ಸಕ್ಕರೆ ಕಾರ್ಖಾನೆಗಳಿಂದ ರೈತರ ಶೋಷಣೆ: ಪುಟ್ಟೇಗೌಡ

| Published : Oct 15 2023, 12:47 AM IST

ಸಕ್ಕರೆ ಕಾರ್ಖಾನೆಗಳಿಂದ ರೈತರ ಶೋಷಣೆ: ಪುಟ್ಟೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕಾರಣಿಗಳ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿರುವುದರಿಂದ ಇವರೆಲ್ಲರೂ ಸೇರಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆರೋಪಿಸಿದರು.
ಕೆ.ಆರ್.ಪೇಟೆ: ರಾಜಕಾರಣಿಗಳ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿರುವುದರಿಂದ ಇವರೆಲ್ಲರೂ ಸೇರಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟನ್ ಕಬ್ಬಿಗೆ ಎಫ್ ಆರ್ ಪಿ ದರವನ್ನು ಪರಿಷ್ಕರಿಸುವ ಗೋಜಿಗೆ ಹೋಗದೆ ಮಾಲೀಕರು ತಮ್ಮ ಮನಸ್ಸಿಗೆ ಬಂದಂತೆ ಬೆಲೆ ನಿಗದಿ ಮಾಡುತ್ತಿದ್ದಾರೆ. ಪ್ರತಿ ವರ್ಷ ಕಬ್ಬು ಬೆಳೆದ ರೈತರಿಗೆ ಅನ್ಯಾಯವಾಗುತ್ತಾ ಬರುತ್ತಿದೆ. ಇದಕ್ಕೆ ಕೋರಮಂಡಲ ಸಕ್ಕರೆ ಕಾರ್ಖಾನೆಯವರು ಹೊರತಲ್ಲ. ಕೇವಲ ಸಬೂಬು ಹೇಳುತ್ತಾರೆಯೇ ಹೊರತು ಉತ್ತಮ ಬೆಲೆ ನಿಗದಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ತಾಲೂಕಿನ ಮಾಕವಳ್ಳಿ ಬಳಿಯಿರುವ ಕೋರಮಂಡಲ ಸಕ್ಕರೆ ಕಾರ್ಖಾನೆಗೆ ಸ್ಥಳೀಯರು ಜಮೀನು ನೀಡಿದ್ದು ಜಮೀನು ಕೊಟ್ಟವರಿಗೆ ಉದ್ಯೋಗವಿಲ್ಲ. ಕಾರ್ಖಾನೆಯಿಂದ ಸ್ಥಳೀಯರಿಗೆ ಯಾವುದೇ ರೀತಿಯ ಅನುಕೂಲತೆಗಳಿಲ್ಲ ಎಂದು ಆರೋಪಿಸಿದರು. ಪಕ್ಕದ ಹೊಳೆನರಸೀಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆ ಸ್ಥಳೀಯರ ಕಬ್ಬನ್ನು 10 ರಿಂದ 12 ತಿಂಗಳೊಳಗೆ ಕಟಾವು ಮಾಡುವ ಪರಿಪಾಠ ವಿದೆ. ಆದರೆ, ಕೋರಮಂಡಲ ಕಾರ್ಖಾನೆ ನಿರ್ಮಾಣಕ್ಕೆ ಜಾಗ ಕೊಟ್ಟವರಿಗೆ ಹಾಗೂ ತಾಲೂಕಿನ ಕಬ್ಬು ಬೆಳೆಗಾರರು ಬೆಳೆದ ಕಬ್ಬು ಕಟಾವು ಮಾಡಲು 15 ರಿಂದ 16 ತಿಂಗಳು ತೆಗೆದುಕೊಳ್ಳುತ್ತಾರೆ ಎಂದರು. ಕಬ್ಬನ್ನು ನುರಿಸುವ ಕಾರ್ಖಾನೆಯಲ್ಲಿ ವಿದ್ಯುತ್ ಉತ್ಪಾದನೆ, ಮೊಲಾಸಸ್, ಮಡ್ಡಿ ಸೇರಿ ವಿವಿಧ ಉಪ ಉತ್ಪನ್ನಗಳು ದೊರೆಯುತ್ತವೆ. ಈ ಉಪ ಉತ್ಪನ್ನಗಳಿಂದ ರೈತರ ಪ್ರತಿ ಟನ್ ಕಬ್ಬಿಗೆ 600 ರು. ಲಾಭಾಂಶ ಸಿಗುತ್ತದೆ. ಈ ಹಣದಲ್ಲಿ ಬೆಳೆಗಾರರಿಗೆ 400 ರಿಂದ 500 ಹೆಚ್ಚುವರಿ ಕೊಡಬಹುದು. ಆದರೆ, ಕೋರಮಂಡಲ ಕಾರ್ಖಾನೆ ಪ್ರಾರಂಭದಿಂದ ಇಲ್ಲಿಯವರೆಗೂ ರೈತರಿಗೆ ಲಾಭಾಂಶದ ಹಣ ನೀಡಿಲ್ಲ ಎಂದು ಹೇಳಿದರು. ಮಾಕವಳ್ಳಿ ಕೋರಮಂಡಲ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಸ್ಥಾಪಿಸಲು ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ವಿರೋಧವಿದೆ. ಇದನ್ನು ಪ್ರಶ್ನಿಸಲು ಹೋದರೆ ಅವರನ್ನು ಕೆಟ್ಟವರು, ಕಿಡಿಗೇಡಿಗಳು ಎಂದು ಕಾರ್ಖಾನೆ ಉಪಾಧ್ಯಕ್ಷ ರವಿ ಹೋರಾಟಗಾರರನ್ನು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇರುವ ಸತ್ಯ ಮರೆಮಾಚುವ ಕೆಲಸ ಮಾಡುವುದು ಅಪರಾಧ. ಕೂಡಲೇ ರೈತರ ಕ್ಷಮೆಯಾಚಿಸದಿದ್ದರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡರಾದ ಕರೋಟಿ ತಮ್ಮಯ್ಯ, ಮಿಲ್ ರಾಜಣ್ಣ, ಹೊನ್ನಪ್ಪ, ಯಶೋಧರ ಸೇರಿದಂತೆ ಹಲವರಿದ್ದರು.