ಗಣಿಗಾರಿಕೆ ಅಬ್ಬರದ ಕಾಲದಲ್ಲಿ ಮಹಿಳಾ ಶೋಷಣೆ: ಡಾ. ಭಾನುಮತಿ ಕಲ್ಲೂರಿ

| Published : Mar 09 2025, 01:45 AM IST

ಸಾರಾಂಶ

ಈ ಭಾಗದಲ್ಲಿ ಅತಿ ಹೆಚ್ಚಾಗಿ ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ ನಡೆದಿವೆ.

ವಿಚಾರ ಸಂಕಿರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಈ ಭಾಗದಲ್ಲಿ ಅತಿ ಹೆಚ್ಚಾಗಿ ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ ನಡೆದಿವೆ ಎಂದು ಗಣಿಗಾರಿಕೆ ಮತ್ತು ಮಾನವ ಹಕ್ಕುಗಳ ಮೇಲೆ ಕೆಲಸ ಮಾಡುತ್ತಿರುವ ಹೈದರಾಬಾದಿನ ಡಾ. ಭಾನುಮತಿ ಕಲ್ಲೂರಿ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ವಿಜಯನಗರ ಘಟಕದಿಂದ ಹಮ್ಮಿಕೊಂಡಿದ್ದ ಸಹಬಾಳ್ವೆ ಸಮಾನ ಗೌರವ: ಕೂಡಿ ಕಟ್ಟುವ ನ್ಯಾಯದ ಜಗವ'''' ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ನಾನು 25 ವರ್ಷಗಳಿಗಿಂತಲೂ ಹಿಂದೆ ಹೆಚ್ಚು ಹಂಪಿ ಸೇರಿದಂತೆ ಈ ಭಾಗಕ್ಕೆ ಬರುತ್ತಿದ್ದೆ. ಆಗ ಇಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಮಕ್ಕಳು, ಮಹಿಳಾ ಕಾರ್ಮಿಕರು ಹೆಚ್ಚಾಗಿದ್ದರು. ನಿಯಮಗಳ ಉಲ್ಲಂಘನೆ, ಮಹಿಳೆಯ ಮೇಲೆ ದೌರ್ಜನ್ಯಗಳು ಗಣಿ ಭಾಗದಲ್ಲಿ ಬಹಳ ಕ್ರೂರವಾಗಿತ್ತು ಎಂದರು.

ಗಣಿ ಹಣದಿಂದ ಯಾರೂ ಉದ್ಧಾರ ಆಗಿಲ್ಲ, ಅಕ್ರಮ ಗಣಿಗಾರಿಕೆ ನಿಂತ ಬಳಿಕ ವಿವಿಧ ರಾಜ್ಯಗಳಿಂದ ಬಂದಿದ್ದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಯಿತು. ಕುಡಿತ, ಮೋಜು, ಮಸ್ತಿ ಹೆಚ್ಚಾಗಿ ಹಾಳಾಗಿದ್ದು, ಇದರ ನೇರ ಪರಿಣಾಮ ಮಹಿಳೆಯರ ಮೇಲೆ ಆಗಿದೆ. ಗಣಿಗಾರಿಕೆ ಮತ್ತು ದೇವದಾಸಿಯರ ಕುರಿತು ಅಧ್ಯಯನ ನಡೆಸಿರುವೆ. ಕಳೆದ 25 ವರ್ಷಗಳಿಂದ ಇಲ್ಲಿನ ಶೋಷಣೆ ನೋಡಿರುವೆ ಎಂದರು.

ಗಣಿಗಾರಿಗೆ ಬಂದ್ ಆದ ಮೇಲೆ ರಾಜ್ಯ ಸರ್ಕಾರ, ಗಣಿ ಮಾಲೀಕರು, ಗುತ್ತಿಗೆದಾರರು ಕಾರ್ಮಿಕರ ಬಗ್ಗೆ ಗಮನಹರಿಸಲಿಲ್ಲ. ಕೆಲಸ ಇಲ್ಲದೆ ಬಹಳ ಜನರು ವಲಸೆ ಹೋಗಲಾರಂಭಿಸಿದರು. ಗಣಿ ಕ್ಯಾಂಪ್‌ಗಳಲ್ಲೂ ಮೂಲಭೂತ ಸೌಕರ್ಯ ಕೊಡಲಿಲ್ಲ. ಈಗಲೂ ಅವರ ಬದುಕು ಶೋಚನೀಯವಾಗಿದೆ. ಈ ಭಾಗದಲ್ಲಿ ಪ್ರಮುಖವಾಗಿ ದೇವದಾಸಿಯರ ಪರಿಸ್ಥಿತಿ ಬಹಳ ದುಸ್ತರವಾಗಿತ್ತು. ಆಗ ಬಾಲ, ಮಹಿಳಾ ಕಾರ್ಮಿಕರಿದ್ದರು, ರಾಜ್ಯದಲ್ಲಿ ಗಣಿಯಲ್ಲಿ ಶೋಷಣೆ ದೊಡ್ಡಮಟ್ಟದಲ್ಲಿ ಇದೆ ಎಂದರು.

ಮೈಸೂರಿನ ಕೆ. ಸುಶೀಲಾ, ಸೌಭಾಗ್ಯಲಕ್ಷ್ಮಿ ಡಾ. ಮಂಜಮ್ಮ ಜೋಗತಿ ಮಾತನಾಡಿದರು.

ಶಾರದಾ ಉಡುಪಿ, ರಮಾ ಕುಮಾರಿ, ಭಾನು ತರೀಕೆರೆ, ಆಶಾಲತಾ ಬೇಕಲ್ ಮತ್ತಿತರರಿದ್ದರು.