ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಪಹಲ್ಗಾಮ್ ಹತ್ಯಾಕಾಂಡದ ನಂತರ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಪತ್ತೆ ಮಾಡಿ ಅವರ ದೇಶಕ್ಕೆ ವಾಪಸ್ ಕಳುಹಿಸಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳ ಜೊತೆಗೆ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನೂ ಪತ್ತೆ ಮಾಡಿ ಅವರ ದೇಶಕ್ಕೆ ಕಳುಹಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಹಾಗೂ ಗುಪ್ತಚರ ಇಲಾಖೆಯವರು ಕಾರ್ಯಪ್ರವೃತ್ತರಾಗಿ ಜಿಲ್ಲೆಯಲ್ಲಿಯಲ್ಲಿರುವ ಪಾಕಿಸ್ತಾನಿ, ಬಾಂಗ್ಲಾ ಅಕ್ರಮ ನಿವಾಸಿಗಳು, ಭಯೋತ್ಪಾದಕರು, ಮಾದಕ ಪದಾರ್ಥ ಮಾರಾಟ ಜಾಲದಲ್ಲಿ ಭಾಗಿಯಾದವರು, ಸಮಾಜ ದ್ರೋಹಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.
ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು. ಬಾಂಗ್ಲಾದಂತಹ ದೇಶಿಯವರು ಅಕ್ರಮವಾಗಿ ಬಂದು ಇಲ್ಲಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿವೆ. ಅಂತಹವರನ್ನೂ ಗುರುತಿಸಿ, ಅವರಿಗೆ ನೆರವಾದವರನ್ನೂ ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.ಪಹಲ್ಗಾಮ್‌ನಲ್ಲಿ ಪ್ರವಾಸಿ ಹಿಂದೂಗಳನ್ನು ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದನ್ನು ಸಹಿಸಲಾಗುವುದಿಲ್ಲ. ಭಾರತದಲ್ಲಿ ಹಿಂದೂ, ಮುಸ್ಲಿಮರು ಭಾವೈಕ್ಯತೆಯಿಂದ ಬಾಳುತ್ತಿದ್ದಾರೆ. ಇವರ ನಡುವೆ ಶಾಂತಿ, ಭಾವೈಕ್ಯತೆಗೆ ಧಕ್ಕೆ ಮಾಡುವ ಸಲುವಾಗಿ ಭಯೋತ್ಪಾದಕರು ದಾಳಿ ಮಾಡುತ್ತಿದ್ದಾರೆ. ಭಯೋತ್ಪಾದನೆ ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ದೇಶದ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಜಾತಿ, ಧರ್ಮದವರೂ ಮೋದಿಯವರ ಕಾರ್ಯಕ್ಕೆ ಬೆಂಬಲ ನೀಡಬೇಕು. ದೇಶದ ಭದ್ರತೆ, ಸಾರ್ವಭೌಮತ್ವ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಮ್ಮದೇ ದೇಶಗಳು. ದುರಾದೃಷ್ಟ ಬೇರೆ ರಾಷ್ಟ್ರಗಳಾಗಿವೆ. ಭಾರತ ಸರ್ಕಾರ ಈ ದೇಶಗಳನ್ನು ವಶಪಡಿಸಿಕೊಂಡು ಅಖಂಡ ಭಾರತ ನಿರ್ಮಾಣಕ್ಕೂ ಪ್ರಯತ್ನ ಮಾಡಬೇಕು ಎಂದ ಸೊಗಡು ಶಿವಣ್ಣ, ಭಾರತದ ಮುಸ್ಲಿಮರು ಈ ಮಣ್ಣಿನಲ್ಲೇ ಹುಟ್ಟಿದವರು, ಇವರಲ್ಲಿ ದೇಶಾಭಿಮಾನ, ಭಾವೈಕ್ಯತೆಯ ಗುಣ ಇದೆ. ಆದರೆ ಭಯೋತ್ಪಾದನೆ ಮೂಲಕ ದೇಶದಲ್ಲಿ ಒಡಕು ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಮುಸ್ಲಿಮರು ಎಚ್ಚರಿಕೆಯಿಂದ ಇರಬೇಕು ಎಂದರು.ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸೊಗಡು ಶಿವಣ್ಣ, ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಲಿ, ಭಾರತದ ಮೇಲೆ ಭಯೋತ್ಪಾದಕ ಕೃತ್ಯ ನಡೆಸುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಅನಿವಾರ್ಯವಾದರೆ ಯುದ್ಧ ಸಾರಲೇಬೇಕು ಎಂದರು.
ನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಮುಖಂಡರಾದ ಕೆ.ಹರೀಶ್, ಇಮ್ರಾನ್ ರಾಜ್ ಮಹಮ್ಮದ್ ಇಸ್ಮಾಯಿಲ್, ಅತಿಕ್, ಸೈಯದ್ ನದೀಂ ಉಲ್ಲಾ, ವಾಸೀಂ ಖಾನ್, ನಟರಾಜ್ ಹಾಜರಿದ್ದರು.