ರದುರ್ಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ನಿರ್ದೇಶಕದ ಆರ್. ಪುಟ್ಟಸ್ವಾಮಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸುವುದು ಅವರಿಗೆ ಇನ್ನಷ್ಟು ಸಾಧಿಸಲು ಪ್ರೇರಣೆ ನೀಡಿದಂತಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳನ್ನು ಎಲ್ಲಾ ವಿಷಯವಾರು ವೇದಿಕೆಗಳು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು.

ಪ್ರಸ್ತುತ ಸ್ಮರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ತೀವ್ರ ಪೈಪೋಟಿಯಿದೆ. ವಿಷಯವನ್ನು ಆಯ್ಕೆ ಮಾಡಿಕೊಳ್ಳುವಾಗಲೇ ಎಚ್ಚರವಹಿಸಿ ಸಾಗಬೇಕು. ಎಂಜಿನಿಯರಿಂಗ್, ಮೆಡಿಕಲ್ ಸೀಟು ಸಿಗಲಿಲ್ಲವೆಂಬ ಬೇಸರ ಬೇಡ. ಬಿಎಸ್‌ಸಿ ಓದಿಯೂ ತಾಂತ್ರಿಕವಾಗಿ ಮುಂದುವರಿಯಬಹುದು. ಲಭ್ಯವಾಗುವ ಯಾವುದೇ ಅವಕಾಶವ ಸಮರ್ಥವಾಗಿ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಹಾಗೂ ಪ್ರಾಂಶುಪಾಲ ಕೆ.ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ದೇವೇಂದ್ರಪ್ಪ, ಪ್ರಾಂಶುಪಾಲ ಕೆ.ಎಚ್.ರಾಜು ಹಾಗೂ ನರಸಿಂಹಮೂರ್ತಿ ಉಪಸ್ಥಿತರಿದ್ದರು