ಮಹಿಳೆಯರು ಎಚ್ಚೆತ್ತುಕೊಳ್ಳದಿದ್ದರೆ ಶೋಷಣೆಗಳು ನಿಲ್ಲುವುದಿಲ್ಲ: ಪರಮೇಶ್ವರ್

| Published : Sep 28 2025, 02:00 AM IST

ಮಹಿಳೆಯರು ಎಚ್ಚೆತ್ತುಕೊಳ್ಳದಿದ್ದರೆ ಶೋಷಣೆಗಳು ನಿಲ್ಲುವುದಿಲ್ಲ: ಪರಮೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಮೇಲೆ ನಿರಂತರ ಶೋಷಣೆ ನಡೆಯುತ್ತಿವೆ. ಹೆಣ್ಣು ಮಕ್ಕಳು ಗರ್ಭದಲ್ಲಿದ್ದಾಗಲೇ ಶೋಷಣೆ ಆರಂಭವಾಗಿ ಭ್ರೂಣ ಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ದೇವದಾಸಿ ಪದ್ಧತಿ, ಸತಿ ಸಹಗಮನ ಪದ್ಧತಿ ಈಗೆ ಒಂದಲ್ಲಾ ಒಂದು ಪದ್ಧತಿಯಿಂದ ಹೆಣ್ಣು ಮಕ್ಕಳು ಮಣ್ಣು ಸೇರುವವರೆಗೂ ಶೋಷಣೆ ನಡೆಯುತ್ತಲೇ ಇರುತ್ತವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅನಾದಿಕಾಲದಿಂದಲೂ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಸ್ವತಃ ಮಹಿಳೆಯರು ಎಚ್ಚೆತ್ತುಕೊಳ್ಳದಿದ್ದರೆ ಶೋಷಣೆಗಳು ನಿಲ್ಲುವುದಿಲ್ಲ ಎಂದು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಪರಮೇಶ್ವರ್ ಹೇಳಿದರು.

ಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾದಲ್ಲಿ ಮಾತನಾಡಿದರು.

ಮಹಿಳೆಯರ ಮೇಲೆ ನಿರಂತರ ಶೋಷಣೆ ನಡೆಯುತ್ತಿವೆ. ಹೆಣ್ಣು ಮಕ್ಕಳು ಗರ್ಭದಲ್ಲಿದ್ದಾಗಲೇ ಶೋಷಣೆ ಆರಂಭವಾಗಿ ಭ್ರೂಣ ಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ದೇವದಾಸಿ ಪದ್ಧತಿ, ಸತಿ ಸಹಗಮನ ಪದ್ಧತಿ ಈಗೆ ಒಂದಲ್ಲಾ ಒಂದು ಪದ್ಧತಿಯಿಂದ ಹೆಣ್ಣು ಮಕ್ಕಳು ಮಣ್ಣು ಸೇರುವವರೆಗೂ ಶೋಷಣೆ ನಡೆಯುತ್ತಲೇ ಇರುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.

ಗಂಡನನ್ನು ಕಳೆದುಕೊಂಡ ಹೆಣ್ಣು ಮಕ್ಕಳನ್ನು ಸಮಾಜ ಅತ್ಯಂತ ನಿಕೃಷ್ಟವಾಗಿ ಕಾಣುತ್ತದೆ. ಶುಭ ಸಂದರ್ಭಗಳಿಗೆ ಅವರು ಬರುವುದು ಅನಿಷ್ಟ ಎಂದು ಪರಿಗಣಿಸುತ್ತಾರೆ. ನಾಗರೀಕತೆ ಹೆಚ್ಚಾದಂತೆ ಅನಾಗರೀಕತೆ ಹೆಚ್ಚುತ್ತಿದೆ. ಮೂಢನಂಬಿಕೆಗೆ ಜನರು ಕಟ್ಟು ಬೀಳುತ್ತಿದ್ದಾರೆ ಎಂದು ವಿಷಾದಿಸಿದರು.

ಮೂಢನಂಬಿಕೆ, ಶೋಷಣೆಗಳನ್ನು ತಡೆಯಲು ಕಾನೂನಿನಲ್ಲಿ ಅನೇಕ ಕಾಯ್ದೆಗಳಿವೆ. ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದೆ ಎಂದರು.

ಶಾಸಕ ರಮೇಶ್‌ ಬಂಡಿಸಿದ್ದೇಗೌಡರ ಪತ್ನಿ ಸುಮತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನವರಾತ್ರಿಯೂ ಶಕ್ತಿ ಹಬ್ಬ. ಹೆಣ್ಣು ಮಕ್ಕಳು ಧೃತಿಗೆಡದೆ ಶಕ್ತಿಯಿಂದ ಹೋರಾಟ ನಡೆಸಿ ತಮ್ಮ ಗುರಿ ಸಾಧಿಸಬೇಕು ಎಂದರು.

ಮಹಿಳಾ ದಸರಾದಲ್ಲಿ ಕೊಡಿಯಾಲ ಆಶಾ ಕಾರ್ಯಕರ್ತೆಯರಿಂದ ನೃತ್ಯ ಪ್ರದರ್ಶನ ಮಾಡಲಾಯಿತು. ತಾಯಿ ಮಕ್ಕಳ ಆರೋಗ್ಯದ ಕುರಿತ ಕೋಲಾಟ, ಬೆಳಗೊಳ ವೃತ್ತದ ಅಂಗನವಾಡಿ ಕಾರ್ಯಕರ್ತೆಯರ ರೀಮಿಕ್ಸ್ ನೃತ್ಯಕ್ಕೆ ಮಹಿಳಾ ಮಣಿಯರು ಹುಚ್ಚೆದ್ದು ಕುಣಿದು ನೃತ್ಯ ಪ್ರದರ್ಶಿಸಿದರು.

ಕಸಬಾ ಹೋಬಳಿಯ ಆಶಾ ಕಾರ್ಯಕರ್ತೆಯರು ಪರಿಸರ ಕಾಳಜಿ ಸಾರುವ ಗೀತೆ, ನಂತರ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸೋಬಾನೆ ಪದ, ಜಾನಪದ ಗೀತೆ, ತತ್ವಪದಗಳನ್ನು ಸಾದರ ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಆಶಾ, ತಾಲೂಕು ಯೋಜನಾಧಿಕಾರಿ ತ್ರಿವೇಣಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.