ಅನಾದಿಯಿಂದಲೂ ಹೆಣ್ಣಿನ ಶೋಷಣೆ: ನ್ಯಾ.ಕರೆಣ್ಣವರ್ ವಿಷಾದ

| Published : Jan 25 2024, 02:02 AM IST

ಸಾರಾಂಶ

ಹೆಣ್ಣು ಮಕ್ಕಳ ಮೇಲೆಯೇ ಮನೆ, ಕುಟುಂಬವಷ್ಟೇ ಅಲ್ಲ, ಇಡೀ ದೇಶ, ದೇಶದ ಭವಿಷ್ಯವೇ ಅವಲಂಬಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ.ಕರೆಣ್ಣವರ್ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಮಾಯಣ, ಮಹಾಭಾರತ ಸೇರಿದಂತೆ ಪುರಾಣ ಕಾಲದಿಂದ ಈವರೆಗೂ ಮಹಿಳೆ ಶೋಷಣೆಗೊಳಗಾಗುತ್ತಲೇ ಬಂದಿದ್ದು, ಇಂತಹ ಶೋಷಣೆ ವಿರುದ್ಧ ಮಹಿಳೆಯರೂ ಸೇರಿದಂತೆ ಯುವ ಜನರು ಧ್ವನಿ ಎತ್ತಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ.ಕರೆಣ್ಣವರ್ ಕರೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬೇಟಿ ಬಚಾವೋ-ಬೇಟಿ ಪಡಾವೋ ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಅಭಿಯಾನದಡಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನಾದಿಯಿಂದಲೂ ಶೋಷಣೆಗೊಳಗಾದ ಮಹಿಳೆಯನ್ನು ಶೋಷಣೆಗೀಡಾಗುವುದರಿಂದ ರಕ್ಷಿಸುವ ಕೆಲಸ ಆಗಬೇಕಿದೆ ಎಂದರು.

ದೇಶ ನಿರ್ಮಾಣ, ದೇಶದ ಭವಿಷ್ಯವು ನಮ್ಮ ಇಂದಿನ ಯುವ ಜನರ ಮೇಲೆ ನಿಂತಿದೆ. ಆದರೆ, ಹೆಣ್ಣು ಮಕ್ಕಳಿಗೆ ಸೂಕ್ತ ಸ್ಥಾನಮಾನ ಸಿಗದೇ, ಹಲವಾರು ಕ್ಷೇತ್ರಗಳಲ್ಲಿ ಇಂದಿಗೂ ದೇಶ ಅಭಿವೃದ್ಧಿ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಸಿಗಬೇಕೆಂಬ ಸದುದ್ದೇಶದಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು. ನಿರಂತರ ಶೋಷಣೆಗೀಡಾಗುತ್ತಲೇ ಬಂದ ಮಹಿಳೆಯ ರಕ್ಷಣೆಗಾಗಿ, ಆಕೆಯ ಹಿತ ಕಾಯಲೆಂದೇ ಹಲವಾರು ಕಾನೂನು ಜಾರಿಗೊಳಿಸಲಾಗಿದೆ. ಮಹಿಳೆಯರಿಗೆ ಸಮಾನ ಅವ ಕಾಶ ಕಲ್ಪಿಸಲು ಸಮಾನ ಕಾನೂನು ಜಾರಿಗೊಳಿಸಲಾಗಿದೆ. ಗರ್ಭಪಾತ, ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ತಡೆಗೆ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಇಂತಹ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು, ಮಹಿಳೆಯರು ಉನ್ನತ ಸಾಧನೆ ಮೆರೆಯಬೇಕು ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕಿ ವಾಸಂತಿ ಉಪ್ಪಾರ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಕುಟುಂಬದಲ್ಲೂ ಎಲ್ಲಾ ಹಂತದ ಲ್ಲೂ ಆಕೆ ಮಹತ್ವದ ಪಾತ್ರವನ್ನೇ ವಹಿಸುತ್ತಿದ್ದಾಳೆ. ಅಷ್ಟೇ ಅಲ್ಲ ಯುದ್ಧಭೂಮಿಯಲ್ಲಿ ತನ್ನ ಸೇವೆ ನೀಡುತ್ತಿದ್ದಾಳೆ. ವಿಜ್ಞಾನ, ತಂತ್ರಜ್ಞಾನ, ಅಂತರಿಕ್ಷ ಕ್ಷೇತ್ರದಲ್ಲೂ ಆಕೆಯ ಹೆಜ್ಜೆಯ ಗುರುತುಗಳಿವೆ. ಗುರಿ ಸಾಧಿಸುವವರೆಗೆ ಹೆಣ್ಣು ಮಕ್ಕಳು ಛಲ ಬಿಡುವುದಿಲ್ಲ. ಅಂತೆಯೇ ಮಹಿಳೆಯರು ಯಾವುದಕ್ಕೂ ಅಂಜದೇ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಇತರರು ಇದ್ದರು.