ಬಿ.ಶಿವರಾಂರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಿ: ವಿನಯ್ ಗಾಂಧಿ

| Published : Feb 05 2024, 01:48 AM IST / Updated: Feb 05 2024, 03:32 PM IST

ಸಾರಾಂಶ

ಜಿಲ್ಲೆಯಲ್ಲಿ ಶಕ್ತಿಯುತವಾಗಿ ಬೆಳೆಯುತ್ತಿರುವ ಕಾಂಗ್ರೆಸ್ ನಲ್ಲಿ ಒಡಕು ಸೃಷ್ಟಿಸಿ ಪಕ್ಷ ವಿರೋಧಿ ಚುಟುವಟಿಕೆಯಲ್ಲಿ ತೊಡಗಿರುವ ಮಾಜಿ ಸಚಿವ ಬಿ. ಶಿವರಾಂರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಕಾಂಗ್ರೆಸ್ ಮುಖಂಡ ವಿನಯ್ ಗಾಂಧಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಶಕ್ತಿಯುತವಾಗಿ ಬೆಳೆಯುತ್ತಿರುವ ಕಾಂಗ್ರೆಸ್ ನಲ್ಲಿ ಒಡಕು ಸೃಷ್ಟಿಸಿ ಪಕ್ಷ ವಿರೋಧಿ ಚುಟುವಟಿಕೆಯಲ್ಲಿ ತೊಡಗಿರುವ ಮಾಜಿ ಸಚಿವ ಬಿ. ಶಿವರಾಂರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಕಾಂಗ್ರೆಸ್ ಮುಖಂಡ ವಿನಯ್ ಗಾಂಧಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಪಕ್ಷದ ಬಗ್ಗೆ ಜನರ ಒಲವು ಹೆಚ್ಚಾಗಿದೆ. ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ.

ಈ ನಡುವೆ ಬಿ. ಶಿವರಾಂ ಸ್ವಪಕ್ಷದ ಕಾರ್ಯಕರ್ತರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮಾತನಾಡುವ ಮೂಲಕ ಪಕ್ಷದಲ್ಲಿ ಒಡಕು ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಸನ ಜಿಲ್ಲೆಯಲ್ಲಿ ಎಲ್ಲಾ ಜಾತಿ, ವರ್ಗದ ಜನಾಂಗವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿ ಯಾಗಿದ್ದಾರೆ. ಆದರೆ, ಬಿ.ಶಿವರಾಂ ಪಕ್ಷದಲ್ಲಿ ಕೆಲವರನ್ನು ಎತ್ತಿಕಟ್ಟುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. 

ಮಾಧ್ಯಮದ ಮುಂದೆ ಹೇಳಿಕೆ ನೀಡಬಾರದು ಎಂಬ ಆದೇಶ ಮೀರಿ ಮತ್ತೆ ಸುದ್ದಿಗೋಷ್ಠಿ ನಡೆಸಿ ಹೈಕಮಾಂಡ್ ವಿರುದ್ಧವೇ ಮಾತನಾಡುವ ಅವರ ನಡೆ ಸರಿಯಲ್ಲ. ಕೂಡಲೇ ಶಿವರಾಂ ತಮ್ಮ ವರ್ತನೆ ಬದಲಿಸಿಕೊಳ್ಳಬೇಕು ಎಂದರು.

ಮಾಜಿ ಸಚಿವ ಬಿ. ಶಿವರಾಂ ಕಾಂಗ್ರೆಸ್ ಪಕ್ಷದಿಂದ ಉನ್ನತ ಮಟ್ಟಕ್ಕೇರಿದ್ದು, ನಾಲ್ಕು ಬಾರಿ ವಿಧಾನಸಭೆಯಲ್ಲಿ ಗೆದ್ದಿದ್ದು, ಕ್ಯಾಬಿನೆಟ್ ದರ್ಜೆ ಸಚಿವರಾಗಿ ಅಧಿಕಾರ ಪಡೆದಿದ್ದು, ಜಿಲ್ಲೆಯ ಜನರನ್ನು ನಿರ್ಲಕ್ಷಿಸಿ ಕೋಟ್ಯಾಂತರ ರು. 

ಹಣ ಗಳಿಸಿಕೊಂಡಿರುವ ಪರಿಣಾಮ ಜಿಲ್ಲೆಯ ಮತದಾರರು ನಂತರದ ನಾಲ್ಕು ಚುನಾವಣೆಗಳಲ್ಲಿ ಹೀನಾಯವಾಗಿ ಸೋಲಿಸಿದ್ದಾರೆ ಎಂದರು.

ಬೇಲೂರಿನಲ್ಲಿ ಕಾಫಿ ಬೋರ್ಡ್ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಇವರು, ಎಚ್.ಎನ್.ನಂಜೇಗೌಡರ ಕೃಪಕಟಾಕ್ಷದಿಂದ ಜಿಪಂ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸೋತು ಠೇವಣಿ ಕಳೆದುಕೊಂಡ ಏಕೈಕ ವ್ಯಕ್ತಿ, ಪಂಚಾಯ್ತಿ ಚುನಾವಣೆ ಸೋತ ನಂತರ ಎಚ್.ಎನ್. ನಂಜೇಗೌಡರು ಶಿವರಾಂ ಅವರನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

ಅಧ್ಯಕ್ಷರಾದ ಬಳಿಕ ಹಾಸನ ಜಿಲ್ಲೆಯ ೪೦ ಜಿಪಂಗಳ ಪೈಕಿ ಕೇವಲ ೨ ಸ್ಥಾನ ಪಡೆದು, ಕಾಂಗ್ರೆಸ್ ಗೆ ಅಧಿಕಾರ ಕೊಡಿಸಲು ವಿಫಲರಾದರು.

ಪಕ್ಷದಲ್ಲಿ ಎಲ್ಲಾ ಸ್ಥಾನಮಾನ ನೀಡಿದರೂ ಪಕ್ಷದ ವಿರುದ್ಧವೇ ಬಹಿರಂಗವಾಗಿ ಮಾತನಾಡುವ ಶಿವರಾಂರ ನಡೆ ಖಂಡನೀಯ. ಹೈ ಕಮಾಂಡ್ ಅವರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮುನಿಸ್ವಾಮಿ, ಅಲಿಂ ಪಾಷಾ, ಶಂಕರ್ ಇತರರು ಇದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿನಯ್ ಗಾಂಧಿ.