ದುಬಾರಿ ಸ್ಮಾರ್ಟ್‌ ಮೀಟರ್‌ ಜನರಿಗೆ ಹೊರೆ: ಹೈಕೋರ್ಟ್‌

| N/A | Published : Jul 08 2025, 01:48 AM IST / Updated: Jul 08 2025, 11:17 AM IST

ದುಬಾರಿ ಸ್ಮಾರ್ಟ್‌ ಮೀಟರ್‌ ಜನರಿಗೆ ಹೊರೆ: ಹೈಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಹೆಚ್ಚಿನ ದರ ನಿಗದಿಪಡಿಸಿ ಸಾರ್ವಜನಿಕರು ನರಳುವಂತೆ ಮಾಡಬೇಡಿ ಎಂದು ಹೈಕೋರ್ಟ್‌ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಗೆ (ಬೆಸ್ಕಾಂ) ಮೌಖಿಕವಾಗಿ ಸಲಹೆ ನೀಡಿದೆ.

  ಬೆಂಗಳೂರು :  ಅನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ದರ ಹೆಚ್ಚು ನಿಗದಿಯಾಗಿದೆ. ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ ನಿಯಮದಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಹಾಗಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಹೆಚ್ಚಿನ ದರ ನಿಗದಿಪಡಿಸಿ ಸಾರ್ವಜನಿಕರು ನರಳುವಂತೆ ಮಾಡಬೇಡಿ ಎಂದು ಹೈಕೋರ್ಟ್‌ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಗೆ (ಬೆಸ್ಕಾಂ) ಮೌಖಿಕವಾಗಿ ಸಲಹೆ ನೀಡಿದೆ.

ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆಯುವಾಗ ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸಿಕೊಳ್ಳಬೇಕು ಎಂದು ಷರತ್ತು ವಿಧಿಸಿ ಫೆ.13ರಂದು ಬೆಸ್ಕಾಂ ಹೊರಡಿಸಿರುವ ಮಾರ್ಗಸೂಚಿ ರದ್ದುಪಡಿಸಬೇಕು ಎಂದು ಕೋರಿ ದೊಡ್ಡಬಳ್ಳಾಪುರದ ಪಿ.ಎಂ.ಹರೀಶ್‌ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಸಲಹೆ ನೀಡಿದೆ.

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮಾರ್ಗಸೂಚಿಗಳಿಗೆ ಅನುಗುಣವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸಬೇಕು. ಅದನ್ನು ಹೊರತು ಪ್ರೀ ಪೇಯ್ಡ್‌ ಹಾಗೂ ಪೋಸ್ಟ್‌ ಪೇಯ್ಡ್‌ ಎಂದು ಅನಗತ್ಯವಾಗಿ ಗ್ರಾಹಕರನ್ನು ಗೊಂದಲದ ಗೂಡಿಗೆ ತಳ್ಳಬಾರದು. ಮೂರು ಫೇಸ್ ಸ್ಮಾರ್ಟ್ ಮೀಟರ್ ಗೆ 10 ಸಾವಿರ ರು. ವಿಧಿಸಲಾಗುತ್ತಿದೆ. ಪಕ್ಕದ ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ದರ 900 ರು. ಇದೆ. ರಾಜ್ಯದಲ್ಲಿ ಏಕೆ 10 ಸಾವಿರ ರುಪಾಯಿ ಎಂದು ಪ್ರಶ್ನಿಸಿದ ನ್ಯಾಯಪೀಠ ಈ ಕುರಿತು ಜು.9ರಂದು ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಿ ಹೊರಡಿಸಿರುವ ಆದೇಶ ಕೆಇಆರ್‌ಸಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಸ್ಮಾರ್ಟ್‌ ಮೀಟರ್‌ ದರವೂ ಹೆಚ್ಚಿದ್ದು, ಗ್ರಾಹಕರಿಗೆ ಹೊರೆಯಾಗಲಿದೆ. ಇದರಿಂದ ಹೊಸದಾಗಿ ವಿದ್ಯುತ್‌ ಸಂರ್ಪಕ ಪಡೆಯಲು ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸಬೇಕು ಎಂದು 2025ರ ಫೆ.13ರಂದು ಹೊರಡಿಸಿರುವ ಮಾರ್ಗಸೂಚಿ ಹಾಗೂ ಆ ಕುರಿತು ಸೂಚಿಸಿ ಅರ್ಜಿದಾರರಿಗೆ 2025ರ ಏ.25ರಂದು ಬೆಸ್ಕಾಂ ನೀಡಿರುವ ಪತ್ರವನ್ನು ರದ್ದುಪಡಿಸಬೇಕು ಎಂದು ಕೋರಿದರು.

ಅದಕ್ಕೆ ಉತ್ತರಿಸಿದ ರಾಜ್ಯ ಸರ್ಕಾರಿ ವಕೀಲರು, ಸ್ಮಾರ್ಟ್‌ ಮೀಟರ್‌ ಅಳವಡಿಕೆ ವಿಚಾರದಲ್ಲಿ ಕೆಇಆರ್‌ಸಿ ಮಾರ್ಗಸೂಚಿಗೆ ಅನುಗುಣವಾಗಿಯೇ ರಾಜ್ಯ ಸರ್ಕಾರ ಹಾಗೂ ಬೆಸ್ಕಾಂ ನಡೆದುಕೊಳ್ಳುತ್ತಿದೆ. ಹೊಸದಾಗಿ ಯಾರು ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆಯೋ ಅವರಿಗೆ ಮಾತ್ರ ಪರಿಪಾಲನಾ ನಿರ್ದೇಶನಗಳು ಅನ್ವಯವಾಗಲಿವೆ. ಅಷ್ಟಕ್ಕೂ ಇದು ಪೋಸ್ಟ್‌ ಪೇಯ್ಡ್‌ ಆಗಿರುತ್ತದೆ ಎಂದು ಪ್ರತಿಪಾದಿಸಿದರು.

ಈ ವಾದ ಒಪ್ಪದ ಪೀಠ, ಪ್ರೀ ಪೇಯ್ಡ್‌ ಅಥವಾ ಪೋಸ್ಟ್‌ ಪೇಯ್ಡ್‌ ಯಾವುದೇ ರೀತಿಯ ಶುಲ್ಕ ಪಾವತಿಯಾದರೂ ಸರಿಯೇ. ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ ಎಂಬ ನಿಯಮ ಮಾತ್ರ ಗ್ರಾಹಕರಿಗೆ ಹೊರೆಯಾಗಬಾರದು ಎಂದು ಹೇಳಿತು.

Read more Articles on