ರಾಮನಗರಕ್ಕೆ ಎಕ್ಸ್‌ಪ್ರೆಸ್‌ ಕಾಲುವೆ ನೀರು ಹರಿಸಲು ಬಿಡಲ್ಲ

| Published : May 13 2024, 12:01 AM IST

ರಾಮನಗರಕ್ಕೆ ಎಕ್ಸ್‌ಪ್ರೆಸ್‌ ಕಾಲುವೆ ನೀರು ಹರಿಸಲು ಬಿಡಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ರೈತರ ಹಿತವನ್ನು ಕಡೆಗಣಿಸಿ ರಾಮನಗರಕ್ಕೆ ಎಕ್ಸ್‌ಪ್ರೆಸ್‌ ಕಾಲುವೆ ಮೂಲಕ ನೀರನ್ನು ತೆಗೆದುಕೊಂಡು ಹೋಗಲು ಸರ್ಕಾರ ಹವಣಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ಎಸ್.ಡಿ ದಿಲೀಪ್ ಕುಮಾರ್ ಕಿಡಿಕಾರಿದರು

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ರೈತರ ಹಿತವನ್ನು ಕಡೆಗಣಿಸಿ ರಾಮನಗರಕ್ಕೆ ಎಕ್ಸ್‌ಪ್ರೆಸ್‌ ಕಾಲುವೆ ಮೂಲಕ ನೀರನ್ನು ತೆಗೆದುಕೊಂಡು ಹೋಗಲು ಸರ್ಕಾರ ಹವಣಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ಎಸ್.ಡಿ ದಿಲೀಪ್ ಕುಮಾರ್ ಕಿಡಿಕಾರಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ನಿಗದಿಯಾಗಿರುವ 24.5 ಟಿಎಂಸಿ ನೀರನ್ನು ಪಡೆಯಲು ಸಾಧ್ಯವಾಗುತ್ತಿಲ್ಲದಿರುವಾಗ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವುದು ಎಷ್ಟರಮಟ್ಟಿಗೆ ಸರಿ. ಇದನ್ನು ವಿರೋಧಿಸಿ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದರೂ, ಕಾಮಗಾರಿ ಪ್ರಾರಂಭಿಸಲು ಮುಂದಾಗಿರುವುದು ಸರಿಯಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಇದೇ ತಿಂಗಳ 16ರಂದು ಪಕ್ಷಾತೀತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಸ್ವ-ಹಿತಾಸಕ್ತಿಗಾಗಿ ತಾಲೂಕಿನ ರೈತರ ಹಿತವನ್ನು ಬಲಿಕೊಡುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ಗುಬ್ಬಿ ಮಂಡಲ ಅಧ್ಯಕ್ಷ ಬಿ.ಎಸ್ ಪಂಚಾಕ್ಷರಿ ಮಾತನಾಡಿ, ತುಮಕೂರು ಶಾಖಾ ನಾಲೆಯ 70 ಕಿ.ಮೀ ನಿಂದ 167 ಕಿಮೀ ವರೆಗೆ ಕಾಲುವೆಯಲ್ಲಿಯೇ ನೀರು ಹರಿಸಲು ಸಾಧ್ಯವಿದ್ದರೂ ಉದ್ದೇಶ ಪೂರ್ವಕವಾಗಿ ಜಲ ಸಂಪನ್ಮೂಲ ಸಚಿವರು ಜಿಲ್ಲೆಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರು. ಯಾವುದೇ ಕಾರಣಕ್ಕೂ ಎಕ್ಸ್‌ಪ್ರೆಸ್‌ ಕಾಲುವೆ ಮೂಲಕ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಅದಕ್ಕಾಗಿ ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಎಕ್ಸ್‌ಪ್ರೆಸ್‌ ಕಾಲುವೆ ಸಿದ್ದಗೊಂಡಲ್ಲಿ ಗುಬ್ಬಿ, ತುರುವೇಕೆರೆ, ಶಿರಾ, ಮಧುಗಿರಿ, ಕೊರಟಗೆರೆ, ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಸುಮಾರು 23 ಕುಡಿಯುವ ನೀರಿನ ಯೋಜನೆಗಳು ಮತ್ತು ಸುಮಾರು 23 ಅಚ್ಚುಕಟ್ಟು ಪ್ರದೇಶಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಹೇಳಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಹೇಮಾವತಿ ನಾಲೆಯ ವಿಚಾರವನ್ನೇ ಇಟ್ಟುಕೊಂಡು ಅನೇಕ ರಾಜಕಾರಣಿಗಳು ರಾಜಕೀಯ ನಡೆಸುತ್ತಿದ್ದಾರೆ. ಆದರೆ ತಾಲೂಕಿನ ಹಿತವನ್ನು ಕಡೆಗಣಿಸಿ ಎಕ್ಸ್‌ಪ್ರೆಸ್‌ ಕಾಲುವೆ ಮೂಲಕ ನೀರು ತೆಗೆದುಕೊಂಡು ಹೋಗಲು ರೈತ ಸಂಘ ಬಿಡುವುದಿಲ್ಲ . ಜನಸಾಮಾನ್ಯರ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳದ ಅಧಿಕಾರಿಗಳು ರಾಜಕಾರಣಿಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಅವರಿಗೆ ಬುದ್ಧಿ ಕಲಿಸಬೇಕಿದೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಬಿಎಸ್ ನಾಗರಾಜು ಮಾತನಾಡಿ, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಮುಖಂಡರು ಪಕ್ಷಾತೀತವಾಗಿ ಹೋರಾಟ ನಡೆಸಲು ಮುಂದಾಗಬೇಕಿದೆ. ಇಲ್ಲವಾದಲ್ಲಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಹೇಳಿದರು.

ಮುಖಂಡರಾದ ಸಿದ್ದರಾಮಣ್ಣ, ಬೆಟ್ಟಸ್ವಾಮಿ, ಎಚ್.ಟಿ ಬೈರಪ್ಪ, ಸುರೇಶ್ ಗೌಡ, ಪಿ.ಬಿ. ಚಂದ್ರಶೇಖರ್ ಬಾಬು, ಚಂದ್ರಶೇಖರ್, ಗಂಗಣ್ಣ, ಬಲರಾಮಣ್ಣ, ಶಿವಶಂಕರ್ ಬಾಬು, ಲೋಕೇಶ್, ಯೋಗಾನಂದ, ರೈತ ಸಂಘದ ಲೋಕೇಶ್, ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.