ಸ್ಥಳೀಯ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಐತಿಹಾಸಿಕ ಕೋಟೆ- ಕಂದಕಕ್ಕೆ ಅಂಟಿಕೊಂಡಿರುವ ಚರಂಡಿ ಪಕ್ಕದ ಕಸದ ತಿಪ್ಪೆಯಲ್ಲಿ ಅವಧಿ ಮುಗಿದ ಔಷಧಿ ಡಬ್ಬಿಗಳು ಪತ್ತೆಯಾಗಿದ್ದು, ಬಡ ರೋಗಿಗಳಿಗೆ ನೀಡುವ ಔಷಧಿಗಳನ್ನು ತಿಪ್ಪೆಗೆ ಎಸೆಯಲಾಗಿದ್ದು, ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಾಯಚೂರು

ಸ್ಥಳೀಯ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಐತಿಹಾಸಿಕ ಕೋಟೆ- ಕಂದಕಕ್ಕೆ ಅಂಟಿಕೊಂಡಿರುವ ಚರಂಡಿ ಪಕ್ಕದ ಕಸದ ತಿಪ್ಪೆಯಲ್ಲಿ ಅವಧಿ ಮುಗಿದ ಔಷಧಿ ಡಬ್ಬಿಗಳು ಪತ್ತೆಯಾಗಿದ್ದು, ಬಡ ರೋಗಿಗಳಿಗೆ ನೀಡುವ ಔಷಧಿಗಳನ್ನು ತಿಪ್ಪೆಗೆ ಎಸೆಯಲಾಗಿದ್ದು, ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆ ವಿವಿಧ ನಗರ, ಸಮುದಾಯ ಹಾಗೂ ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಲಾ ಗುತ್ತಿದ್ದ ಸಕ್ಕರೆ ಕಾಯಿಲೆ ಮತ್ತು ರಕ್ತದೋತ್ತಡಕ್ಕೆ ಬಳಸುವ ಮಾತ್ರೆಗಳು ಕಳೆದ ಸೆಪ್ಟಂಬರ್ ನಲ್ಲಿಯೇ ಅವಧಿ ಮೀರಿದ್ದರಿಂದ ಕಸದ ತಿಪ್ಪೆಯಲ್ಲಿ ರಾಶಿರಾಶಿ ಮಾತ್ರೆಗಳನ್ನು ಜನರಿಗೆ ನೀಡದೇ ಬಿಸಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಅವಧಿ ಮೀರಿದ ಔಷಧಿಗಳನ್ನು ನಿಯಮಾನುಸಾರ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕಿತ್ತು. ಆದರೆ, ಸಾರ್ವಜನಿಕರು ಹಾಗೂ ಜಾನುವಾರುಗಳು ಓಡಾಡುವ ಪ್ರದೇಶದಲ್ಲಿ ಔಷಧಿಗಳನ್ನು ಎಸೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಿದ ಔಷಧಿಗಳ ದಾಸ್ತಾನು ಮತ್ತು ನಿರ್ವಹಣೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಸೂಕ್ತ ಕಾನೂನು ಕ್ರಮ: ಇಲ್ಲಿನ ಬಸವೇಶ್ವರ ವೃತ್ತ ಹತ್ತಿರದ ಚರಂಡಿಯಲ್ಲಿ ಪತ್ತೆಯಾದ ಸಕ್ಕರೆ ಕಾಯಿಲೆ ಮತ್ತು ರಕ್ತದೋತ್ತಡಕ್ಕೆ ಬಳಸುವ ಅವಧಿ ಮೀರಿದ ಔಷಧಿಗಳನ್ನು ಎಸೆದವರ ವಿರುದ್ಧ ಎಫ್‌ಐಆರ್ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಿತಾ ಎಮ್.ಎನ್. ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ಸರಬರಾಜು ಆಗುವ ಔಷಧಿಗಳು ಬಳಕೆ ಮಾಡಿ, ಅವಧಿ ಮೀರಿದಾಗ ನಿಯಮಾನುಸಾರ ಸರಕಾರದ ಮಾರ್ಗಸೂಚಿಯನ್ವಯ ವಿಲೇವಾರಿ ಮಾಡಲಾಗುತ್ತದೆ. ಪ್ರಸ್ತುತ ಈ ಪ್ರಕರಣದಲ್ಲಿ ಔಷಧಿಗಳನ್ನು ಎಸೆದಿರುವವರನ್ನು ಇ-ಔಷಧ ಪೋರ್ಟಾಲ್ ಮುಖಾಂತರ ಟ್ರ್ಯಾ ಕ್ ಮಾಡಿ ಸಂಭಂದಿಸಿದವರನ್ನು ಪತ್ತೆ ಹಚ್ಚಿ ಅವರ ವಿರುಧ್ದ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು.

ಈ ಔಷಧಿಗಳು ಗೃಹ ಆರೋಗ್ಯ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸಮುದಾಯ ಆರೋಗ್ಯ ಅಧಿಕಾರಿಗಳ ಮುಖಾಂತರ ಮನೆ ಮನೆಗೆ ತೆರಳಿ ವಿತರಿಸುವ ಮಾತ್ರೆಗಳಾಗಿವೆ. ಕಳೆದ ಮಾರ್ಚ್, ಎಪ್ರಿಲ್ ತಿಂಗಳಿನಿಂದ ನಿರಂತರವಾಗಿ ಸಭೆಗಳನ್ನು ಹಮ್ಮಿಕೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಹಾಗೂ ಎಲ್ಲಾ ತಾಲೂಕಗಳಲ್ಲಿ ಔಷಧಗಳ ಬಳಕೆ ಕುರಿತು ನಿರಂತರ ನಿಗಾವಹಿಸಿ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇ-ಔಷಧ ಪೋರ್ಟಲ್ ನಲ್ಲಿ ದಾಖಲಿಸಿ ವಿತರಿಸಲಾಗುತ್ತಿದೆ.

ನಗರದ ಚರಂಡಿಯಲ್ಲಿ ಔಷಧಿಗಳು ಕಂಡು ಬಂದಿರುವ ಮಾಹಿತಿ ಬಂದ ತಕ್ಷಣವೇ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಹಾಗೂ ತಂಡವನ್ನು ಕಳುಹಿಸಿ ಪರಿಶೀಲಿಸಲಾಗಿದ್ದು, ಪತ್ತೆಯಾದ ಔಷಧಿಗಳು ಅವಧಿ ಮೀರಿದ ಔಷಧಿಗಳಾಗಿದ್ದು, ಈಗಾಗಲೇ ಈ ಔಷಧಿಗಳನ್ನು ಸಂಗ್ರಹಿಸಿ ಇಲಾಖೆಯ ಸುಪರ್ಧಿಗೆ ತೆಗೆದು ಕೊಂಡು ನಿಯಮನುಸಾರ ಕ್ರಮ ಕೈಗೊಳ್ಳಲಾಗುದು ಎಂದು ಡಿಎಚ್ಒ ಸ್ಪಷ್ಟಿಕರಣದಲ್ಲಿ ತಿಳಿಸಿದ್ದಾರೆ.