ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರು ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಬಹಳ ವೇಗವಾಗಿ ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ ಸ್ತ್ರೀಯರ ಶೋಷಣೆ ಮುಂದುವರಿಯುತ್ತಿದೆ ಎಂಬುದು ಆತಂಕದ ಸಂಗತಿಯಾಗಿದೆ ಎಂದು ದೇಶಭಕ್ತ ಬಳಗದ ಅಧ್ಯಕ್ಷ ಡಾ. ಸಂತೋಷ್ ಬೇಸರ ವ್ಯಕ್ತಪಡಿಸಿದರು.ದೇಶಭಕ್ತರ ಬಳಗ ಮತ್ತು ಸ್ಪಂದನ ಸಿರಿ ವೇದಿಕೆ ತಾಲೂಕು ಘಟಕ ಇವರ ಸಂಯುಕ್ತಾಶ್ರಯದಲ್ಲಿ. ಮಹಿಳಾ ದಿನಾಚರಣೆಯ ಅಂಗವಾಗಿ ಪಟ್ಟಣದ ಕೋಟೆ ಪ್ರೈಮರಿ ಸ್ಕೂಲಿನಲ್ಲಿ ನಡೆದ ಅಹಲ್ಯಾಬಾಯಿ ಹೋಳ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ನಮಗೆ ತಾಯಿಯಾಗಿ ತಂಗಿಯಾಗಿ, ಗೆಳತಿಯಾಗಿ ಹೆಣ್ಣು ಬೇಕು. ಆದರೆ ಅದೇ ಹೆಣ್ಣು ಮಗುವನ್ನು ಸ್ವೀಕರಿಸಲು ಮನಸ್ಸು ಒಪ್ಪದೇ ಹೆಣ್ಣು ಭ್ರೂಣ ಹತ್ಯೆಯನ್ನು ಮಾಡುತ್ತಿರುವುದು ಖಂಡನೀಯ ಮತ್ತು ಇಂದು ಹೆಣ್ಣು ಇಂದು ಬರೀ ಅಡುಗೆ ಮನೆಗೆ ಸೀಮಿತವಾಗಿರದೆ ಬಾಹ್ಯಾಕಾಶಯಾನ ಮಾಡುತ್ತಿರುವುದು ಸಮಾಜದಲ್ಲಿ ಕಂಡು ಬರುತ್ತಿರುವ ಅತ್ಯುತ್ತಮ ಬೆಳವಣಿಗೆಯಾಗಿದೆ. ಅಹಲ್ಯಬಾಯಿ ಹೋಳ್ಕರ್ ನಮ್ಮ ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಧೀರೋದಾತ್ತ ನಿಲುವು ತಾಳಿ ಕಾಶಿ ಮುಂತಾದ ದೇವಾಲಯಗಳ ಪುನರುತ್ಥಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಕಾರ್ಯದರ್ಶಿ ಮಹೇಶ್ ಮಾತನಾಡಿ, ಶಿಂಧೆ ಮನೆತನದಲ್ಲಿ ಹುಟ್ಟಿದ ಅಹಲ್ಯಾಬಾಯಿ ಹೋಳ್ಕರ್ ರಾಜ್ಯಭಾರವನ್ನು ಕೈಗೆತ್ತಿಕೊಂಡು ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಮಹತ್ತರವಾದ ದೇಣಿಗೆ ಮತ್ತು ಕಾಣಿಕೆಯನ್ನಿಟ್ಟ ಧೀಮಂತ ಮಹಿಳೆಯಾಗಿದ್ದರು. ಅವರ ಹೆಸರಿನ ಪ್ರಶಸ್ತಿಯನ್ನು ಸ್ಪಂದನ ಸಿರಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಆಶಾ ಕಿರಣ್ ಇವರು ಸಾಹಿತ್ಯ , ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿರುವ ಬಹುಮುಖ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.ಈ ವೇಳೆ ಸ್ಪಂದನ ಸಿರಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಆಶಾಕಿರಣ್ ಮಾತನಾಡಿ, ಈಗಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿದ್ದು, ಪೋಷಕರು ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವುದರ ಕಡೆಗೆ ಗಮನಹರಿಸಬೇಕು ಹಾಗೆಯೇ ಪೋಷಕರು ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಬೇಕು ಎಂಬ ಆಸೆಯ ಜೊತೆಗೆ ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು ಎಂಬುದರ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸ್ಪಂದನ ಸಿರಿ ತಾಲೂಕು ಅಧ್ಯಕ್ಷೆ ಪ್ರತಿಭಾಮಯ್ಯ, ಕಾರ್ಯದರ್ಶಿ ಸುಮಾ ಪೃಥ್ವಿ, ಗೀತಾ, ಕೋಟೆ ಪ್ರೈಮರಿ ಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶಕುಂತಲಾ ಇವರು ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಘಟಕದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು .