ಬಳ್ಳಾರಿ: ಮಾನವ ಸಂಪನ್ಮೂಲದ ಅಗತ್ಯ ಹೆಚ್ಚಿರುವ ಕಡೆಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿ ಕಂಡುಬರುತ್ತಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿಗೂ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಬಾಲಕಾರ್ಮಿಕ ಪದ್ಧತಿ ಆಚರಣೆಯಲ್ಲಿರುವುದು ಕಂಡು ಬರುತ್ತಿದೆ. ಇದು ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿದೆ. ಬಾಲಕಾರ್ಮಿಕರಿಗೆ ಹೆಚ್ಚಿನ ಸಂಬಳ ನೀಡುವ ಅಗತ್ಯವಿರುವುದಿಲ್ಲ. ಅತ್ಯಂತ ಕಡಿಮೆ ವೇತನದಲ್ಲಿ ಅವರಿಂದ ಹೆಚ್ಚಿನ ಕೆಲಸ ಮಾಡಿಸಿಕೊಳ್ಳಬಹುದು ಎನ್ನುವ ಶೋಷಣೆಯ ಮನೋಭಾವನೆ ಇಂದಿಗೂ ಜೀವಂತವಾಗಿದೆ. ಓದುವ ವಯಸ್ಸಿನಲ್ಲಿ ಕೆಲಸಕ್ಕೆ ದೂಡಿ ಅವರ ಭವಿಷ್ಯವನ್ನು ಮೊಟಕುಗೊಳಿಸುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ಕೇವಲ ಸರ್ಕಾರದ ಪ್ರಯತ್ನಗಳಿಂದ ಮಾತ್ರ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರು ಸಹಕರಿಸಿ ಕೈ ಜೋಡಿಸಬೇಕು. ತರಕಾರಿ ಮಾರುಕಟ್ಟೆ, ಗ್ಯಾರೇಜ್, ಹೋಟೆಲ್, ಇಟ್ಟಂಗಿ ಭಟ್ಟಿ, ಕೋಳಿಫಾರಂ, ಹಣ್ಣಿನ ಅಂಗಡಿ ಅಥವಾ ಇತರೆಡೆಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳು ಕೆಲಸ ಮಾಡುತ್ತಿರುವುದನ್ನು ಕಂಡರೆ ತಕ್ಷಣವೇ 1098 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಬಳ್ಳಾರಿ ಉಪ ವಿಭಾಗ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಜಿ. ಖೈನೂರ ಅವರು ಮಾತನಾಡಿದರು. ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಸದಸ್ಯರು ಹಾಗೂ ವಕೀಲರಾದ ಶಿವಲೀಲ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.


ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಅನ್ಸರ್ ಬಾಷಾ ಅವರು ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಅಂಗವಾಗಿ ಬಾಲ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆಯನ್ನು ಬಯಸುವುದಿಲ್ಲ ಎಂಬ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಚಿಗುರು ಕಲಾ ತಂಡದ ಹುಲುಗಪ್ಪ ಸಂಗಡಿಗರು ಬಾಲಕಾರ್ಮಿಕ ಪದ್ಧತಿ ವಿರೋಧಿ ಕುರಿತ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು.

ಡಿಸಿ ಕಚೇರಿಯ ತಹಶೀಲ್ದಾರ ವಿಶ್ವಜಿತ್ ಮೆಹೆತಾ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಗೌಸಿಯಾ, ವೆಂಕಟೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧೆ ನಂದಿನಿ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್, ಕಾರ್ಮಿಕ ನಿರೀಕ್ಷಕರಾದ ರಮೇಶ್, ಪರಶುರಾಮ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಶಾಲಾ- ಕಾಲೇಜು ಮಕ್ಕಳು, ಇತರರು ಉಪಸ್ಥಿತರಿದ್ದರು.