ಪ್ರಯೋಗಶೀಲತೆ ಮಹಿಳೆಗೆ ಅತೀ ಅವಶ್ಯ: ಪ್ರೊ. ಮಾಲತಿ ಪಟ್ಟಣಶೆಟ್ಟಿ

| Published : Mar 25 2024, 01:46 AM IST

ಸಾರಾಂಶ

ಮಹಿಳೆಯರು ಎಂಥದೇ ಸಮಸ್ಯೆಗಳು ಬಂದರೂ ಅದರಾಚೆ ಬಂದು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸನ್ನದ್ಧರಾಗಬೇಕು ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಮಹಿಳೆಯರು ಚಿಂತನಶೀಲರಾಗಬೇಕು. ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ‘ಸ್ತ್ರೀ’ ಕುರಿತು ‘ಜಾನಪದ ಸಮೂಹ ಗಾಯನ’ ಮತ್ತು ‘ಸ್ವರಚಿತ ಕವನ ವಾಚನ’ ಸ್ಪರ್ಧೆಗಳಿಗೆ ಚಾಲನೆ ನೀಡಿದ ಅವರು, ಮಹಿಳೆಯರು ಎಂಥದೇ ಸಮಸ್ಯೆಗಳು ಬಂದರೂ ಅದರಾಚೆ ಬಂದು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸನ್ನದ್ಧರಾಗಬೇಕು ಎಂದರು.

ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ಜಾನಪದ ಸಮೂಹ ಗಾಯನ ಸ್ಪರ್ಧೆ ಮತ್ತು ಸ್ವರಚಿತ ಕವನ ವಾಚನ ಸ್ಪರ್ಧೆಗಳಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದರು. ಸಮೂಹ ಗಾಯನ ಸ್ಪರ್ಧೆಯಲ್ಲಿ ‘ಸಿಂಗಾರ ಸಖಿ’ ಮಹಿಳಾ ಮಂಡಳ, ‘ಕಲ್ಪತರು’ ಮಹಿಳಾ ಮಂಡಳ, ‘ಶ್ರೀರಂಜಿನಿ’ ಮಹಿಳಾ ಮಂಡಳ, ‘ಆಂಜನೇಯ’ ಮಹಿಳಾ ಮಂಡಳ, ಕಸ್ತೂರಿ ಕುಂದರಗಿ ಹಾಗೂ ಸಂಗಡಿಗರು ಮತ್ತು ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ಗಾಯತ್ರಿ ಕಮ್ಮಾರ, ಶಶಿರೇಖಾ ಚಕ್ರಸಾಲಿ, ಜಯಶ್ರೀ ಮಂಗಳೂರು, ಎಸ್.ಎಂ. ಬಳ್ಳಾರಿ, ಶ್ರೀದೇವಿ ದೇಶಪಾಂಡೆ ಬಹುಮಾನ ಪಡೆದರು. ವಿಜೇತರಿಗೆ ಮಕ್ಕಳ ಕವಿ ನಿಂಗಣ್ಣ ಕುಂಟಿ ಬಹುಮಾನ ವಿತರಿಸಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.

ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿ. ಶಾರದಾ ನಿರೂಪಿಸಿದರು. ಸುಜಾತಾ ಹಡಗಲಿ ವಂದಿಸಿದರು. ಡಾ. ಧನವಂತ ಹಾಜವಗೋಳ, ಡಾ. ನಿರ್ಮಲಾ ಚಿಗಟೇರಿ, ಪ್ರಮೀಳಾ ಜಕ್ಕಣ್ಣವರ ಮತ್ತಿತರರು ಇದ್ದರು.