ಸಾರಾಂಶ
ಶೀಘ್ರದಲ್ಲಿಯೇ 1.60 ಲಕ್ಷ ಚದುರ ಅಡಿಯಲ್ಲಿ ಕೆಎಲ್‌ಇ ಮೆಡಿಕಲ್ ಕಾಲೇಜು, ಆಸ್ಪತ್ರೆ ಆರಂಭವಾಗಲಿದೆ. ಆಸ್ಪತ್ರೆ ಆರಂಭದ ಮೊದಲ ದಿನದಿಂದಲೇ ಅನ್ವಯವಾಗುವಂತೆ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ನೀಡಲಾಗುವುದು.
ಹುಬ್ಬಳ್ಳಿ:
ತಮ್ಮ ಕುಟುಂಬ, ಆರೋಗ್ಯವನ್ನು ಲೆಕ್ಕಿಸದೇ ಸದಾ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಕೆಎಲ್‌ಇ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ರಿಯಾಯ್ತಿಯಲ್ಲಿ ಚಿಕಿತ್ಸೆ ಪಡೆಯುವಂತೆ ಅನುಕೂಲವಾಗುವ ಆರೋಗ್ಯ ಕಾರ್ಡ್ ಮಾಡಿಸಲಾಗುವುದು ಎಂದು ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಭರವಸೆ ನೀಡಿದರು.ಇಲ್ಲಿನ ವಿದ್ಯಾನಗರದ ಕೆಎಲ್‌ಇ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಹಿರಿಯ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೀಘ್ರದಲ್ಲಿಯೇ 1.60 ಲಕ್ಷ ಚದುರ ಅಡಿಯಲ್ಲಿ ಕೆಎಲ್‌ಇ ಮೆಡಿಕಲ್ ಕಾಲೇಜು, ಆಸ್ಪತ್ರೆ ಆರಂಭವಾಗಲಿದೆ. ಆಸ್ಪತ್ರೆ ಆರಂಭದ ಮೊದಲ ದಿನದಿಂದಲೇ ಅನ್ವಯವಾಗುವಂತೆ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ನೀಡಲಾಗುವುದು ಎಂದರು.ಈಗಾಗಲೇ ಕೋ ಅಪರೇಟಿವ್ ಆಸ್ಪತ್ರೆ ನಿರ್ವಹಣೆ ಜವಾಬ್ದಾರಿಯನ್ನು ಕೆಎಲ್‌ಇ ತೆಗೆದುಕೊಂಡ ಮೇಲೆ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಶ್ರೀ ಸಿದ್ಧಾರೂಢರು 1923ರಲ್ಲಿ ಈ ಆಸ್ಪತ್ರೆಗೆ ಅಡಿಗಲ್ಲು ನೆರವೇರಿಸಿದ್ದಾರೆ. ಅದರ ಶತಮಾನೋತ್ಸವ ಆಚರಣೆಗೆ ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಳಗಾವಿ ಆಸ್ಪತ್ರೆಯಲ್ಲಿ ಬಡ ಜನರ ಚಿಕಿತ್ಸೆಗಾಗಿಯೇ 500 ಬೆಡ್‌ಗಳ ಉಚಿತ ಚಿಕಿತ್ಸಾ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಅದೇ ಮಾದರಿಯಲ್ಲಿ ಹುಬ್ಬಳ್ಳಿ ಕೆಎಲ್‌ಇ ಆಸ್ಪತ್ರೆಯಲ್ಲಿ 500 ಬೆಡ್‌ಗಳ ಉಚಿತ ಚಿಕಿತ್ಸಾ ಆಸ್ಪತ್ರೆಯನ್ನು ಆರಂಭಿಸಲಾಗುತ್ತಿದೆ. ಅವಳಿ ನಗರದ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆ ಹಲವು ಉಪಕ್ರಮಗಳನ್ನು ಕೈಗೊಳ್ಳಲಿದೆ ಎಂದರು.ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ, ಹಿರಿಯ ಪತ್ರಕರ್ತ ಡಾ. ಬಂಡು ಕುಲಕರ್ಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪರ್ತಕರ್ತರನ್ನು ಸನ್ಮಾನಿಸಲಾಯಿತು. ಶಗುಫ್ತಾನಾಜ್ ನದಾಫ ಸ್ವಾಗತಿಸಿದರು. ಡಾ. ಅಕ್ಕಮಹಾದೇವಿ ರೊಟ್ಟಿಮಠ ನಿರೂಪಿಸಿದರು. ಪ್ರೊ. ಅಶ್ವಿನಿ ವಂದಿಸಿದರು.