ಶೋಷಿತರನ್ನು ಮುಖ್ಯವಾಹಿನಿಗೆ ತರಬೇಕು: ಇಕ್ಬಾಲ್ ಹುಸೇನ್

| Published : Jan 27 2025, 12:47 AM IST

ಸಾರಾಂಶ

ರಾಮನಗರ: ತುಳಿತಕ್ಕೊಳಗಾದ ಕೆಳಸ್ತರದಲ್ಲಿರುವ ಸಣ್ಣ ಪುಟ್ಟ ಜಾತಿಗಳನ್ನು ಮೇಲಕ್ಕೆತ್ತಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ರಾಮನಗರ: ತುಳಿತಕ್ಕೊಳಗಾದ ಕೆಳಸ್ತರದಲ್ಲಿರುವ ಸಣ್ಣ ಪುಟ್ಟ ಜಾತಿಗಳನ್ನು ಮೇಲಕ್ಕೆತ್ತಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಆದಿ‌ ದ್ರಾವಿಡ ಸಮುದಾಯ ಕ್ಷೇಮಾಭಿವೃದ್ಧಿ ಸೇವಾ ಸಂಘವನ್ನು ಉದ್ಘಾಟಿಸಿದ ಅವರು, ಸಮಾಜದಲ್ಲಿ ತುಳಿತಕ್ಕೊಳಗಾದ ವಿವಿಧ ಸ್ತರದ ಜನ ಸಮುದಾಯಗಳಿವೆ. ಅವರೆಲ್ಲರು ಕಷ್ಟಪಡುವ ಪ್ರಾಮಾಣಿಕ ಜನರರಾಗಿದ್ದಾರೆ. ಆ ಸಮುದಾಯಗಳು ಇನ್ನೂ ಸಮಾಜದ‌ ಮುಖ್ಯ ವಾಹಿನಿಗೆ ಬರಲು ತವಕಿಸುತ್ತಿವೆ ಎಂಬುದೇ‌ ನನಗೆ ನೋವಿನ ಸಂಗತಿ ಎಂದರು.

ಎಲ್ಲಾ ವರ್ಗದ ಜನರಿಗೆ ಸಮಾನವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೀಡಿದ ಗಣರಾಜ್ಯೋತ್ಸವ ದಿನದಂದೇ ಸಮುದಾಯದ ಅಭಿವೃದ್ಧಿಗಾಗಿ ಆದಿ ದ್ರಾವಿಡ ಸಮುದಾಯ ಕ್ಷೇಮಾಭಿವೃದ್ಧಿ ಸೇವಾ ಸಂಘ ಸಂಘಟನೆ ಪ್ರಾರಂಭ ವಾಗುತ್ತಿರುವುದು ಶ್ಲಾಘನೀಯ. ತಮ್ಮ ಸಮುದಾಯಗಳ ಪ್ರಗತಿಗೆ ನಾವೆಲ್ಲರೂ ಕೈ ಜೋಡಿಸಿ ಶ್ರಮಿಸಬೇಕಿದೆ ಎಂದು ಹೇಳಿದರು.

ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕು. ಆಗ ನಮ್ಮ ಸಮಾಜದ ಸುಧಾರಣೆ ಸಾಧ್ಯ. ಜೊತೆಗೆ ಸಮುದಾಯ ಜನರು ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ಸಂಘಟನೆಯ ಆಶಯಗಳು ಸಾಕಾರವಾಗಲು ಸಾಧ್ಯ. ಸಂಘಟನೆಯ ಪದಾಧಿಕಾರಿಗಳು ಒಗ್ಗಟ್ಟಿನಿಂದ ಸಂಘದ ಆಶಯಗಳನ್ನು ಸಾಕಾರಗೊಳಿಸಿ ಎಂದು ಇಕ್ಬಾಲ್ ಹುಸೇನ್ ಶುಭ ಹಾರೈಸಿದರು.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಪೆರಿಯಾರ್ ರಾಮಸ್ವಾಮಿ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ ಮಹಾನ್ ಕ್ರಾಂತಿಕಾರಿ. ದ್ರಾವಿಡರ ಸ್ವಾಭಿಮಾನ ಎಂಬುದು ಅವರ ಕ್ರಾಂತಿಕಾರಕ ಮಾತಾಗಿತ್ತು. ದ್ರಾವಿಡ ಚಳುವಳಿ ನಾಯಕತ್ವ ವಹಿಸಿ ವೈಚಾರಿಕಾ ಆಲೋಚನೆ ಮಾಡುತ್ತಿದ್ದ ಪೆರಿಯರ್ ರವರು, ದ್ರಾವಿಡರೆ ಭಾರತದ ಮೂಲ ನಿವಾಸಿಗಳು ಎಂದು ಪ್ರತಿಪಾದಿಸಿ ಹೋರಾಟ ಮಾಡಿದವರು ಎಂದರು.

ಬಡಜನರ , ಶೋಷಿತ ಜನಾಂಗದ ಪರ ಧ್ವನಿಯಾಗಿ ಶೋಷಿತ ಜನಾಂಗ ಮತ್ತು ಸ್ತ್ರೀಯರಿಗೆ ಸಮಾತನೆ ಇಲ್ಲದಿದ್ದ ಕಾಲದಲ್ಲಿ ಪೆರಿಯಾರ್ ರಾಮಸ್ವಾಮಿರವರು ತಂದ ಸಮಾಜದ ಸುಧಾರಣೆಗಳ ಪ್ರಯತ್ನವನ್ನು ಇಂದಿನ ಸಮಾಜ ಪಡೆದಿದೆ. ತಮಿಳುನಾಡಿನ ರಾಜಕೀಯ ಪಕ್ಷಗಳು ದ್ರಾವಿಡ ಪರಂಪರೆಯನ್ನು ಅನುಸರಿಸಿಕೊಂಡು ಬಂದು ಯಶಸ್ಸು ಕಾಣುತ್ತಿವೆ. ಈ‌ ಸಮುದಾಯದ ಹಲವರು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಸಂಘಟನೆಯಲ್ಲಿ ರಾಜಕೀಯ ಬೆರೆಸದೆ ಸಮುದಾಯದ ಪ್ರಗತಿಗಾಗಿ ಹೋರಾಟ ಮಾಡಿ‌ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಮೂಲ‌ ನಿವಾಸಿಗಳಾಗಿ ತಳ ಸಮುದಾಯ ದಲ್ಲಿ ಬದುಕುತ್ತಿದ್ದೇವೆ. ಅಂತಹ ಸಮುದಾಯವನ್ನು ಸಾಮಾಜದ ಮುಖ್ಯ ವಾಹಿನಿಗೆ ತಂದು, ಸಮಾನತೆ ಮತ್ತು‌ ಸಹೋದತ್ವದಿಂದ‌ ಮಹತ್ವ ಪೂರ್ಣವಾಗಿ ಬದುಕುವುದನ್ನು ಜನರಿಗೆ ಸಂದೇಶ ನೀಡುವುದು ಸಂಘದ ಪ್ರಮುಖ ಉದ್ದೇಶವಾಗಿದೆ‌ ಎಂದರು.

ಅಕ್ಕಾ ಅಕಾಡೆಮಿಯ ಡಾ. ಶಿವಕುಮಾರ್ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದ ಗಣ್ಯರಾದ ಶ್ರೀನಿವಾಸ್, ರಾಜು, ರಾಮಚಂದ್ರು, ನಾಗಮ್ಮ, ಜಾನಕಿ, ಶೇಖರ್ ಹಾಗೂ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು.

ಡಿಆರ್ ಡಿಒ ಮಹಾಲಕ್ಷ್ಮಿ, ದಿಂಡಿಗಲ್ ಕೆನರಾಬ್ಯಾಂಕ್ ಮ್ಯಾನೇಜರ್ ಶಿವಕುಮಾರ್, ಅಂತರ ರಾಷ್ಟ್ರೀಯ ಕಬ್ಬಡಿ ಆಟಗಾರ ವಿಷಕಂಠ, ಎಎಸ್ ಐ ಶೇಖರ್, ಮುಖಂಡರಾದ ಶಿವಕುಮಾರಸ್ವಾಮಿ, ಹರೀಶ್, ವೆಂಕಟೇಶ್, ಶಿವಶಂಕರ್, ಬಿ.ವಿ.ಎಸ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಸಂಘದ ಅಧ್ಯಕ್ಷ ಕೆ.ಮುರುಗೇಶ್, ವಾಲ್ಮೀಕಿ ಸಮುದಾಯದ ವಾಸು ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳ್ಳಿರಥದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಭಾವಚಿತ್ರಗಳನ್ನು ವಿವಿಧ ಜನಪದ ಕಲಾ ತಂಡಗ ಳೊಂದಿಗೆ ನಗರದದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

26ಕೆಆರ್ ಎಂಎನ್ 8.ಜೆಪಿಜಿ

ರಾಮನಗರದ ಡಾ.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಆದಿ ದ್ರಾವಿಡ ಸಮುದಾಯ ಕ್ಷೇಮಾಭಿವೃದ್ಧಿ ಸೇವಾ ಸಂಘವನ್ನು ಶಾಸಕ ಇಕ್ಬಾಲ್ ಹುಸೇನ್ ದೀಪ ಬೆಳಗಿಉದ್ಘಾಟಿಸಿದರು.