ಕನ್ನಡ ಪರ ಸಂಘಟನೆಗಳು, ದೃಶ್ಯ-ಮುದ್ರಣ ಮಾಧ್ಯಮಗಳು ಹಾಗೂ ಯುಟ್ಯೂಬ್ ಚಾನಲ್‌ಗಳ ಹೆಸರಿನಲ್ಲಿ ಅನುದಾನ ರಹಿತ ಪಿಯು ಕಾಲೇಜುಗಳಿಗೆ ಶೋಷಣೆ ಮಾಡುತ್ತಿರುವವರ ವಿರುದ್ದ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿ ಮಂಡಳಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಒಕ್ಕೊರಲಿನಿಂದ ಒತ್ತಾಯಿಸಲಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಪರ ಸಂಘಟನೆಗಳು, ದೃಶ್ಯ-ಮುದ್ರಣ ಮಾಧ್ಯಮಗಳು ಹಾಗೂ ಯುಟ್ಯೂಬ್ ಚಾನಲ್‌ಗಳ ಹೆಸರಿನಲ್ಲಿ ಅನುದಾನ ರಹಿತ ಪಿಯು ಕಾಲೇಜುಗಳಿಗೆ ಶೋಷಣೆ ಮಾಡುತ್ತಿರುವವರ ವಿರುದ್ದ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿ ಮಂಡಳಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಒಕ್ಕೊರಲಿನಿಂದ ಒತ್ತಾಯಿಸಲಾಗಿದೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕಾಲೇಜುಗಳ ಆಡಳಿತ ಮಂಡಳಿಗಳು, ದಾವಣಗೆರೆಯಲ್ಲಿ ಕೆಲವು ಕನ್ನಡ ಪರ ಸಂಘಟನೆಗಳು ಹಾಗೂ ಕೆಲವು ಮಾಧ್ಯಮಗಳ ಹೆಸರಿನಲ್ಲಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿಗೆ ಶೋಷಣೆ ಮಾಡುತ್ತಿದ್ದು, ಅದನ್ನು ತಡೆಯಬೇಕು ಎಂದರು.

ಇದೇ ವೇಳೆ ಮಾತನಾಡಿದ ಸಂಘದ ಪ್ರಮುಖರು, ಕೆಲ ಟಿವಿ ಚಾನಲ್‌ಗಳು, ಯುಟ್ಯೂಬ್ ಚಾನಲ್‌ಗಳು, ಪತ್ರಿಕೆಗಳ ಹೆಸರು, ಕನ್ನಡ ಪರ ಸಂಘಟನೆಗಳು, ಇತರೆ ಸಂಘಟನೆಗಳ ಹೆಸರನ್ನು ಹೇಳಿಕೊಂಡು, ದುರ್ಬಳಕೆ ಮಾಡಿಕೊಂಡು, ಖಾಸಗಿ ಕಾಲೇಜುಗಳನ್ನು ಶೋಷಣೆ ಮಾಡುತ್ತಿದ್ದು, ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಖಾಸಗಿ ಅನುದಾನ ರಹಿತ ಪಿಯು ಕಾಲೇಜುಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು, ದ್ವಿತೀಯ ಪಿಯುಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತರುವ ಮೂಲಕ ಜಿಲ್ಲೆಯ ಘನತೆ ಹೆಚ್ಚಿಸಿವೆ ಎಂದು ತಿಳಿಸಿದರು.

ಸರ್ಕಾರ, ಇಲಾಖೆಗಳ ಬಹುಪಾಲು ನಿಯಮಗಳನ್ನು ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಪಾಲಿಸುತ್ತಿವೆ. ಜಿಲ್ಲೆಯಲ್ಲಿ ಕೆಲ ಕನ್ನಡ ಪರ ಸಂಘಟನೆಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರೆಂದು ಹೇಳಿಕೊಳ್ಳುವವರು, ಪತ್ರಿಕೆ, ಟಿವಿ ಸುದ್ದಿ ವಾಹಿನಿ, ಯು ಟ್ಯೂಬ್ ನ್ಯೂಸ್‌ ಪ್ರತಿನಿಧಿಗಳೆಂದು ಹೇಳಿಕೊಂಡು, ಕಾಲೇಜುಗಳಿಗೆ ವಿನಾಕಾರಣ ಭೇಟಿ ನೀಡಿ, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅತಿಕ್ರಮ ಪ್ರವೇಶ ಮಾಡುವುದು, ಆಡಳಿತ ಮಂಡಳಿಗೆ ತೊಂದರೆ ನೀಡುವುದು, ಹಣಕ್ಕಾಗಿ ಬೇಡಿಕೆ ಇಡುವುದು, ಪಿಯು ಶಿಕ್ಷಣ ಇಲಾಖೆಗೆ ಒತ್ತಡ ಹೇರಿ, ನೋಟೀಸ್ ಜಾರಿ ಮಾಡಿಸುವುದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಖಾಸಗಿ ಅನುದಾನ ರಹಿತ ಪಿಯು ಕಾಲೇಜುಗಳಿಗೆ ಇಂತಹ ತೊಂದರೆ, ಕಿರುಕುಳದಿಂದ ದೈನಂದಿನ ಕಾಲೇಜಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಬೇಕಂತಲೆ ಬೇರೆ ಬೇರೆಯವರಿಂದ ಅರ್ಜಿ ಹಾಕಿಸುವುದು, ಇಲಾಖೆಗೆ ದೂರು ನೀಡುವುದು, ಕಾಲೇಜುಗಳಿಗೆ, ಆಡಳಿತ ಮಂಡಳಿಗೆ ತೊಂದರೆ ಕೊಡುವುದಷ್ಟೇ ಅಲ್ಲದೇ, ಹೆದರಿಸಿ, ಬೆದರಿಸುವ ಮೂಲಕ ಹಣಕ್ಕೆ ಬೇಡಿಕೆ ಇಡುವುದನ್ನು ಮಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಯಾವುದೇ ಸಂಘಟನೆ, ಕಾರ್ಯಕರ್ತರು ಇಂತಹ ಕೆಲಸ ಮಾಡಿದ್ದರೆ ಅಂತಹವರ ಹೆಸರು ನೀಡಿದರೆ, ನೋಟೀಸ್‌ ಜಾರಿಗೊಳಿಸುವ ಜೊತೆಗೆ ಸಂಬಂಧಿಸಿದ ಇಲಾಖೆಯಿಂದಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೂ ಇಂತಹ ಸಂಘಟನೆಗಳು, ದೃಶ್ಯ, ಮುದ್ರಣ ಮಾಧ್ಯಮದ ಪ್ರತಿನಿಧಿಗಳು, ಪತ್ರಕರ್ತರು, ಯುಟ್ಯೂಬ್ ಪತ್ರಕರ್ತರೆಂದು ಬರುವವರನ್ನು ಪರಿಗಣಿಸದಂತೆ ಪಿಯು ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಆಡಳಿತ ಮಂಡಳಿಗಳ ಸಂಘದ ಎಸ್.ಜಿ.ಶ್ರೀಧರ್, ಡಾ.ತಿಮ್ಮಾರೆಡ್ಡಿ, ಕಕ್ಕರಗೊಳ್ಳ ವೀರೇಶ ಪಟೇಲ್‌, ಡಾ.ಜಿ.ಎನ್.ಎಚ್‌.ಕುಮಾರ, ಮಂಜಪ್ಪ, ವೈ.ವಿ.ವಿನಯ್‌, ಪ್ರಶಾಂತ್, ಎಸ್.ಪ್ರಸಾದ ಬಂಗೇರ, ಎಸ್.ಆನಂದ್‌ ಪೋತಿನ್ ಇತರರು ಇದ್ದರು.