- ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯ । ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಎಸಿಗೆ ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಳೆದ ಐದಾರು ದಶಕಗಳಿಂದ ಜಿಲ್ಲೆಯಲ್ಲಿ ಸುಮಾರು 1.65 ಲಕ್ಷಕ್ಕೂ ಅಧಿಕ ಸರ್ಕಾರಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ, ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ​ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 40 ರಿಂದ 50 ವರ್ಷಗಳಿಂದಲೂ ಸರ್ಕಾರಿ ಜಾಗದಲ್ಲೇ ನೆಲೆಸಿರುವ ಬಡ ಕುಟುಂಬಗಳಿಗೆ ಇದುವರೆಗೆ ಹಕ್ಕುಪತ್ರಗಳು ಸಿಕ್ಕಿಲ್ಲ. ವಿವಿಧ ಯೋಜನೆಗಳಡಿ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಿಸುವಂತೆ ನಿಯಮಗಳಿದ್ದರೂ, ಪಿಡಿಒ ಹಾಗೂ ವಿಎ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮರ್ಪಕವಾಗಿ ಸರ್ವೆ ನಡೆಸಿ ಹಕ್ಕುಪತ್ರ ನೀಡುವ ಕಾರ್ಯ ಸಮರೋಪಾದಿಯಲ್ಲಿ ಕೈಗೊಂಡಿಲ್ಲ ಎಂದು ಆರೋಪಿಸಿದರು.


ಹಾವೇರಿ, ಚಿತ್ರದುರ್ಗ ಅಥವಾ ಬಳ್ಳಾರಿ ಮುಂತಾದ ಕಡೆಗಳಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಸಾಧನ ಸಮಾವೇಶಗಳಲ್ಲಿ‌ ಮಾತ್ರ ಸಾಂಕೇತಿಕವಾಗಿ ಒಂದಿಷ್ಟು ಹಕ್ಕುಪತ್ರಗಳನ್ನು ವಿತರಿಸಿ ಕೈ ತೊಳೆಯಲಾಗುತ್ತಿದೆ ಹೊರತು, ಶಾಶ್ವತ ಪರಿಹಾರಕ್ಕೆ ಯಾವುದೇ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ದೂರಿದರು.

ಜಿಪಂ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಸ್ಥಳೀಯ ಕಂದಾಯ ಸಿಬ್ಬಂದಿ ನಿವೇಶನರಹಿತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.​ಹತ್ತಾರು ಗ್ರಾಮಗಳ ನಿವಾಸಿಗಳು ತಮ್ಮ ಗ್ರಾಮಗಳಲ್ಲಿನ ನಿವೇಶನ ರಹಿತರು ಹಾಗೂ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಮನೆಗಳ ಸಮಗ್ರ ಪಟ್ಟಿಯೊಂದಿಗೆ ಅರ್ಜಿ ಸಿದ್ಧಪಡಿಸಿ ಉಪವಿಭಾಗಾಧಿಕಾರಿಗೆ ಸಲ್ಲಿಸಲಾಗಿದೆ. ಪ್ರತಿ ಕುಟುಂಬಕ್ಕೂ ಹಕ್ಕುಪತ್ರ ಸಿಗುವವರೆಗೂ ವಾರಕ್ಕೊಮ್ಮೆ ಹೀಗೆ ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಚನ್ನಗಿರಿ, ಜಗಳೂರು ಹಾಗೂ ದಾವಣಗೆರೆ ಉಪವಿಭಾಗಾಧಿಕಾರಿಗೆ ಮನವಿ ನೀಡಲಾಗಿದೆ. ಮುಂದಿನ ವಾರ ಹೊನ್ನಾಳಿ ಉಪವಿಭಾಗಾಧಿಕಾರಿಗೂ ಮನವಿ ಸಲ್ಲಿಸಲಾಗುವುದು. ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲೇ ಅನಿರ್ದಿಷ್ಟಾವಧಿ ಧರಣಿ ನಡೆಸುವ ಎಚ್ಚರಿಕೆ ನೀಡಲಾಯಿತು.

ಉಪವಿಭಾಗಾಧಿಕಾರಿ ಮನವಿ ಸ್ವೀಕರಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿಪ ಚುನಾವಣೆ ನೀತಿ ಸಂಹಿತೆ ಮುಗಿದ ತಕ್ಷಣವೇ, ಸಂಬಂಧಿತ ಗ್ರಾಮಗಳ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಗೌಡಕಟ್ಟೆ ಹನುಮಂತಪ್ಪ, ಕ್ಯಾಸನಹಳ್ಳಿ ಬಸಣ್ಣ, ದಿದ್ದಿಗಿ ದುರ್ಗಪ್ಪ, ಎರವನಾಗತಿ ಹಳ್ಳಿ ಪೂಜಾರಿ ಪರಮೇಶಪ್ಪ, ಮಂಜಣ್ಣ, ಬೋರಗೊಂಡನಹಳ್ಳಿ ಕಲ್ಲೇಶ್,ಕುಕ್ಕವಾಡದ ಬಸವರಾಜ್, ಗಿರಿಯಾಪುರದ ಗಂಗಾಧರಸ ಸ್ವಾಮಿ, ಆಲೂರು ಪರಶುರಾಮ್,ಗುಮ್ಮನೂರು ಭೀಮೇಶ್ ಸೇರಿದಂತೆ ಅನೇಕ ಗ್ರಾಮಸ್ಥರು, ನಿವೇಶನ ರಹಿತರು ಹಾಗೂ ವಿವಿಧ ಮುಖಂಡರು ಭಾಗವಹಿಸಿದ್ದರು. ಜಯದೇವ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಕೋರ್ಟ್ ರಸ್ತೆಯಲ್ಲಿ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಲಾಯಿತು.

- - -

-19ಕೆಡಿವಿಜಿ45: ದಾವಣಗೆರೆಯಲ್ಲಿ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.