ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮುಚ್ಚಿ ರೈತರ ಪ್ರತಿಭಟನೆ

| Published : May 21 2024, 12:35 AM IST

ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮುಚ್ಚಿ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರುದ್ಧದ ಹೋರಾಟದ ಸ್ವರೂಪ ಬದಲಿಸಿಕೊಂಡು ರೈತರು ಜೆಸಿಬಿ ಯಂತ್ರ ಬಳಸಿ ಕೆನಾಲ್ ಮುಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಸಿ.ಎಸ್.ಪುರ ಹೋಬಳಿ ಚನ್ನೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರುದ್ಧದ ಹೋರಾಟದ ಸ್ವರೂಪ ಬದಲಿಸಿಕೊಂಡು ರೈತರು ಜೆಸಿಬಿ ಯಂತ್ರ ಬಳಸಿ ಕೆನಾಲ್ ಮುಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಸಿ.ಎಸ್.ಪುರ ಹೋಬಳಿ ಚನ್ನೇನಹಳ್ಳಿ ಗ್ರಾಮದ ಬಳಿ ನಡೆದಿದೆ.ಸಿ.ಎಸ್.ಪುರ ಅಮಾನಿಕೆರೆಗೆ ಹೊಂದಿಕೊಂಡಂತೆ ನಡೆದಿರುವ ಕೆನಾಲ್ ಕಾಮಗಾರಿ ಈಗಾಗಲೇ ಪೈಪ್ ಹಾಕುವ ಹಂತ ತಲುಪುತ್ತಿದೆ. ಇತ್ತೀಚಿಗೆ ಸಾವಿರಾರು ರೈತರೊಟ್ಟಿಗೆ ನಡೆದ ಬೃಹತ್ ಪ್ರತಿಭಟನೆ ವೇಳೆ ಕಾಮಗಾರಿ ನಿಲ್ಲಿಸಲು ಜೂನ್ 6 ರ ಗಡುವು ನೀಡಲಾಗಿತ್ತು. ಆದರೆ ಬೃಹತ್ ಪೈಪ್ ತಂದು ಕೆಲಸ ಮುಂದುವರೆಸುವ ಹುನ್ನಾರ ನಡೆಸಿದ ಅಧಿಕಾರಿಗಳು ರೈತರ ಹೋರಾಟಕ್ಕೆ ಬೆಲೆ ನೀಡಿಲ್ಲ. ಈ ನಿಟ್ಟಿನಲ್ಲಿ ಆಕ್ರೋಶಗೊಂಡ ರೈತರು ಶಾಂತಿಯುತ ಪ್ರತಿಭಟನೆಯ ಸ್ವರೂಪ ಬದಲಿಸಿಕೊಂಡು ಕೆನಾಲ್ ಮುಚ್ಚುವ ಹೋರಾಟ ಆರಂಭಿಸಿದ್ದಾರೆ. ಸಾಂಕೇತಿಕ ಹೋರಾಟ ಹಂತ ಹಂತವಾಗಿ ಎಲ್ಲಾ ಕಡೆ ನಡೆಸಲು ನಿರ್ಧರಿಸಲಾಯಿತು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಭೂ ಸ್ವಾಧೀನದ 41 ಹಾಗೂ 61 ಪ್ರಕ್ರಿಯೆ ಯಾವುದೇ ನಡೆದಿಲ್ಲ. ರೈತರಿಗೆ ನೋಟಿಸ್ ನೀಡಿಲ್ಲ. ಸರ್ಕಾರಿ ಜಾಗದಲ್ಲಿ ಕೆಲಸ ಆರಂಭಿಸೋದಕ್ಕೆ ಕಂದಾಯ ಇಲಾಖೆ ಅನುಮತಿ ಸಿಕ್ಕಿಲ್ಲ. ಇವೆಲ್ಲವನ್ನೂ ಜಿಲ್ಲಾಧಿಕಾರಿ ತಹಸೀಲ್ದಾರ್ ಗಮನಿಸಬೇಕಿತ್ತು. ಜಾಣ ಮೌನ ತಾಳಿರುವ ಮೇಲಾಧಿಕಾರಿಗಳು ಸರ್ಕಾರದ ಕೈಗೊಂಬೆ ಎನ್ನುವುದು ಇಲ್ಲಿ ತಿಳಿಯುತ್ತದೆ. ಈಗ ಸಾಂಕೇತಿಕವಾಗಿ ಮಣ್ಣು ಮುಚ್ಚುವ ಕೆಲಸ ಮಾಡಿದ್ದೇವೆ. ಶೀಘ್ರದಲ್ಲಿ ಗುತ್ತಿಗೆದಾರರು ಕೆನಾಲ್ ಮುಚ್ಚಬೇಕು. ಇಲ್ಲವಾದಲ್ಲಿ ಹೋರಾಟದ ಕಿಚ್ಚು ಯಾವುದೇ ಅನಾಹುತಕ್ಕೆ ಕಾರಣವಾದರೂ ಸರ್ಕಾರ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.ಮಾಜಿ ಶಾಸಕ ಮಸಾಲಾ ಜಯರಾಂ ಮಾತನಾಡಿ, ಬೃಹತ್ ಪೈಪ್ ಅಳವಡಿಸಿದರೆ ರೈತರಿಗೆ ಮರಣ ಶಾಸನ ಬರೆದಂತಾಗುತ್ತದೆ. 14 ಅಡಿ ವ್ಯಾಸದ ಪೈಪ್ ಏಕಕಾಲದಲ್ಲಿ 900 ಕ್ಯೂಸೆಕ್ಸ್ ನೀರು ಸೆಳೆಯುವ ತಾಕತ್ತು ಇರುತ್ತದೆ. ಒಂದು ತೊಟ್ಟು ನೀರು ನಮಗೆ ಸಿಗೋದಿಲ್ಲ. ಈಗಾಗಲೇ ಮುಖ್ಯ ನಾಲೆ ಆಧುನೀಕರಣಗೊಂಡಿದೆ. ಕುಣಿಗಲ್ ಭಾಗಕ್ಕೆ ಸರಾಗವಾಗಿ ನೀರು ಹೋಗುತ್ತಿದೆ ಎಂದರು.

ಯಾವ ತೊಂದರೆ ಇಲ್ಲದಿದ್ದರೂ ಈ ಯೋಜನೆ ರೂಪಿಸಿರೋದು ರಾಮನಗರ ಕಡೆ ನೀರು ತೆಗೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ. ಜೊತೆಗೆ ಯಾವ ಇಲಾಖೆ ಅನುಮತಿ ಇಲ್ಲದೆ ಸರ್ಕಾರಿ ಜಾಗ ಕಬಳಿಕೆ, ದೊಡ್ಡ ಮರಗಳು ಕತ್ತರಿಸಿದ್ದಾರೆ. ಜಿಲ್ಲೆಯ ಸಚಿವರು ಕಾಮಗಾರಿ ರದ್ದು ಮಾಡಿಸಲು ಆಗದಿದ್ದರೆ ರಾಜೀನಾಮೆ ನೀಡಿ ಹೋರಾಟಕ್ಕೆ ಬರಲಿ ಎಂದು ಹೇಳಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಬೃಹತ್ ಪೈಪ್‌ಲೈನ್ ಗುರುತ್ವಾಕರ್ಷಣೆಗೆ ಅನುಗುಣವಾಗಿ ಅಳವಡಿಸಿ, ನಮ್ಮ ನಾಲೆಯಿಂದ ಎಲ್ಲಾ ನೀರು ಸೆಳೆಯುವ ಹುನ್ನಾರ ನಡೆದಿದೆ. ಮೂರು ತಿಂಗಳು ಹರಿದರೆ 11 ಟಿಎಂಸಿ ನೀರು ಕುಣಿಗಲ್ ನತ್ತ ಹೋಗಲಿದೆ. ಅವರ ಮೂರು ಟಿಎಂಸಿ ಆಧುನೀಕರಣಗೊಂಡ ನಾಲೆಯ ಮೂಲಕ ಪಡೆಯಲಿ. ಪೈಪ್ ಲೈನ್ ಮೂಲಕ ಯಾವ ಕಡೆ ನೀರು ಹೋಗಲಿದೆ ಎಂಬುದು ಇಲ್ಲಿನ ಎಲ್ಲಾ ರೈತರಿಗೆ ತಿಳಿದಿದೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ತುಟಿ ಬಿಚ್ಚದ ಕಾರಣ ಕೂಡಾ ತಿಳಿದಿದೆ. ನಮ್ಮ ಹೋರಾಟ ನಿರಂತರಕ್ಕೆ ನನ್ನದೇ ಜೆಸಿಬಿ ಯಂತ್ರ ಕಳುಹಿಸುತ್ತೇನೆ. ಕೆನಾಲ್ ಮುಚ್ಚಿಯೇ ಹೋರಾಟ ನಡೆಸೋಣ. ಜೈಲು ಸೇರಿದರೂ ಸರಿ ಯೋಜನೆ ಸ್ಥಗಿತ ಗೊಳಿಸೋಣ ಎಂದರು.ಶಾಸಕ ಕೃಷ್ಣಪ್ಪ ಅವರ ಪುತ್ರ ವೆಂಕಟೇಶ್, ಮುಖಂಡರಾದ ಚನ್ನೇನಹಳ್ಳಿ ನರಸಿಂಹಮೂರ್ತಿ, ಬೋರಪ್ಪನಹಳ್ಳಿ ಕುಮಾರ್, ಜಗದೀಶ್, ತಾಪಂ ಮಾಜಿ ಸದಸ್ಯ ಭಾನುಪ್ರಕಾಶ್, ಸುಶಾಂತ್, ರಾಮಲಿಂಗೇಗೌಡ, ನವೀನ್, ಸದಾಶಿವ, ರಘು ಇತರರು ಇದ್ದರು.

ಮಾಗಡಿ, ರಾಮನಗರಕ್ಕೆ ಕಾವೇರಿ ನೀರು ಹರಿಸಿಕೊಳ್ಳಲಿ: ಕೆರೆ ಜಾಗ ಬಳಸಲು ಸಣ್ಣ ನೀರಾವರಿ ಇಲಾಖೆ ಅನುಮತಿ ಪಡೆದಿಲ್ಲ. ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ಇಲ್ಲ, ಕಂದಾಯ ಇಲಾಖೆಯಿಂದ ಭೂಮಿ ಹಸ್ತಾಂತರ ನಡೆದಿಲ್ಲ. ಹೀಗೆ ಎಲ್ಲಾ ಕಾನೂನು ಗಾಳಿಗೆ ತೂರಿ ಪ್ರಜಾಪ್ರಭುತ್ವ ಕೈಗೆತ್ತಿಕೊಂಡು ಸರ್ವಾಧಿಕಾರ ಧೋರಣೆ ತೋರಿದ್ದಾರೆ. ಕುಣಿಗಲ್‌ಗೆ ನೀರು ಕೊಡಲು ನಮ್ಮ ಅಡ್ಡಿ ಇಲ್ಲ. ನಮ್ಮ ನೀರು ಮುಂದುವರೆದು ಮಾಗಡಿ ಕಡೆ ಹರಿಸಲು ನಮ್ಮ ವಿರೋಧವಿದೆ. ಮಾಗಡಿ, ರಾಮನಗರಕ್ಕೆ ಕಾವೇರಿ ನೀರು ಹರಿಸಿಕೊಳ್ಳಲಿ. ನಮ್ಮ ಹೋರಾಟ ನಿರಂತರ ನಡೆಯಲಿದೆ. ಯೋಜನೆ ಕೈಬಿಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಎಚ್ಚರಿಸಿದರು.