ದುಬಾರಿಯಾದ ಮೇವು, ಡಂಬಳ ಹೋಬಳಿ ರೈತರಿಗೆ ಸಂಕಷ್ಟ

| Published : Mar 18 2025, 12:31 AM IST

ದುಬಾರಿಯಾದ ಮೇವು, ಡಂಬಳ ಹೋಬಳಿ ರೈತರಿಗೆ ಸಂಕಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಹೋಬಳಿಯ ವ್ಯಾಪ್ತಿಯಲ್ಲಿ ರೈತಾಪಿ ಕುಟುಂಬಗಳು ಬೇಸಿಗೆ ವೇಳೆ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಈ ಬಾರಿ ಶೇಂಗಾ ಹೊಟ್ಟು ಹಾಗೂ ಬಿಳಿ ಜೋಳದ ಮೇವು ದುಬಾರಿಯಾಗಿದ್ದು ರೈತರನ್ನು ಚಿಂತೆಗೀಡು ಮಾಡಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಹೋಬಳಿಯ ವ್ಯಾಪ್ತಿಯಲ್ಲಿ ರೈತಾಪಿ ಕುಟುಂಬಗಳು ಬೇಸಿಗೆ ವೇಳೆ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಈ ಬಾರಿ ಶೇಂಗಾ ಹೊಟ್ಟು ಹಾಗೂ ಬಿಳಿ ಜೋಳದ ಮೇವು ದುಬಾರಿಯಾಗಿದ್ದು ರೈತರನ್ನು ಚಿಂತೆಗೀಡು ಮಾಡಿದೆ.

ತಮ್ಮ ಜಾನುವಾರಗಳಿಗೆ ಬೇಸಿಗೆ ವೇಳೆ ಪ್ರತಿ ವರ್ಷವೂ ಬಹುತೇಕ ರೈತರು ಮೇವು ಸಂಗ್ರಹಿಸುವುದು ಸಾಮಾನ್ಯ. ಈ ವರ್ಷವೂ ಡಂಬಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮೇವು ಸಂಗ್ರಹಿಸಲು ಆರಂಭಿಸಿದ್ದಾರೆ.

ಹೋದ ವರ್ಷ ಬರಗಾಲ ಆವರಿಸಿತ್ತು. ಆ ವೇಳೆ ರೈತರು ರಾಸುಗಳಿಗೆ ಮೇವಿನ ಅಭಾವ ಎದುರಾಯಿತು. ಜಿಲ್ಲೆಯ ರೈತರು ಜಾನುವಾರುಗಳನ್ನು ಒಲ್ಲದ ಮನಸ್ಸಿನಿಂದ ಮಾರಾಟ ಮಾಡಿದ್ದರು. ಇನ್ನು ಕೆಲವು ಜಾನುವಾರುಗಳು ಮೇವಿಲ್ಲದೇ ಹಿತ್ತಲಲ್ಲಿ, ಗೋದಲಿಯಲ್ಲಿ ಕಟ್ಟಿದ ಸ್ಥಳದಲ್ಲಿಯೇ ನಿತ್ರಾಣ ಸ್ಥಿತಿಗೆ ತಲುಪಿದ್ದವು. ಇದನ್ನು ಕಂಡು ರೈತರು ಕಣ್ಣೀರು ಹಾಕಿದ್ದರು. ಸರ್ಕಾರಕ್ಕೂ ಬಿಸಿ ಮುಟ್ಟಿತು. ಆಗ ಎಚ್ಚೆತ್ತ ಜಿಲ್ಲಾಡಳಿತ ಅಲ್ಲಲ್ಲಿ ಗೋಶಾಲೆಗಳನ್ನು ತೆರೆದಿತ್ತು. ಗ್ರಾಪಂ ಮೂಲಕ ಹಸುಗೆ ಕೆಜಿ ಲೆಕ್ಕದಲ್ಲಿ ಮೇವು ಪೂರೈಕೆ ಮಾಡಿತ್ತು. ಆದರೆ ಈ ಬಾರಿ ಬೇಸಿಗೆಯಲ್ಲಿ ಮೇವಿನ ಕೊರತೆಯಾಗಬಾರದು ಎಂದು ರೈತರೇ ಮೇವು ಸಂಗ್ರಹಿಸಲು ಮುಂದಾಗಿದ್ದಾರೆ.

ಮುಂಡರಗಿ ತಾಲೂಕಿನಲ್ಲಿ ಈ ಬಾರಿ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ಹಲವು ರೈತರು ತಮ್ಮ ಹೊಲಗಳಲ್ಲಿ ಮೇವು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಕೆಲವು ರೈತರು ಮೇವು ಖರೀದಿಸಿ ಸಂಗ್ರಹಿಸುತ್ತಿದ್ದಾರೆ. ರಾಸು ಇಲ್ಲದ ರೈತರು ಮೇವು ಮಾರಾಟ ಮಾಡುತ್ತಿದ್ದಾರೆ.

ಶೇಂಗಾ, ಬಿಳಿಜೋಳದ ಮೇವು ದುಬಾರಿ:

ಈ ಬಾರಿ ಬಿಳಿಜೋಳ ಸಮೃದ್ಧಿಯಾಗಿ ಬೆಳೆದಿದೆ. ಜಾನುವಾರುಗಳಿಗೆ ಬೇಸಿಗೆ ವೇಳೆ ಹಸಿರು ಮೇವು ದೊರೆಯುವುದಿಲ್ಲ. ಹೀಗಾಗಿ ಶೇಂಗಾ ಮೇವು ಹಾಗೂ ಬಿಳಿ ಜೋಳದ ಮೇವು ಜಾನುವಾರಿಗೆ ಗಟ್ಟಿ ಆಹಾರವಾಗಲಿದೆ. ಈ ದೃಷ್ಟಿಯಿಂದ ಮೇವು ಸಂಗ್ರಹ ಮಾಡಲಾಗುತ್ತಿದೆ. ಆದರೆ ಮೇವು ದರ ಹೆಚ್ಚಳವಾಗಿದೆ. ಬಿಳಿ ಜೋಳದ ಮೇವು ಒಂದು ಟ್ರ್ಯಾಕ್ಟರ್‌ಗೆ ₹3500 ಹೆಚ್ಚಳವಾಗಿದೆ. ಹೊಟ್ಟು ಒಂದು ಕಟ್ಟಿಗೆ ₹4 ಸಾವಿರ ಇದ್ದು, ಟ್ರ್ಯಾಕ್ಟರ್ ಲೆಕ್ಕದಲ್ಲಿ ₹20ರಿಂದ 25 ಸಾವಿರ ವರೆಗೂ ಮಾರಾಟವಾಗುತ್ತಿದೆ. ಹೀಗಾಗಿ ರೈತರು ಹೆಚ್ಚು ಹಣ ನೀಡಿ ಖರೀದಿಸುತ್ತಿದ್ದಾರೆ.

ಈ ಬಾರಿ ಜಾನುವಾರುಗಳಿಗೆ ಹೊಟ್ಟು, ಮೇವು ಖರೀದಿಸಲು ಕಷ್ಟಕರವಾಗಿದೆ. ಸರ್ಕಾರ ಹೊಟ್ಟು ಮೇವು ಖರೀದಿಸಲು ವಿಶೇಷ ಅನುದಾನ ನೀಡಬೇಕು. ಇದರಿಂದ ರೈತರ ಆಕಳು, ಎತ್ತು ಉಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಡಂಬಳ ಗ್ರಾಮದ ಯಲ್ಲಪ್ಪ, ಹಜರೇಸಾಬ ಹೇಳಿದರು.