ಸಾರಾಂಶ
ತುಮಕೂರು: ಮಕ್ಕಳಿಗೆ ಕೇವಲ ಪಠ್ಯ ಪುಸ್ತಕಗಳಲ್ಲಿರುವ ವಿಷಯಗಳನ್ನು ತಿಳಿಸಿ ಉತ್ತೀರ್ಣರಾಗುವಂತೆ ಮಾಡದೆ ಮಕ್ಕಳಿಗೆ ಅನುಭವಾತ್ಮಕ ಕಲಿಕೆಯ ಮೂಲಕ ಅವರ ಮುಂದಿನ ಭವಿಷ್ಯಕ್ಕೆ ಬೇಕಾದ ಅಂಶಗಳನ್ನು ಕಲಿಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅಭಿಪ್ರಾಯ ವ್ಯಕ್ತ ಪಡಿಸಿದರು.ನಗರದ ಎಂಪ್ರೆಸ್ ಕಾಲೇಜು ಆವರಣದ ಸ್ಮಾರ್ಟ್ ಸಿಟಿ ಸಭಾಂಗಣದಲ್ಲಿಂದು ನಡೆದ ಉತ್ತರದಾಯಿತ್ವ ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ಎಲ್ಲಾ ಇಲಾಖೆಗಳ ಒಗ್ಗೂಡಿಕೆಯಿಂದ ಸಂಘ ಸಂಸ್ಥೆಗಳ ಸಿಎಸ್‌ಆರ್ ಅನುದಾನದಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಉತ್ತಮ ವ್ಯವಸ್ಥೆಯನ್ನು ರೂಪಿಸಬೇಕು ಎಂದು ತಿಳಿಸಿದರು.ಜಿಲ್ಲೆಯ ಅನೇಕ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಇರುವ ಬಗ್ಗೆ ವೈಜ್ಞಾನಿಕ ಸಮೀಕ್ಷೆ ಮೂಲಕ ಮಾಹಿತಿ ಕಲೆ ಹಾಕಿದ್ದು, ವಿವಿಧ ಇಲಾಖೆಗಳು ಒಟ್ಟುಗೂಡಿ ಜಿಲ್ಲೆಯ ಶಾಲೆಗಳಿಗೆ ಅಗತ್ಯ ಇರುವ ಶೌಚಗೃಹ, ಸುಸಜ್ಜಿತ ಕೊಠಡಿ, ಕಾಂಪೌಂಡ್, ವ್ಯವಸ್ಥಿತ ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ಘಟಕ, ಡೆಸ್ಕ್ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.ಡಯಟ್ ಅಧಿಕಾರಿಗಳು ತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೈ ಕೊಂಡು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಡಯಟ್ ವ್ಯವಸ್ಥೆಯನ್ನು ಸದೃಢಗೊಳಿಸಬೇಕಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಒಟ್ಟುಗೂಡಿ ಕೆಲಸ ಮಾಡಬೇಕು. ವ್ಯವಸ್ಥಿತವಾದ ಶಿಕ್ಷಣ ನೀಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಿ ಜನರು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಅನುಭವಾತ್ಮಕ ಕರಪತ್ರ, ಕ್ಷಮತೆ ಕರಪತ್ರ ಬಿಡುಗಡೆ ಮಾಡಿದರು. ಕಾರ್ಯಾಗಾರದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಎಚ್.ಕೆ. ಮನಮೋಹನ್, ಮಧುಗಿರಿ ಉಪನಿರ್ದೇಶಕ (ಆಡಳಿತ) ಬಿ.ಎಚ್. ಗಿರಿಜಾ, ಮಧುಗಿರಿ ಡಯಟ್ ಪ್ರಾಂಶುಪಾಲ ಹೆಚ್.ಆರ್. ಗಂಗಾಧರ್, ಡಯಟ್ ಹಿರಿಯ ಉಪನ್ಯಾಸಕ ನಂಜುಂಡಯ್ಯ, ಕೇರಿಂಗ್ ವಿಥ್ ಕಲರ್ ಮುಖ್ಯಸ್ಥ ರಾಜೀವ್ ಅನ್ನಲೂರು, ಜಿಲ್ಲೆಯ ಎಲ್ಲಾ ತಾಲೂಕಿನ ಸಿ.ಆರ್.ಪಿ, ಬಿ.ಆರ್.ಪಿ, ಇ.ಸಿ.ಓ, ಬಿ.ಐ. ಇ.ಆರ್.ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಂದನಾರ್ಪಣೆ ಮಾಡಿದರು. ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶಕ ಎಂ.ಆರ್. ಮಾರುತಿ, ಉಪನಿರ್ದೇಶಕ (ಅಭಿವೃದ್ಧಿ) ಹಾಗೂ ಡಯಟ್ ಪ್ರಾಂಶುಪಾಲ ಕೆ. ಮಂಜುನಾಥ್ ಸ್ವಾಗತಿಸಿದರು.