ಸಾರಾಂಶ
ಪಂಚಾಯಿತಿ ಸದಸ್ಯರಿಂದ ಇಒ ಸಿ.ಆರ್.ಪ್ರವೀಣ್ ಗೆ ಮನವಿ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಪುರ ಗ್ರಾಮಪಂಚಾಯಿತಿ ಸ್ಥಿರ ಸ್ವತ್ತುಗಳು ಕಾಣೆಯಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ಮತ್ತು ಪಿಡಿಒ ಅವರ ಕೈವಾಡವಿದೆ ಎಂದು ಆರೋಪಿಸಿ, ಅವರ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕೆಂದು ಪಂಚಾಯಿತಿ ಸದಸ್ಯರು ಇಒ ಸಿ.ಆರ್.ಪ್ರವೀಣ್ ಗೆ ಮನವಿ ಸಲ್ಲಿಸಿದರು.ಈಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಪಿ.ಎಂ.ರಾಜಣ್ಣ ಮಾತನಾಡಿ, ಪಂಚಾಯಿತಿ ಪವರ್ ಜನರೇಟರ್ ಅನ್ನು ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ. ಕುಡಿಯುವ ನೀರಿನ 30 ಪೈಪುಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ತೆಗೆದುಕೊಂಡು ಹೋಗಿದ್ದಾರೆ. ಗ್ರಾಪಂ ಹಳೇ ಕಟ್ಟಡ ಕೆಡವಿದ ನಂತರ ಅಲ್ಲಿದ್ದ ಕಲ್ಲುಗಳನ್ನು ನಿಯಮಾನುಸಾರ ಹರಾಜು ಮಾಡದೆ ಖಾಸಗಿಯಾಗಿ ಶೇಖರಣೆ ಮಾಡಿದ್ದಾರೆ. ಈ ಕುರಿತು ಗ್ರಾಮಸ್ಥರು ಪ್ರಶ್ನೆ ಮಾಡಿದರೆ ಇಲ್ಲಿನ ಪಿಡಿಒ ಸಮರ್ಪಕ ಉತ್ತರ ನೀಡುತ್ತಿಲ್ಲ. ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅವ್ಯವಹಾರ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮಾಜಿ ಸದಸ್ಯರಾದ ಪಿ.ಎಸ್.ಗುರುಮೂರ್ತಿ, ಚಿದಾನಂದ,ಗ್ರಾಮಸ್ಥರಾದ ವಿನಾಯಕ, ರವಿಪ್ರಕಾಶ, ಹರೀಶ, ಸ್ವಾಮಿ ಮತ್ತಿತರರು ಇದ್ದರು.
12ಕೆಕೆಡಿಯು2. ಕಡೂರು ತಾಲೂಕಿನ ಪುರ ಗ್ರಾಮ ಪಂಚಾಯಿತಿ ಸ್ಥಿರ ಸ್ವತ್ತುಗಳು ಕಾಣೆಯಾಗಿರುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪಂಚಾಯಿತಿ ಸದಸ್ಯರು ಇಒ ಓ ಸಿ. ಆರ್.ಪ್ರವೀಣ್ ಗೆ ಮನವಿ ಸಲ್ಲಿಸಿದರು.